ಪೇದೆ ಗೊಂದಿಗೆ ಅಚೀವರ್ಸ್ ಪ್ರಶಸ್ತಿ

ಅಕ್ಕಿಆಲೂರ: ನೇತ್ರ, ರಕ್ತ ಮತ್ತು ದೇಹದಾನ ಕುರಿತು ಜಾಗೃತಿ ಮೂಡಿಸುತ್ತಿರುವ ಗ್ರಾಮದ ಕುಮಾರ ನಗರ ನಿವಾಸಿ, ಪೇದೆ ಕರಬಸಪ್ಪ ಗೊಂದಿ ಅವರಿಗೆ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಲಭಿಸಿದೆ.

ಸಾಮಾಜಿಕ ಪ್ರವೃತ್ತಿಗಳು ಮತ್ತು ಸೇವೆ ಪರಿಗಣಿಸಿ ಐಎಸ್​ಒ (ಇಂಟರನ್ಯಾಷನಲ್ ಸ್ಟಾಂಡರ್ಡ್ ಆರ್ಗನೈಜೇಶನ್) ಸಂಸ್ಥೆ ನೀಡುವ ಪ್ರತಿಷ್ಠಿತ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಯನ್ನು ಗೊಂದಿ ಅವರಿಗೆ ಅವರ ನಿವಾಸದಲ್ಲಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷೆ ಅಂಬಿಕಾ ಹಂಚಾಟೆ ಇತ್ತೀಚೆಗೆ ನೀಡಿ ಗೌರವಿಸಿದರು.

ಆಡೂರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಕರಬಸಪ್ಪ ಗೊಂದಿ, ಪ್ರತಿ ತಿಂಗಳು ತಮ್ಮ ಹಣದಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರ ಏರ್ಪಡಿಸುತ್ತಾರೆ. ಯಾವ ಗುಂಪಿನ ರಕ್ತ ಬೇಕಾದರೂ ಕರಬಸಪ್ಪ ಅವರ ಬಳಿ ಲಭ್ಯವಿರುತ್ತದೆ. ನಿಧನ ಹೊಂದಿದವರ ಮನೆಗಳಿಗೆ ತೆರಳಿ, ನೇತ್ರದಾನ ಮಾಡುವಂತೆ ಕುಟುಂಬಸ್ಥರಿಗೆ ಮನವಿ ಮಾಡುವ ಕರಬಸಪ್ಪ ಈವರೆಗೆ 21 ಮೃತ ವ್ಯಕ್ತಿಗಳ ನೇತ್ರಗಳನ್ನು ಪಡೆದಿದ್ದಾರೆ. ಅನೇಕ ಜನರಿಂದ ದೇಹದಾನ ಮಾಡುವ ಒಪ್ಪಂದಕ್ಕೆ ಸಹಿ ಪಡೆದಿದ್ದಾರೆ.

ಕರಬಸಪ್ಪ ಗೊಂದಿ ಅವರ ಮನೆಗೆ ಯಾರೇ ಬಂದರೂ ಅವರಿಗೆ ಸಸಿ ನೀಡಿ ಸ್ವಾಗತಿಸುತ್ತಾರೆ. ಅಲ್ಲದೆ, ನೀರಿನ ಸಂರಕ್ಷಣೆ ಕುರಿತು ಜನರಿಗೆ ತಿಳಿವಳಿಕೆ ನೀಡುತ್ತಾರೆ. ಕರಬಸಪ್ಪ ಗೊಂದಿ ಅವರ ಕಾರ್ಯ ಮೆಚ್ಚಿ ಪ್ರತಿಷ್ಠಿತ ಕನ್ನಡ ನಕ್ಷತ್ರ, ಶ್ರೇಷ್ಠ ಸಾಮಾಜಿಕ ಪುರಸ್ಕಾರ, ಲಗ್ನಪತ್ರಿಕೆ ರಚನೆಗೆ ಇನ್​ಕ್ರೆಡೆಬಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿ ಅನೇಕ ಪ್ರಶಸ್ತಿಗಳು ಲಭಸಿವೆ.

Leave a Reply

Your email address will not be published. Required fields are marked *