ಪುರಸಭೆ ಚುನಾವಣೆ ಬಹಿರಂಗ ಪ್ರಚಾರ ಅಂತ್ಯ

ಕೋಲಾರ: ಮಾಲೂರು, ಬಂಗಾರಪೇಟೆ ಹಾಗೂ ಶ್ರೀನಿವಾಸಪುರ ಪುರಸಭೆಗೆ ಮೇ 29ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಮೇ 27ರ ಬೆಳಗ್ಗೆ 7 ಗಂಟೆಯಿಂದ ಮತದಾರರಲ್ಲದವರು ವಾರ್ಡ್ ಒಳಗೆ ಇರತಕ್ಕದ್ದಲ್ಲ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚಿಸಿದ್ದಾರೆ.

ಮತದಾನ ಪ್ರಾರಂಭವಾಗುವ 48 ಗಂಟೆಗಳ ಮುಂಚೆ ಅಂದರೆ ಮೇ 27ರ ಬೆಳಗ್ಗೆ 7 ಗಂಟೆ ನಂತರ ಯಾವುದೇ ರಾಜಕೀಯ ಪಕ್ಷ ,ಅಭ್ಯರ್ಥಿ ಅಥವಾ ಬೆಂಬಲಿಗರು ಸಾರ್ವಜನಿಕ ಸಭೆ, ಸಮಾರಂಭ, ಚುನಾವಣಾ ಪ್ರಚಾರ ಮಾಡುವಂತಿಲ್ಲ ಎಂದಿದ್ದಾರೆ.

ಮತದಾರರಿಗೆ ಮೊಬೈಲ್ ಮೂಲಕ ಎಸ್​ಎಂಎಸ್ ಕಳುಹಿಸುವ ಮೂಲಕ ಪ್ರಚಾರ ಮಾಡುವಂತಿಲ್ಲ. ಮಾಧ್ಯಮಗಳ ಮೂಲಕ ಪ್ರಚಾರ ಮಾಡುವಂತಿಲ್ಲ. ಮತದಾರರಿಗೆ ವೀಡಿಯೋ ಕ್ಲಿಪ್ಪಿಂಗ್ಸ್ ಪ್ರದರ್ಶಿಸುವಂತಿಲ್ಲ. ದಿನಪತ್ರಿಕೆಗಳಲ್ಲಿ ಜಾಹೀರಾತು ಹೊರಡಿಸುವಂತಿಲ್ಲ ಹಾಗೂ ನೀತಿಸಂಹಿತೆ ಉಲ್ಲಂಘನೆಯಾಗದಂತೆ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ವೀಕ್ಷಕರ ನೇಮಕ; ಚುನಾವಣೆ ಶಾಂತಿಯುತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಹಾಗೂ ಚುನಾವಣೆ ಕಾರ್ಯಚಟುವಟಿಕೆಗಳ ನಿರ್ವಹಣೆಯ ಮೇಲ್ವಿಚಾರಣೆ ಕೈಗೊಳ್ಳಲು ರಾಜ್ಯ ಚುನಾವಣಾ ಆಯೋಗ ಚುನಾವಣಾ ಸಾಮಾನ್ಯ ವೀಕ್ಷಕರು ಮತ್ತು ಚುನಾವಣಾ ವೆಚ್ಚ ವೀಕ್ಷಕರನ್ನು ನೇಮಿಸಿದೆ.

ಚುನಾವಣಾ ಸಾಮಾನ್ಯ ವೀಕ್ಷಕರಾಗಿ ವಸತಿ ಇಲಾಖೆ ಸರ್ಕಾರದ ಉಪಕಾರ್ಯದರ್ಶಿ ಆರ್.ಶಿಲ್ಪಾ(ದೂರವಾಣಿ ಸಂಖ್ಯೆ: 9900082469) ಇವರನ್ನು ನೇಮಿಸಿದ್ದು, ಕೋಲಾರದ ಪ್ರವಾಸಿ ಮಂದಿರ ಕೊಠಡಿ ಸಂ.7,ರಲ್ಲಿ ವಾಸ್ತವ್ಯವಿರುತ್ತಾರೆ. ದೂರವಾಣಿ ಸಂಖ್ಯೆ: 08152-297013ರ ಮೂಲಕ ಸಂರ್ಪಸಬಹುದು.

ಚುನಾವಣಾ ವೆಚ್ಚ ವೀಕ್ಷಕರಾಗಿ ಚಿತ್ರದುರ್ಗದ ಸ್ಥಳೀಯ ಲೆಕ್ಕಪರಿಶೋಧನಾ ವರ್ತಲದ ಹಿರಿಯ ಉಪ ನಿರ್ದೇಶಕ ಡಿ.ಆರ್.ಮಧು (ದೂರವಾಣಿ ಸಂಖ್ಯೆ: 9164897049) ನೇಮಕಗೊಂಡಿದ್ದಾರೆ. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ವೀಕ್ಷಕರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *