ಪುರಸಭೆಗೆ ಬೀಗ ಹಾಕಿ ಬಿಜೆಪಿ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಜೇವರ್ಗಿ
ಭೀಮೆಯ ಒಡಿಲು ಬರಿದಾಗಿ ಹೋಗಿದ್ದು, ಪಟ್ಟಣ ಸೇರಿ ವಿವಿಧೆಡೆ ನೀರಿನ ಸಮಸ್ಯೆ ಮಿತಿಮೀರಿದೆ. ಸಮಸ್ಯೆ ಬಗೆಹರಿಸಬೇಕಾದ ಪುರಸಭೆ ಅಧಿಕಾರಿಗಳ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಆರೋಪಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ, ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನೇತೃತ್ವದಲ್ಲಿ ಪಟ್ಟಣದ ಪುರಸಭೆ ಕಚೇರಿಗೆ ಬೀಗ ಹಾಕಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿ, ಬೇಸಿಗೆ ಆರಂಭಕ್ಕೂ ಮುನ್ನವೇ ಭೀಮಾ ನದಿಯಲ್ಲಿನ ನೀರು ಖಾಲಿಯಾಗಲಿದೆ ಎಂಬ ಮಾಹಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗಿದೆ. ಹೀಗಿದ್ದಾಗ ನದಿಯಲ್ಲಿನ ನೀರನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ಕೆಲಸ ಮಾಡಬೇಕಿತ್ತು. ಇದ್ಯಾವುದು ನಡೆದಿಲ್ಲ ಎಂದು ಕಿಡಿಕಾರಿದರು.

ಪುರಸಭೆ ಮುಖ್ಯಾಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ. ಕೂಡಲೇ ಅವರನ್ನು ವರ್ಗಾವಣೆ ಮಾಡಿ ಬೇರೆ ಅಧಿಕಾರಿ ನೇಮಿಸಬೇಕು. ಪಟ್ಟಣದ ಜನತೆಗೆ ಸಮರ್ಪಕ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಅಂತರ್ಜಲ ಮಟ್ಟ ಕುಸಿದ ಕೊಳವೆ ಬಾವಿಗಳಿಗೆ ಹೆಚ್ಚುವರಿ ಪೈಪ್ಗಳನ್ನು ಅಳವಡಿಸಬೇಕು. ಪುರಸಭೆ ನಿರ್ಲಕ್ಷೃದಿಂದ ಜನತೆ ಸಂಕಷ್ಟ ಎದುರಿಸುತ್ತಿದ್ದು, ಹಿರಿಯ ಅಧಿಕಾರಿಗಳು ಸಮಸ್ಯೆಗೆ ತ್ವರಿತಗತಿಯಲ್ಲಿ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ರಸ್ತೆಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಸಹಾಯಕ ಆಯುಕ್ತ ರಾಹುಲ್ ಪಾಂಡೆ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿ, ಜಿಲ್ಲಾಧಿಕಾರಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿ ಪರಿಗಣಿಸಿದ್ದು, ಇಲ್ಲಿನ ಸಮಸ್ಯೆ ಬಗ್ಗೆ ಚರ್ಚಿಸಿ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಬಿಜೆಪಿ ಹಿರಿಯ ಮುಖಂಡ ರಮೇಶಬಾಬು ವಕೀಲ, ಜಿಪಂ ಸದಸ್ಯ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರ ಘಟಕದ ಅಧ್ಯಕ್ಷ ಷಣ್ಮುಖಪ್ಪ ಸಾಹು ಗೋಗಿ, ತಾಲೂಕು ಉಪಾಧ್ಯಕ್ಷ ಅಕ್ಬರ್ಸಾಬ್ ಅಂಕಲಗಾ, ಪ್ರಮುಖರಾದ ರಾಜು ನೀಲಂಗಿ, ಗುರುಶಾಂತಯ್ಯ ಹಿರೇಮಠ, ದೇವಿಂದ್ರಪ್ಪ ಸುಬೇದಾರ್, ಅಮೀರ್ ಸೇಠ್, ಗಂಗೂಬಾಯಿ ಜೆಟ್ಟಿಂಗರಾಯ, ಕಾವ್ಯಾ ಶಾಬಾದಕರ್, ಕಸ್ತೂರಿಬಾಯಿ ಕಲ್ಲಾ, ರಾಜು ತಳವಾರ, ಗುಂಡು ಸಾಹು ಗೋಗಿ, ಚಂದನ ಮಹೇಂದ್ರಕರ್, ಸಂಗಣ್ಣಗೌಡ ರದ್ದೇವಾಡಗಿ, ಹಾಗೂ ಪುರಸಭೆ ಬಿಜೆಪಿ ಸದಸ್ಯರು ಇತರರಿದ್ದರು.

Leave a Reply

Your email address will not be published. Required fields are marked *