ಪುರಸಭೆ ಎದುರು ಅನಿರ್ದಿಷ್ಟಾವಧಿ ಧರಣಿ

ರೋಣ: ಪುರಸಭೆಯ ಹೊರಗುತ್ತಿಗೆ ಪೌರ ಕಾರ್ವಿುಕರ ವೇತನ ವಿಳಂಬ ಹಾಗೂ ಅವರನ್ನು ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಪೌರ ಕಾರ್ವಿುಕರು ಪುರಸಭೆ ಎದುರು ಗುರುವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಧರಣಿಗೆ ಬೆಂಬಲ ವ್ಯಕ್ತಪಡಿಸಿದ ಡಿಎಸ್​ಎಸ್ ಮುಖಂಡ ಪ್ರಕಾಶ ಹೊಸಳ್ಳಿ ಮಾತನಾಡಿ, 2006ರಲ್ಲಿ ಹೊರಗುತ್ತಿಗೆ ಪೌರ ಕಾರ್ವಿುಕರಾಗಿ ನಿಯುಕ್ತಿಗೊಂಡ 7 ಮಹಿಳೆಯರು ಸೇರಿ ಒಟ್ಟು 12 ಜನ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ 10 ತಿಂಗಳಿಂದ ಸಂಬಳ ನೀಡದೆ, ಏಕಾಏಕಿ ಕೆಲಸದಿಂದ ವಜಾ ಮಾಡಿದ ಪರಿಣಾಮ ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರೇಮವ್ವ ದೊಡ್ಡಮನಿ ಮಾತನಾಡಿ. ನನ್ನ ದುಡಿಮೆಯಲ್ಲಿಯೇ ಕುಟುಂಬವನ್ನು ಸಲಹುತ್ತಿದ್ದೇನೆ. ನಮಗೆ ದುಡಿದ ಸಂಬಳವನ್ನು ನೀಡದೆ ಏಕಾಏಕಿ ಕೆಲಸದಿಂದ ವಜಾಗೊಳಿಸಿದ್ದಾರೆ. ಹದಿನೈದು ದಿನಗಳಿಂದ ನನ್ನ ತಾಯಿಯ ಕಾಯಿಲೆ ಹೆಚ್ಚಾಗಿದೆ. ನಮಗೆ ದಿಕ್ಕು ತೋಚದಂತಾಗಿದೆ ಎಂದು ನೋವು ತೋಡಿಕೊಂಡರು.
ಬಸವರಾಜ ಚಲವಾದಿ, ಮಲ್ಲಪ್ಪ ಮುದೇನಗುಡಿ, ಮಂಜು ಹೊಸಮನಿ, ಮೇಘರಾಜ ತೆಗ್ಗಿನಮನಿ, ಗಂಗವ್ವ ಹಲಗಿ, ಮಂಜಪ್ಪ ಪೂಜಾರ, ದೇವಕ್ಕ ಪೂಜಾರ, ಪ್ರೇಮವ್ವ ದೊಡ್ಡಮನಿ, ಜಯವ್ವ ಹಾದಿಮನಿ, ಬಸವ್ವ ಪೂಜಾರ, ಬಸವ್ವ ಹಿರೇಮನಿ ಹಾಗೂ ದಲಿತ ಸಂಘಟನೆಯ ಮುಖಂಡರಾದ ಮಲ್ಲು ಮಾದರ, ಇತರರಿದ್ದರು

Leave a Reply

Your email address will not be published. Required fields are marked *