More

  ಪುರಸಭೆಯಿಂದ ಆಂಗ್ಲಭಾಷೆ ನಾಮಫಲಕಗಳ ತೆರವು

  ಬೇಲೂರು: ಈ ಬಾರಿ ನ.1 ರಂದು ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದರಿಂದ ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನಿಡಬೇಕೆಂಬ ಸಂಕಲ್ಪ ತೊಟ್ಟಿದ್ದು, ಪಟ್ಟಣದಾದ್ಯಂತ ಆಂಗ್ಲಭಾಷೆಯಲ್ಲಿರುವ ನಾಮಫಲಕಗಳನ್ನು ತೆರವುಗೊಳಿಸುತ್ತಿದ್ದೇವೆ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಹೇಳಿದರು.


  ಬೇಲೂರು ಪಟ್ಟಣದ ನೆಹರು ನಗರದಲ್ಲಿ ಸೋಮವಾರ ವಿವಿಧ ಕಟ್ಟಡಗಳ ಮೇಲಿದ್ದ ಆಂಗ್ಲಭಾಷೆಯ ನಾಮಫಲಕಗಳನ್ನು ಕರವೇ (ನಾರಾಯಣಗೌಡ ಬಣ) ಕಾರ್ಯಕರ್ತರ ನೆರವಿನೊಂದಿಗೆ ತೆರವುಗೊಳಿಸಿ ಮಾತನಾಡಿದ ಅವರು, ಬೇಲೂರು ವಿಶ್ವ ವಿಖ್ಯಾತ ಪ್ರವಾಸಿ ತಾಣ ಮತ್ತು ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ತಾಲೂಕಾಗಿರುವುದರಿಂದ ಕನ್ನಡಿಗರಾದ ನಮಗೆ ಹೆಮ್ಮೆಯ ಸಂಗತಿ ಎಂದರು.


  ಆದರೆ ಪಟ್ಟಣದಲ್ಲಿ ಆಂಗ್ಲಭಾಷೆಯ ನಾಮಫಲಕಗಳು ರಾರಾಜಿಸುತ್ತಿರುವುದರಿಂದ ಕರವೇ ಕಾರ್ಯಕರ್ತರು ಆಂಗ್ಲಭಾಷೆಯ ನಾಮಫಲಕಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದರು. ಜತೆಗೆ ಕೆಲವರು ಪುರಸಭೆಯಿಂದ ಅನುಮತಿ ಪಡೆಯದೆ ಫಲಕಗಳನ್ನು ಹಾಕಿದ್ದರಿಂದ ಅವುಗಳನ್ನು ನಮ್ಮ ಸಿಬ್ಬಂದಿಯೊಂದಿಗೆ ತೆರಳಿ ತೆರವುಗೊಳಿಸಿದ್ದೇವೆ. ಕನ್ನಡ ನಾಡಿನಲ್ಲಿ ಯಾವುದೇ ನಾಮಫಲಕ ಅಳವಡಿಸಿದರೂ ಕನ್ನಡದ ಅಕ್ಷರಗಳು ದೊಡ್ಡ ಅಕ್ಷರಗಳಲ್ಲಿ ಕಾಣುವಂತಿರಬೇಕು. ನಂತರ ಬೇರೆ ಭಾಷೆಗಳಲ್ಲಿ ಹಾಕಿಕೊಳ್ಳಲಿ ನಮ್ಮ ಅಭ್ಯಂತರವಿಲ್ಲ ಎಂದರು.


  ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಪ್ರವಾಸಿ ಕೇಂದ್ರ ಬೇಲೂರು ಪಟ್ಟಣದಲ್ಲಿ ಎಲ್ಲಿ ನೋಡಿದರೂ ಆಂಗ್ಲ ಭಾಷೆಯ ನಾಮಫಲಕಗಳೇ ಎದ್ದು ಕಾಣುತ್ತಿದ್ದವು. ಇದನ್ನು ತೆರವುಗೊಳಿಸುವಂತೆ ಪುರಸಭೆ ಅಧ್ಯಕ್ಷರಿಗೆ ಮನವಿ ಮಾಡಿದ್ದರಿಂದ ಅವರು ನಮ್ಮ ಮನವಿಗೆ ಸ್ಪಂದಿಸಿ, ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮುಂದಿನ ಒಂದು ವಾರದಲ್ಲಿ ವಿವಿಧ ವಾಣಿಜ್ಯ ಮಳಿಗೆಗಳ ಮಾಲೀಕರು ಆಂಗ್ಲ ನಾಮಫಲಕಗಳನ್ನು ತೆರವುಗೊಳಿಸದಿದ್ದಲ್ಲಿ ನಾವೇ ಅವುಗಳನ್ನು ತೆರವುಗೊಳಿಸಲು ಮುಂದಾಗುತ್ತೇವೆ ಎಂದು ಎಚ್ಚರಿಸಿದರು.


  ಪುರಸಭೆ ಉಪಾಧ್ಯಕ್ಷೆ ಸೌಮ್ಯಾ, ಸದಸ್ಯ ಪ್ರಭಾಕರ್, ಮುಖ್ಯಾಧಿಕಾರಿ ಸುಜಯ್ ಕುಮಾರ್, ಆರೋಗ್ಯಾಧಿಕಾರಿ ಜ್ಯೋತಿ, ಕರವೇ ಗೌರವಾಧ್ಯಕ್ಷ ಕುಮಾರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್, ಉಪಾಧ್ಯಕ್ಷ ಮೋಹನ್, ಚಂದ್ರೇಗೌಡ, ಪದಾಧಿಕಾರಿಗಳಾದ ಪ್ರಸನ್ನ, ಸ್ವಾಮಿ, ವಸಂತ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts