ಪುರಾಣ ಪ್ರವಚನದಿಂದ ಶಾಂತಿ, ನೆಮ್ಮದಿ ಪ್ರಾಪ್ತಿ

ಲಕ್ಷ್ಮೇಶ್ವರ: ದೇವಾನುದೇವತೆಗಳ ಪುರಾಣ ಪ್ರವಚನ, ಪುಣ್ಯಕಥೆಗಳನ್ನು ಕೇಳುವುದರಿಂದ ಮನಸ್ಸಿನ ದುಃಖ ದುಮ್ಮಾನಗಳು ಕಳೆದು ಶಾಂತಿ, ನೆಮ್ಮದಿ, ಸದ್ಗುಣ, ಸದ್ವಿಚಾರ, ನಿರ್ಮಲಶುದ್ಧ ಮನಸ್ಸು ಹೊಂದಲು ಸಾಧ್ಯವಾಗುತ್ತದೆ ಎಂದು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ಶ್ರೀಗಳು ಹೇಳಿದರು.

ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡ ಪಂ.ಪುಟ್ಟರಾಜ ಕವಿ ಗವಾಯಿಗಳವರ 8ನೇ ಪುಣ್ಯಸ್ಮರಣೋತ್ಸವ ಹಾಗೂ ಶಿವಶರಣೆ ಗುಡ್ಡಾಪುರ ದಾನಮ್ಮದೇವಿಯ ಜೀವನ ದರ್ಶನ ಪ್ರವಚನ ಪ್ರಾರಂಭೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕೃಷಿ ಪ್ರಧಾನವಾದ ನಾಡಿನಲ್ಲಿ ಸಂಪ್ರದಾಯ, ಧರ್ಮಕಾರ್ಯ-ಆಚರಣೆ, ಪುರಾಣ-ಪ್ರವಚನ ಹಮ್ಮಿಕೊಳ್ಳುವ ಮೂಲಕ ಪಾಪ ಕಳೆದುಕೊಂಡು ಮೈ-ಮನಗಳಿಗೆ ಚೈತನ್ಯ ಕಂಡುಕೊಳ್ಳಬೇಕು. ಆ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳನ್ನೊಳಗೊಂಡ ಶಿಕ್ಷಣ ಕೊಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪಂಚಾಕ್ಷರಯ್ಯ ಹಿರೇಮಠ ಮಾತನಾಡಿ, ಗ್ರಾಮದಲ್ಲಿ ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯಸ್ಮರಣೋತ್ಸವ ಅಂಗವಾಗಿ ಪಂ. ಪುಟ್ಟರಾಜ ಸಂಗೀತ ಶಿಕ್ಷಣ ಮತ್ತು ಸೇವಾ ಸಮಿತಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಡಿ.14ರಿಂದ ದಾನಮ್ಮದೇವಿ ಪುರಾಣ ಪ್ರವಚನ ಹಮ್ಮಿಕೊಳ್ಳಲಾಗಿದೆ. ಡಿ.25ರಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ, ದಾನಮ್ಮದೇವಿ ಪುರಾಣ ಮಂಗಲೋತ್ಸವ, ಭಾವಚಿತ್ರದ ಮೆರವಣಿಗೆ ಶ್ರದ್ಧಾಭಕ್ತಿಯಿಂದ ಅದ್ದೂರಿಯಾಗಿ ನೆರವೇರಿಸಲಾಗುವುದು. ಬಳಿಕ ಹರಗುರುಚರಮೂರ್ತಿಗಳ ಉಪಸ್ಥಿತಿಯಲ್ಲಿ ಧರ್ಮಸಭೆ ಜರುಗುವುದು. ಈ ಧಾರ್ವಿುಕ ಕಾರ್ಯದಲ್ಲಿ ಭಕ್ತರು, ಧರ್ವಭಿಮಾನಿಗಳು ಪಾಲ್ಗೊಳ್ಳಬೇಕು ಎಂದು ಕೋರಿದರು.

ಸಿದ್ದಾಪುರದ ಶಿವಲಿಂಗಯ್ಯ ಶಾಸ್ತ್ರಿಗಳು ಮಾತನಾಡಿದರು. ವೀರೇಶ್ವರ ಪುಣ್ಯಾಶ್ರಮದ ಸದಾನಂದ ಶಾಸ್ತ್ರಿಗಳು ಪ್ರವಚನ ನೀಡಿದರು.

ಪುಟ್ಟರಾಜ ಸೇವ ಸಮಿತಿಯವರು, ಗ್ರಾಮದ ಹಿರಿಯರು, ಮುಖಂಡರು ಪಾಲ್ಗೊಂಡಿದ್ದರು. ಫಕೀರೇಶ ಜವಳಿ, ಆರ್.ಬಿ. ಅಜ್ಜನಗೌಡ್ರ ಕಾರ್ಯಕ್ರಮ ನಿರ್ವಹಿಸಿದರು.