ಪೊಲೀಸರಿಗೆ ಸವಾಲಾದ ಇಂಟರ್ನೆಟ್ ಕರೆ

ಹುಬ್ಬಳ್ಳಿ: ಭಗ್ನ ಪ್ರೇಮಿಯೊಬ್ಬ ಮಾಜಿ ಪ್ರೇಯಸಿಗಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ಗೆ ಇಂಟರ್​ನೆಟ್ ಕರೆ ಮಾಡಿ ತೊಂದರೆ ನೀಡುತ್ತಿರುವ ಪ್ರಕರಣ ಪತ್ತೆ ಹಚ್ಚುವುದೆ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಆತ ವಿದೇಶದಲ್ಲಿ ಕುಳಿತು ಇಂಟರ್​ನೆಟ್ ಮೂಲಕ ಕರೆ ಮಾಡುತ್ತಿರುವುದರಿಂದ ಆತನ ವಿಳಾಸ ಪತ್ತೆ ಹಚ್ಚುವುದು ಕೊಂಚ ವಿಳಂಬವಾಗಿದೆ. ಆತನ ಬಂಧನಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ತಿಳಿಸಿದ್ದಾರೆ.
ಗೋವಾ ಮೂಲದ ರಾಸ್ ಡಯಾಸ್ ಗೋವಾ ವಿಮಾನ ನಿಲ್ದಾಣದಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಆ ವೇಳೆ ಅಲ್ಲೇ ಕೆಲಸ ಮಾಡುತ್ತಿದ್ದ ಯುವತಿ ಮತ್ತು ಆತ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಏಕಾಏಕಿ ಯುವತಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವರ್ಗವಾಗಿ ಬಂದ ಬಳಿಕ ರಾಯ್ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಳು.
ನಂತರ ಬೇರೊಬ್ಬರೊಂದಿಗೆ ಆಕೆಯ ವಿವಾಹ ನಿಶ್ಚಯವಾಗಿತ್ತು. ಆ ವಿಚಾರ ತಿಳಿದು ಆತ ಆಕೆಯ ಮೊಬೈಲ್ ಕಿತ್ತುಕೊಂಡು ಹೋಗಿದ್ದ. ಅದರಿಂದ ನಿಲ್ದಾಣದ ಪ್ರಮುಖ ಮೊಬೈಲ್, ದೂರವಾಣಿ ಸಂಖ್ಯೆ ಸಂಗ್ರಹಿಸಿ ಇಂಟರ್​ನೆಟ್ ಕರೆ ಮಾಡಿ ಬೆದರಿಕೆ ಒಡ್ಡುತ್ತಿದ್ದಾನೆ. ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ), ನಿಲ್ದಾಣದ ನಿರ್ದೇಶಕಿ ಅಹಿಲ್ಯಾ ಕಾಕೋಡಿಕರ ಅವರಿಗೂ ಕರೆ ಮಾಡಿ ತೊಂದರೆ ಕೊಡುತ್ತಿದ್ದಾನೆ.
ಆತನಿಂದ ವಿಮಾನ ಹಾರಾಟಕ್ಕೆ ತೊಂದರೆಯಾಗುತ್ತಿದೆ. ಪ್ರೇಯಸಿಗೆ ಫೋನ್ ಕೊಡದಿದ್ದರೆ ಏರ್​ಪೋರ್ಟ್ ಉಡಾಯಿಸುವುದಾಗಿ ಬೆದರಿಕೆ ಒಡ್ಡಿದ್ದ ಎಂದು ಆಗಸ್ಟ್ 14ರಂದು ಸೈಬರ್ ಠಾಣೆಗೆ ದೂರು ನೀಡಿದ್ದರು. ಬಳಿಕ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪಾಸ್​ಪೋರ್ಟ್ ಜಾಲಾಡಬೇಕು
ಭೂಗತ ಪಾತಕಿ ರವಿ ಪೂಜಾರಿ ಇಂಟರ್​ನೆಟ್ ಕಾಲ್ ಮೂಲಕ ರಾಜ್ಯ ಪೊಲೀಸರಿಗೆ ಸವಾಲಾಗಿದ್ದ. ಅದೇ ಮಾದರಿಯಲ್ಲಿ ಭಗ್ನಪ್ರೇಮಿ ವಿಮಾನ ನಿಲ್ದಾಣಕ್ಕೆ ಕಂಟಕವಾಗಿದ್ದಾನೆ. ರವಿ ಪೂಜಾರಿ ಮಾದರಿಯಲ್ಲೇ ಈತನನ್ನು ಬಂಧಿಸಬೇಕಾದ ಅನಿವಾರ್ಯತೆ ಕಮಿಷನರೇಟ್ ಪೊಲೀಸರಿಗೆ ಎದುರಾಗಿದೆ. ಆತನ ಪಾಸ್​ಪೋರ್ಟ್ ಮಾಹಿತಿ ಸಂಗ್ರಹಿಸಬೇಕು. ಯಾವಾಗ ಯಾವ ದೇಶಕ್ಕೆ ಪ್ರಯಾಣ ಬೆಳೆಸಿದ್ದ ಎಂಬಿತ್ಯಾದಿ ಮಾಹಿತಿ ಸಂಗ್ರಹಿಸಬೇಕು. ಬಳಿಕ ರೆಡ್ ಕಾರ್ನರ್ ನೋಟಿಸ್ ಹೊರಡಿಸುವುದು ಅಥವಾ ಆಯಾ ದೇಶದ ಭಾರತೀಯ ರಾಯಭಾರಿ ಕಚೇರಿ ಮೂಲಕ ಆತನನ್ನು ಆ ದೇಶದಿಂದ ಹೊರ ಹಾಕುವಂತೆ ಒತ್ತಡ ಹೇರಿ ಬಂಧಿಸುವ ಜಾಲ ಹೆಣೆಯಬಹುದು.
ಮೋದಿ ಆಗಮನಕ್ಕೂ ತಟ್ಟಿದ ಬಿಸಿ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಫೆ. 10ರಂದು ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. ಭಗ್ನಪ್ರೇಮಿಯ ನಿರಂತರ ಕರೆಗಳಿಂದ ಎಟಿಸಿ ಸಿಬ್ಬಂದಿ ಆತಂಕಕ್ಕೀಡಾಗಿದ್ದಾರೆ. ಈ ಕೂಡಲೇ ಆತನನ್ನು ಬಂಧಿಸಿ ಭವಿಷ್ಯದ ಅವಾಂತರ ತಪ್ಪಿಸಬೇಕು ಎಂಬುದು ನಿಲ್ದಾಣದ ಸಿಬ್ಬಂದಿ ಆಗ್ರಹಿಸಿದ್ದಾರೆ.
ಒಂದೂವರೆ ವರ್ಷದಿಂದ ಈ ರೀತಿಯ ಕರೆಗಳು ಬರುತ್ತಿವೆ. ಕರೆ ಮಾಡಿ ಪ್ರೇಯಸಿಗೆ ಕೊಡದಿದ್ದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾನೆ. ಎಟಿಸಿ ಕೇಂದ್ರಕ್ಕೂ ಕರೆ ಮಾಡುತ್ತಿರುವುದರಿಂದ ಸಮಸ್ಯೆ ಹೆಚ್ಚಾಗಿದೆ. ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
| ಅಹಿಲ್ಯಾ ಕಾಕೋಡಿಕರ, ವಿಮಾನ ನಿಲ್ದಾಣ ನಿರ್ದೇಶಕಿ