More

  ‘ಪೃಥು’ರಾಜನಿಂದ ‘ಪೃಥ್ವಿ’ಯಾದ ಭೂಮಂಡಲ

  ರಾಜ್ಯಪಾಲನೆಯ ಕುರಿತು ಭೀಷ್ಮನು ಯುಧಿಷ್ಠಿರನಿಗೆ ಹೇಳುತ್ತಿದ್ದ ವಿವರಣೆಯನ್ನು ಹೀಗೆ ಮುಂದುವರಿಸಿದನು

  ‘ಕುರುಕುಲ ಶ್ರೇಷ್ಠ ಯುಧಿಷ್ಠಿರ! ‘ರಾಜ’ಪಟ್ಟವನ್ನು ಏರಿದ ಪೃಥುಮಹಾರಾಜನು ಸದಾಕಾಲ ವೇದವಿದರಾದ ವಿಪ್ರರಿಗೆ ಯಾವುದೇ ‘ಕ್ಷತ’ (ತೊಂದರೆ) ಉಂಟಾಗದಂತೆ ನೋಡಿಕೊಳ್ಳುತ್ತಿದ್ದನು. ಆ ಕಾರಣದಿಂದಲೇ ಅವನು ‘ಕ್ಷತ್ರಿಯ’ ಎಂಬ ವಿಶೇಷಣವನ್ನು ಪಡೆದನು. ಅವನು ಈ ಭೂಮಂಡಲವನ್ನು ಧರ್ಮದ ಮೂಲಕವೇ ಪ್ರತಿಷ್ಠಾಪನೆಗೊಳಿಸಿ ಖ್ಯಾತಿ ಹೊಂದಿದ್ದರಿಂದಲೇ ಈ ಭೂಮಂಡಲಕ್ಕೆ ‘ಪೃಥ್ವಿ’ ಎಂಬ ಅನ್ವರ್ಥಕ ನಾಮವು ಉಂಟಾಯಿತು. ಪೃಥುವಿನ ಆಳ್ವಿಕೆಯ ವೈಖರಿಯನ್ನು ಕಂಡು ಭಗವಾನ್ ಮಹಾವಿಷ್ಣುವು ಸಂತುಷ್ಟನಾದನು.

  ‘ಯಾರು ಕೂಡ ನಿನ್ನ ಆಜ್ಞೆಯನ್ನು ಉಲ್ಲಂಘಿಸಲು ಸಾಧ್ಯವಾಗದಿರಲಿ’ ಎಂದು ವರವನ್ನಿತ್ತು ಹರಸಿದನು ಹಾಗೂ ತನ್ನ ತೇಜಸ್ಸನ್ನು ಅವನೊಳಗೆ ತುಂಬಿದನು. ಯುಧಿಷ್ಠಿರ! ನೀನು ಕೂಡ ಈ ಅರಿವನ್ನು ಹೊಂದಿರಬೇಕು. ಸದಾ ದಂಡನೀತಿಯ ಸಂಯುಕ್ತ ಅನುಸರಣೆಯ ಮೂಲಕ ಸಂಪೂರ್ಣ ರಾಷ್ಟ್ರದ ಸಂರಕ್ಷಣೆಯನ್ನು ಮಾಡುತ್ತಿರಬೇಕು.

  ಸುಯೋಗ್ಯರೂ ಸಮರ್ಥರೂ ಆದ ಗುಪ್ತಚರರನ್ನು ನಿಯುಕ್ತಿಗೊಳಿಸಿಕೊಂಡು ರಾಜ್ಯದ ಸ್ಥಿತಿ-ಗತಿ-ಅವಸ್ಥೆಗಳತ್ತ ನಿನ್ನ ಲಕ್ಷ್ಯನ್ನು ಇರಿಸಿಕೊ. ರಾಜನಾದವನು ತನ್ನ ಚಿತ್ತ ಮತ್ತು ಕ್ರಿಯೆಯನ್ನು ಸರ್ವ ಹಿತ ಮತ್ತು ಸಮಭಾವಪೂರಿತವಾಗಿ ಇರಿಸಿಕೊಂಡು ಗೈಯುವ ಕರ್ಮಗಳೆಲ್ಲವೂ ಸಹಜ ರೀತಿಯಲ್ಲಿ ತಾನಾಗಿಯೇ ಎಲ್ಲ ಪ್ರಜೆಗಳ ಹಿತವನ್ನು ಕಾಯುತ್ತವೆ. ಅಗತ್ಯವಾದ ಅರ್ಥ ಸಂಪತ್ತು ಕೂಡ ಧರ್ಮಕಾರ್ಯದ ಮೂಲಕವೇ ‘ಶ್ರೀ’ದೇವಿಯಿಂದ ಲಭಿಸುತ್ತಿರುತ್ತದೆ.

  ಶುಭಕರ್ಮದ ಫಲವು ಯಾವಾಗಲೂ ಕೂಡ ಶುಭವೇ ಆಗಿರುತ್ತದೆ. ಆ ಕಾರಣದಿಂದಲೇ – ರಾಜನು ಅನ್ಯ ಮನುಷ್ಯರಂತೆಯೇ ಕಾಣುತ್ತಿದ್ದರೂ ‘ರಾಜ’ ಎಂಬ ಸಮ್ಮಾನವನ್ನು, ಗೌರವವನ್ನು ನೀಡಿ ಅವನ ಆಜ್ಞೆಯನ್ನು ಪಾಲಿಸುತ್ತಾರೆ. ದಂಡನೀತಿಯ ಹಾಗೂ ಮಹತ್ವಪೂರ್ಣ ನೀತಿಶಾಸ್ತ್ರದ ಪಾಲನೆ, ನ್ಯಾಯೋಚಿತ ವರ್ತನೆಗಳು ಜನರಲ್ಲಿ ಪ್ರಚುರಗೊಂಡು ರಾಜನ ಕುರಿತು ಗೌರವ-ಆದರಗಳನ್ನು ವೃದ್ಧಿಸುತ್ತದೆ. ರಾಜನ ಯಶಸ್ಸಿನಲ್ಲಿ ದಂಡನೀತಿಯ ಪ್ರಭಾವವು ಜಗತ್ತಿನಲ್ಲಿಯೇ ವ್ಯಾಪಿಸುತ್ತದೆ.

  ಯುಧಿಷ್ಠಿರ! ಮೂಲದಲ್ಲಿ ಬ್ರಹ್ಮದೇವನಿಂದ ರಚಿತವಾಗಿದ್ದ ನೀತಿಶಾಸ್ತ್ರದಲ್ಲಿ ಪುರಾಣಶಾಸ್ತ್ರ, ಮಹರ್ಷಿಗಳ ಪ್ರಾದುರ್ಭಾವ, ತೀರ್ಥಗಳು, ನಕ್ಷತ್ರಸಮೂಹಗಳ ವೈಶಿಷ್ಟ್ಯ ಹಾಗೂ ಬ್ರಹ್ಮಚರ್ಯಾದಿ ನಾಲ್ಕು ಆಶ್ರಮಗಳ ಪರಿಕಲ್ಪನೆ ಇತ್ಯಾದಿ ಎಲ್ಲವುಗಳ ಕುರಿತು ಸಮಗ್ರವಾಗಿ ಪ್ರತಿಪಾದನೆ ಗೈದಿರುವುದು ಪ್ರಕೃತಕ್ಕೂ, ಭವಿಷ್ಯದಲ್ಲಿಯೂ ಮನನೀಯವಾಗಿದೆ. ಇತಿಹಾಸ, ಚತುರ್ವೆದ ಶಾಸ್ತ್ರ, ನ್ಯಾಯಶಾಸ್ತ್ರ ಮುಂತಾದವುಗಳ ಬಗೆಗೂ ಆ ನೀತಿಶಾಸ್ತ್ರದಲ್ಲಿ ನಿರ್ದೇಶನ-ನಿರೂಪಣೆ ಲಭ್ಯವಿದೆ.

  ತಪಸ್ಸು, ಜ್ಞಾನ, ಸಾಧನೆ, ಅಹಿಂಸೆ, ಸತ್ಯ-ಅಸತ್ಯಗಳ ಕುರಿತು ನಿರ್ಲಿಪ್ತ ಮನೋಭಾವದಿಂದ ಅಂತರವನ್ನು ಇರಿಸಿಕೊಂಡು ನಡೆಯುವವರಿಗೂ, ವೃದ್ಧರಿಗೂ ಹಿತರಕ್ಷಣೆಯನ್ನು ನೀಡಬೇಕು. ಅಂಥವರಿಗೆ ದಾನರೂಪದಲ್ಲಿ ಧನಧಾನ್ಯಗಳನ್ನು ನೀಡುತ್ತ ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಹಾಗೂ ಸಕಲ ಪ್ರಾಣಿಗಳ ಮೇಲೂ ದಯೆಯ ದೃಷ್ಟಿಯುಳ್ಳಂತಹ ಕಾರ್ಯಗಳನ್ನು ಕೈಗೊಳ್ಳುವುದು ಕೂಡ ಬ್ರಹ್ಮದೇವನಿಂದ ರಚಿತವಾದ ನೀತಿಶಾಸ್ತ್ರವು ನಿರ್ದೇಶಿಸಿದೆ.

  ಯುಧಿಷ್ಠಿರ! ಹೆಚ್ಚೇನು ಹೇಳಲಿ? ನೀತಿಶಾಸ್ತ್ರದ ಸಾರವನ್ನು ಹೇಳುವುದಾದರೆ – ಬ್ರಹ್ಮದೇವನು ನೀಡಿರುವ ನೀತಿಶಾಸ್ತ್ರದಲ್ಲಿ ಪೃಥ್ವಿಯ ಮೇಲಿನ ಸಕಲರಿಗೂ ಹಿತವನ್ನು ಉಂಟುಮಾಡುವ ಉದ್ದೇಶ ತುಂಬಿದೆ. ಜಗತ್ತಿಗೆಲ್ಲ ಪ್ರಾಜ್ಞರು, ಮಹಾತ್ಮರು ಇದೊಂದು ಪರಿಪೂರ್ಣ ಶಾಸ್ತ್ರವೆಂದೂ, ಇದನ್ನು ಅನುಸರಿಸಿರುವ ಪ್ರಜಾಪತಿಯಾದ ರಾಜನು ದೇವತೆಗಳಿಗೆ ಸಮಸಮಾನನು ಎಂದೂ ಘೊಷಿಸಿ ಕೊಂಡಾಡಿರುವರು.’

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts