ಹನೂರು: ತಾಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಷ್ಪಪುರ ಗ್ರಾಮದಲ್ಲಿ 2 ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಜನರು ನೀರಿಗಾಗಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಲ್ಲಿ ಕೊರಮ ಶೆಟ್ಟರು ಸಮುದಾಯಕ್ಕೆ ಸಮಾರು 70 ಕುಟುಂಬಗಳಿದ್ದು, 300ಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಇಲ್ಲಿನ ಬಹುತೇಕ ಜನರು ಬಡವರಾಗಿದ್ದು, ಕೂಲಿಯನ್ನೇ ನಂಬಿ ಜೀವನ ಸಾಗುತ್ತಿದ್ದಾರೆ. ಗ್ರಾಮದಲ್ಲಿ ಕುಡಿಯುವ ನೀರಿಗಾಗಿ 7 ತೊಂಬೆ ನಿರ್ಮಿಸಲಾಗಿದೆ. ಆದರೆ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ 2 ತಿಂಗಳಿನಿಂದ ಎಲ್ಲ ತೊಂಬೆಗಳಿಗೂ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ. ವಿದ್ಯುತ್ ಇರುವ ವೇಳೆಯಲ್ಲಿ 3 ತೊಂಬೆಗಳಲ್ಲಿ ಮಾತ್ರ ಕೆಲಕಾಲ ನೀರು ಬರುತ್ತಿದ್ದು, ಜನಸಂಖ್ಯೆಗೆ ಅನುಗುಣವಾಗಿ ಸಾಕಾಗುತ್ತಿಲ್ಲ. ಇದರಿಂದ ನೀರು ಬಿಟ್ಟ ವೇಳೆ ಮಹಿಳೆಯರು ತೊಂಬೆಗಳ ಬಳಿ ನೀರಿಗಾಗಿ ಕಾದು ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಲವರು ವಿದ್ಯುತ್ ಇರುವ ವೇಳೆ ತೋಟದ ಜಮೀನಿನ ಪಂಪ್‌ಸೆಟ್‌ಗಳಿಗೆ ತೆರಳಿ ನೀರನ್ನು ಹೊತ್ತು ತರಬೇಕಿದೆ. ಈ ಬಗ್ಗೆ ಗ್ರಾಪಂ ಗಮನಕ್ಕೆ ತಂದಿದ್ದರೂ ಕ್ರಮಕೈಗೊಂಡಿಲ್ಲ. ಇನ್ನೂ ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಸುವಂತೆ ಒತ್ತಾಯಿಸಿದ್ದಾರೆ.
ತೊಂಬೆಯ ಬಳಿ ಅಶುಚಿತ್ವ: ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಮೀಪದ ತೊಂಬೆ ಬಳಿ ತ್ಯಾಜ್ಯ ಸಂಗ್ರಹವಾಗಿದೆ. ಇದರಿಂದಾಗಿ ಅಶುಚಿತ್ವ ಮನೆ ಮಾಡಿದೆ.
ತೊಂಬೆಗಳಲ್ಲಿ 2 ತಿಂಗಳಿನಿಂದ ಸಮರ್ಪಕವಾಗಿ ನೀರು ಬರುತ್ತಿಲ್ಲ. ಇದರಿಂದ ಕುಡಿಯುವ ನೀರಿಗಾಗಿ ಜಮೀನುಗಳಿಗೆ ಅಲೆಯುವಂತಾಗಿದ್ದು, ಬಿಂದಿಗೆ ನೀರಿಗೂ ತುಂಬಾ ತೊಂದರೆಪಡುತ್ತಿದ್ದೇವೆ. ಆದ್ದರಿಂದ ಗ್ರಾಪಂ ಈ ಬಗ್ಗೆ ಗಮನಹರಿಸಿ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು.
ನಾಗಮ್ಮ, ಪುಷ್ಪಪುರ ಗ್ರಾಮ
ಪುಷ್ಪಪುರ ಗ್ರಾಮದ ತೊಂಬೆಗಳಿಗೆ 3 ಬೋರ್‌ವೆಲ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಅಂತರ್ಜಲ ಕುಸಿತದಿಂದಾಗಿ ನೀರಿನ ಸಮಸ್ಯೆ ತಲೆದೋರಿದೆ. ಗ್ರಾಮದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಪ್ರಗತಿಯಲ್ಲಿದ್ದು, ಮನೆಗಳಿಗೆ ನಲ್ಲಿ ಅಳವಡಿಸಿದ ತಕ್ಷಣವೇ ಓವರ್‌ಹೆಡ್ ಟ್ಯಾಂಕ್‌ನಿಂದ ನೀರು ಪೂರೈಸಲಾಗುವುದು.
ರಾಮು, ಪಿಡಿಒ ಶಾಗ್ಯ ಗ್ರಾಪಂ.