ಪೇಜಾವರ ವಿಶ್ವೇಶತೀರ್ಥರು ಸಮಾಜದ ಆಸ್ತಿ: ಪಲಿಮಾರು ಶ್ರೀ

ಉಡುಪಿ: ಕೆಲವರು ಸಂನ್ಯಾಸ ಬಯಸಿ ಪಡೆಯುತ್ತಾರೆ. ಆದರೆ ಪೇಜಾವರ ಶ್ರೀಗಳಿಗೆ ಸಂನ್ಯಾಸ ಒಲಿದು ಬಂದಿದೆ. ಅವರು ಸಂನ್ಯಾಸಕ್ಕೆ ಗೌರವ ತರುವ ರೀತಿಯಲ್ಲಿ ಬದುಕಿದ್ದು, ಸಮಾಜದ ಆಸ್ತಿಯಾಗಿ ಕಂಗೊಳಿಸುತ್ತಿದ್ದಾರೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದರು.

ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಸಂಗ್ರಹಿಸಿದ ಪೇಜಾವರ ಹಿರಿಯ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಎ ಡೇ ವಿದ್ ದ ಸೇಂಟ್ ದೆನ್ ಆ್ಯಂಡ್ ನೌ ಛಾಯಾಚಿತ್ರ ಸಂಪುಟ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಛಾಯಾಗ್ರಹಣ ಅತ್ಯಂತ ಸೂಕ್ಷ್ಮ ಕೆಲಸವಾಗಿದ್ದು, ಒಂದು ಕ್ಷಣ ಮೈಮರೆತರೂ ಮತ್ತೆ ಅಂಥ ಅವಕಾಶ ಲಭ್ಯವಾಗದು. ಈ ನಿಟ್ಟಿನಲ್ಲಿ ಪೇಜಾವರ ಶ್ರೀಗಳ ದಿನದ ಚಿತ್ರವನ್ನು ಸೆರೆಹಿಡಿಯುವುದು ಮಹತ್ವದ ಕಾರ್ಯ ಎಂದರು.

ಸಂಸ್ಕೃತ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಚಿತ್ರಸಂಪುಟ ಬಿಡುಗಡೆ ಮಾಡಿದರು.

ಹಿರಿಯ ಪತ್ರಕರ್ತೆ ಡಾ.ಸಂಧ್ಯಾ ಪೈ, ಮಣಿಪಾಲದ ‘ಮಾಹೆ’ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಮೋಹನ್ ಆಳ್ವ, ಮಣಿಪಾಲ ಮೀಡಿಯಾ ನೆಟ್‌ವರ್ಕ್ ಸಿ.ಇ.ಒ ವಿನೋದ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಸ್ವಾಗತಿಸಿದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು. ಛಾಯಾಚಿತ್ರ ಪತ್ರಕರ್ತ ಜನಾರ್ದನ ಕೊಡವೂರು ವಂದಿಸಿದರು.

ಕ್ಯಾಲೆಂಡರ್ ಪ್ರಕಾರ ಏ.27ರಂದು ಪೇಜಾವರ ಶ್ರೀಗಳ ಜನ್ಮದಿನ. ಹೀಗಾಗಿ ಕಾರ್ಯಕ್ರಮದಲ್ಲಿ ತಾವರೆಯ ಪಲ್ಲಕ್ಕಿಯಲ್ಲಿ ಪೇಜಾವರ ಶ್ರೀಗಳನ್ನು ಕುಳ್ಳಿರಿಸಿ, ಪರ್ಯಾಯ ಪಲಿಮಾರು ಶ್ರೀಗಳು ಶಾಲು ಹೊದೆಸಿ, ಪುಷ್ಪ ವೃಷ್ಟಿಗೈದು ಸನ್ಮಾನಿಸಿದರು.

ಜನರಿಗೆ ಕಾಣುವ ಮುಖ, ಜನರು ನಮ್ಮನ್ನು ನೋಡುವ ಮುಖ, ನಿಜವಾದ ವ್ಯಕ್ತಿತ್ವ ಹೀಗೆ ಮನುಷ್ಯನಿಗೆ 3 ವ್ಯಕ್ತಿತ್ವಗಳಿರುತ್ತವೆ. ಆತ್ಮವಿಮರ್ಶೆ ಮೂಲಕ ಕೊರತೆ, ದೌರ್ಬಲ್ಯಗಳನ್ನು ಅರಿತುಕೊಳ್ಳಬೇಕು. ಚಿತ್ರಸಂಪುಟದ ಮೂಡಿಬಂದಿರುವ ಉತ್ತಮ ಚಿತ್ರಗಳು ನನ್ನನ್ನು ಭಾವನಾತ್ಮಕ ಲೋಕಕ್ಕೆ ಕರೆದುಕೊಂಡು ಹೋಗಿದೆ.
|ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠಾಧೀಶ