ಪುರಸಭೆಗೆ 2 ಕೋಟಿ ರೂ. ಅನುದಾನ ಬಿಡುಗಡೆ

ನರಗುಂದ: ಪಟ್ಟಣದ ವಿವಿಧ ಬಡಾವಣೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ 3 ಕೋಟಿ ರೂ. ಅನುದಾನ ನೀಡಲು ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಯವರು ಶುಕ್ರವಾರ ನರಗುಂದ ಪುರಸಭೆಗೆ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.

ಜಿಪಂ ಇಂಜಿನಿಯರಿಂಗ್ ವಿಭಾಗದ ನಬಾರ್ಡ್ ಆರ್​ಐಡಿಎಫ್-23ರ ಯೋಜನೆಯಡಿ 93 ಲಕ್ಷ ರೂ. ವೆಚ್ಚದಲ್ಲಿ ಶನಿವಾರ ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜ್ ಕಟ್ಟಡಕ್ಕೆ ಭೂಮಿಪೂಜೆ, ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಪದವಿಪೂರ್ವ ಕಾಲೇಜ್ ಪಕ್ಕದಲ್ಲಿ ಸಿದ್ಧೇಶ್ವರ ಪ್ರಥಮ ದರ್ಜೆ ಕಾಲೇಜ್​ನ ನೂತನ ಕಟ್ಟಡವಿದೆ. ಆ ಕಾಲೇಜ್​ಗೆ ತೆರಳಲು ಹಾಗೂ ವಾಹನಗಳ ಸಂಚಾರಕ್ಕಾಗಿ 10 ಮೀಟರ್ ರಸ್ತೆ ಬಿಟ್ಟು ಕಟ್ಟಡವನ್ನು ನಿರ್ವಿುಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಗುಣಮಟ್ಟದ ಮರಳು ಬಳಸಿ: ಪದವಿ ಪೂರ್ವ ಕಾಲೇಜ್ ಕಟ್ಟಡ ನಿರ್ವಣಕ್ಕಾಗಿ ಮಣ್ಣು ಮಿಶ್ರಿತ ಮರಳು ಸಂಗ್ರಹಿಸಿಟ್ಟಿದ್ದನ್ನು ಕಂಡ ಶಾಸಕ ಸಿ.ಸಿ. ಪಾಟೀಲ, ಭೂಸೇನಾ ಇಲಾಖೆಯ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಗುಣಮಟ್ಟದ ಮರಳನ್ನು ಬಳಸಿ ಕಟ್ಟಡ ನಿರ್ವಿುಸಬೇಕು. ಇಲ್ಲದಿದ್ದರೆ ಕಾಮಗಾರಿಯ ಬಿಲ್ ತಡೆಹಿಡಿಯಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

ಪ್ರಾಚಾರ್ಯ ಎಚ್.ಬಿ. ಅಸೂಟಿ, ಪುರಸಭೆ ಮಾಜಿ ಅಧ್ಯಕ್ಷ ಚಂದ್ರು ಪವಾರ, ಜಿಪಂ ಸದಸ್ಯೆ ರೇಣುಕಾ ಅವರಾದಿ, ಶಿವಾನಂದ ಮುತವಾಡ, ಎನ್.ವಿ. ಮೇಟಿ, ಎಪಿಎಂಸಿ ಅಧ್ಯಕ್ಷ ಹನುಮಂತ ಹದಗಲ್, ಬಿ.ಕೆ. ಗುಜಮಾಗಡಿ, ಸಿ.ಎಸ್. ಸಂಗಳಮಠ, ಐ.ಆರ್. ಹಡಗಲಿ, ವಿಶ್ವನಾಥ ದೇಶಪಾಂಡೆ, ಹಸನ್ ನವದಿ, ಎಸ್.ಪಿ. ನೀಲಪ್ಪನವರ, ಚಂದ್ರು ದಂಡಿನ, ಅನಿಲ್ ಕುಮಾರ ಜಗತಾಪ, ಎಂ.ಬಿ. ತೋಗುಣಸಿ, ಉಮೇಶ ಕುಡೇನವರ ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. ಎಸ್.ಬಿ. ಭಜಂತ್ರಿ, ಎಂ.ಎಸ್. ಯಾವಗಲ್, ಸುಧೀರ ಸಜ್ಜನ ನಿರ್ವಹಿಸಿದರು.