ಲಕ್ಷ್ಮೇಶ್ವರ: ಪುರಸಭೆಯ ಸಹಾಯಕ ಇಂಜಿನಿಯರ್ ಅವರನ್ನು ಸಿನಿಮೀಯ ರೀತಿಯಲ್ಲಿ ಕಾರಿನಲ್ಲಿ ಹೊತ್ತೊಯ್ದು, ಹಲ್ಲೆ ಮಾಡಿ, ಕಟ್ಟಡ ನಿರ್ಮಾಣ ಪರವಾನಗಿಗೆ ಬಲವಂತದಿಂದ ಸಹಿ ಪಡೆದು ಶಿಗ್ಗಾಂವಿ ಬಳಿ ಬಿಟ್ಟು ಹೋದ ಘಟನೆ ಗುರುವಾರ ಜರುಗಿದೆ.
ಈಶ್ವರ ನಗರದಲ್ಲಿ ಮನೆ ನಿರ್ವಿುಸುತ್ತಿದ್ದ ಶಿಕ್ಷಕ ಎಸ್.ಬಿ. ಅಣ್ಣಿಗೇರಿ ಮತ್ತು ಆತನ ಸಹೋದರ ಸೈನಿಕ ಸೇವೆಯಲ್ಲಿರುವ ಆಯ್.ಬಿ. ಅಣ್ಣಿಗೇರಿ ಅವರು ಪರವಾನಗಿ ಪಡೆಯಲು ಇಂಜಿನಿಯರ್ ಎಸ್.ಬಿ. ಮರಿಗೌಡರ ಅವರ ಬಳಿ ಹಲವಾರು ತಿಂಗಳಿಂದ ಎಡತಾಕಿದ್ದಾರೆ. ಗುರುವಾರ ಇಂಜಿನಿಯರ್ ಮರಿಗೌಡರ ಅವರು ಲಕ್ಷ್ಮೇಶ್ವರದ ಹುಬ್ಬಳ್ಳಿ ರಸ್ತೆಯಲ್ಲಿರುವ ಖಾನಾವಳಿಯೊಂದರಲ್ಲಿ ಊಟ ಮಾಡುತ್ತಿದ್ದಾರೆ ಎಂಬ ಸುದ್ದಿ ತಿಳಿದ ಸಹೋದರರು ಅಲ್ಲಿಗೆ ಬಂದು ಊಟ ಮಾಡಿದ ನಂತರ ಇಂಜಿನಿಯರ್ ಜತೆ ವಾಗ್ವಾದಕ್ಕಿಳಿದಿದ್ದಾರೆ.
‘ಕಟ್ಟಡ ಪರವಾನಗಿಗೆ ಆನ್ಲೈನ್ ವ್ಯವಸ್ಥೆ ಜಾರಿಯಲ್ಲಿದ್ದು ಮ್ಯಾನ್ಯುವಲ್ ಆಗಿ ನೀಡಲು ಅವಕಾಶವಿಲ್ಲ. ಅಲ್ಲದೆ, ನಿಯಮಾವಳಿ ಅನುಸಾರ ನೀವು ಪರವಾನಗಿ ಪಡೆಯಿರಿ’ ಎಂದು ಮರಿಗೌಡರ ಅವರು ಅಣ್ಣಿಗೇರಿ ಸಹೋದರರಿಗೆ ಸೂಚಿಸಿದ್ದಾರೆ. ಆಗ ಅಣ್ಣಿಗೇರಿ ಸಹೋದರರು ಇಂಜಿನಿಯರ್ ಅವರನ್ನು ಬಲವಂತವಾಗಿ ಕಾರಿನಲ್ಲಿ ಹಾಕಿಕೊಂಡು ಹೋಗಿದ್ದಾರೆ. ಜೀವ ಬೆದರಿಕೆ ಹಾಕಿ ಪರವಾನಗಿ ಪತ್ರಗಳಿಗೆ ಒತ್ತಾಯದಿಂದ ಸಹಿ ಮಾಡಿಸಿಕೊಂಡು ಶಿಗ್ಗಾವಿ ಹತ್ತಿರ ಬಿಟ್ಟು ಪರಾರಿಯಾಗಿದ್ದಾರೆ.
ಸುದ್ದಿ ತಿಳಿದ ಪಿಎಸ್ಐ ಶಿವಕುಮಾರ ಲೋಹಾರ ಇಂಜಿನಿಯರ್ ಮರಿಗೌಡರ ಅವರನ್ನು ಸಂರ್ಪಸಿ ಶಿಗ್ಗಾವಿಯ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿ ಅಲ್ಲೇ ಇರುವಂತೆ ಸೂಚಿಸಿದ್ದಾರೆ. ಬಳಿಕ ಅಲ್ಲಿಂದ ಅವರನ್ನು ಮುಖ್ಯಾಧಿಕಾರಿ ಆರ್.ಎಂ. ಪಾಟೀಲ ಮತ್ತು ಸಿಬ್ಬಂದಿ ಲಕ್ಷ್ಮೇಶ್ವರಕ್ಕೆ ಕರೆ ತಂದಿದ್ದಾರೆ. ಎಸ್ಪಿ ಎನ್. ಯತೀಶ ಅವರು ಘಟನೆಯ ಪೂರ್ಣ ವಿವರ ಪಡೆದು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತೆ ಪಿಎಸ್ಐಗೆ ಸೂಚಿಸಿದರು.
ಸುದ್ದಿ ಹರಡುತ್ತಿದ್ದಂತೆಯೇ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ನೂರಾರು ಸಿಬ್ಬಂದಿ ಲಕ್ಷ್ಮೇಶ್ವರ ಪುರಸಭೆಗೆ ದೌಡಾಯಿಸಿದ್ದಾರೆ. ಅಷ್ಟರಲ್ಲಾಗಲೇ ಜಿಲ್ಲಾ ಯೋಜನಾ ನಿರ್ದೇಶಕ ಪಿ. ರುದ್ರೇಶ ಅವರು ಸ್ಥಳದಲ್ಲಿದ್ದು ಸಿಬ್ಬಂದಿಗೆ ಧೈರ್ಯ ತುಂಬಿದರು. ಬಳಿಕ ಜಮಾಯಿಸಿದ್ದ ಸಿಬ್ಬಂದಿ ಹಲಗೆ ಬಾರಿಸುತ್ತಾ ತಪ್ಪಿತಸ್ಥರನ್ನು ಬಂಧಿಸುವಂತೆ ಘೊಷಣೆ ಕೂಗುತ್ತ ಪೊಲೀಸ್ಠಾಣೆಗೆ ತೆರಳಿ ದೂರು ಸಲ್ಲಿಸಿದರು.
ಗದಗ-ಬೆಟಗೇರಿ ನಗರಸಭೆಯ ಆಯುಕ್ತ ಮನ್ಸೂರ್ ಅಲಿ, ಇಂಜಿನಿಯರ್ ಬಂಡಿವಡ್ಡರ ಸೇರಿ ಮುಳಗುಂದ, ಶಿರಹಟ್ಟಿ, ರೋಣ, ಗಜೇಂದ್ರಗಡ, ಮುಂಡರಗಿಯ ಪಟ್ಟಣ ಪಂಚಾಯತಿ ಮತ್ತು ಪುರಸಭೆಯ ಮುಖ್ಯಾಧಿಕಾರಿಗಳು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.