ಪುತ್ರವ್ಯಾಮೋಹಿ ಕುಮಾರಸ್ವಾಮಿಗೆ ತಲೆ ಕೆಟ್ಟಿದೆ

ಗಜೇಂದ್ರಗಡ: ಮಂಡ್ಯದಲ್ಲಿ ಪುತ್ರನ ಸೋಲು ಖಚಿತ ಎಂದರಿತ ಸಿಎಂ ಕುಮಾರಸ್ವಾಮಿ ಹತಾಶರಾಗಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆದರೆ ನಾನು ಜವಾಬ್ದಾರನಲ್ಲ ಎಂದು ಹೇಳಿರುವುದನ್ನು ನೋಡಿದರೆ ಅವರಿಗೆ ತಲೆ ಕೆಟ್ಟಂತಿದೆ. ಕೂಡಲೇ ಅವರು ಕ್ಷಮಾಪಣೆ ಕೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದರು.

ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಲಾದ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಲೋಕಸಭಾ ಚುನಾವಣೆ ನಂತರ ಅಪ್ಪಮಕ್ಕಳ ಆಟ ನಡೆಯಲ್ಲ. ಅಪ್ಪಮಕ್ಕಳಾಯ್ತು ಈಗ ಮೊಮ್ಮಕ್ಕಳ ಕಾಟ ಶುರುವಾಗಿದೆ ಎಂದರು.

ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ಸಣ್ಣ ರೈತರಿಗೆ ನೀಡಲಾಗುವ 6 ಸಾವಿರ ರೂ. ಧನಸಹಾಯವನ್ನು ಎಲ್ಲ ವರ್ಗದ ರೈತರಿಗೂ ಅನ್ವಯಿಸುವ ಚಿಂತನೆಯನ್ನು ಪ್ರಧಾನಿ ಮೋದಿಯವರು ನಡೆಸುತ್ತಿದ್ದಾರೆ. ಗುಡಿಸಲು ಮುಕ್ತ ಗ್ರಾಮ-ನಗರ ಮಾಡುವ ಕನಸು ಅವರದಾಗಿದ್ದು, ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಯೋಜನೆ ಜಾರಿಗೊಳಿಸಿದ್ದಾರೆ. ರಾಜ್ಯದಲ್ಲಿ ಈ ಬಾರಿ 22 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ದೇಶದಲ್ಲಿ ಬಿಜೆಪಿ ಸ್ವತಂತ್ರವಾಗಿಯೇ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ. ಶಿವಕುಮಾರ ಉದಾಸಿ ಒಬ್ಬ ಸಜ್ಜನ ರಾಜಕಾರಣಿಯಾಗಿದ್ದು ಅಂಥವರ ಗೆಲುವು ಬಹಳ ಮುಖ್ಯ ಎಂದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಹಾಸನ, ಮಂಡ್ಯ, ತುಮಕೂರಿನಲ್ಲಿ ಮೈತ್ರಿ ಪಕ್ಷದವರೇ ಪರಸ್ಪರ ಸೋಲಿಸಲು, ಬೆನ್ನ ಹಿಂದೆ ಚೂರಿ ಹಾಕಲು ಸಜ್ಜಾಗಿದ್ದಾರೆ. ಜೆಡಿಎಸ್ ಈ ಮೊದಲು ಅಪ್ಪ-ಮಕ್ಕಳ ಪಕ್ಷ ಮಾತ್ರ ಆಗಿತ್ತು. ಈಗ ಅಪ್ಪ-ಅಮ್ಮ, ಮಗ, ಸೊಸೆಯಂದಿರ ಪಕ್ಷವಾಗಿ ಹೊರಹೊಮ್ಮಿದೆ ಎಂದರು.

ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಶಿವಕುಮಾರ ಉದಾಸಿ ಅವರು ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧಿಸಲಿದ್ದಾರೆ. ಶಾಸಕ ಎಚ್.ಕೆ. ಪಾಟೀಲರಿಗೆ ಚುನಾವಣೆಯಲ್ಲಿ ಸೋಲಿನ ರುಚಿ ಅದರ ನೋವು ಗೊತ್ತು, ಆದರೆ, ಅವರ ಅಣ್ಣ ಡಿ.ಆರ್. ಪಾಟೀಲ ಅವರಿಗೆ ಸೋಲು ಗೊತ್ತಿಲ್ಲ. ಗೊತ್ತಾಗಲಿ ಎನ್ನುವ ಕಾರಣಕ್ಕಾಗಿಯೇ ಚುನಾವಣೆಯಲ್ಲಿ ನಿಲ್ಲಿಸಿದ್ದಾರೆ ಎಂದರು.

ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ನರೇಂದ್ರ ಮೋದಿ ಅವರು ದೇಶದ 9 ಕೋಟಿ ಕುಟುಂಬಕ್ಕೆ ಉಚಿತ ಗ್ಯಾಸ್ ಸಿಲಿಂಡರ್ ನೀಡಿದ್ದಾರೆ. ಮೋದಿಯವರು ಅಧಿಕಾರಕ್ಕೆ ಬಂದ್ರೆ ಇತರೆ ಪಕ್ಷದ ಭ್ರಷ್ಟಾಚಾರಿಗಳಿಗೆ ಉಳಿಗಾಲವಿಲ್ಲ ಎಂದು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿದ್ದಾರೆ. ಅತೀಂದ್ರಿಯ ಶಕ್ತಿ ಹೊಂದಿರುವ ಕುಮಾರಸ್ವಾಮಿಯವರಿಗೆ ಪುಲ್ವಾಮಾ ದಾಳಿ, ಪತ್ರಕರ್ತರ ಮೇಲಿನ ಹಲ್ಲೆಯಂತಹ ಘಟನೆಗಳು ಮೊದಲೇ ಗೊತ್ತಾಗುತ್ತವೆ. ಆದರೆ, ಅವುಗಳನ್ನು ತಡೆಯಲು ಮುಂದಾಗುವುದಿಲ್ಲ ಎಂದು ಟೀಕಿಸಿದರು.

ಬಿಜೆಪಿ ಅಭ್ಯಥಿ ಶಿವಕುಮಾರ ಉದಾಸಿ ಮಾತನಾಡಿದರು. ನಿಂಗಪ್ಪ ಕೆಂಗಾರ, ರವಿ ಬಿದರೂರ, ರವಿ ದಂಡಿನ, ಎಂ.ಎಸ್. ಕರಿಗೌಡ್ರ, ಅಶೋಕ ನವಲಗುಂದ, ಅಮರೇಶ ಬಳಿಗೇರ, ಮೋಹನಸಾ ರಾಯಬಾಗಿ, ರಾಜೇಂದ್ರ ಘೊರ್ಪಡೆ, ಸಿದ್ದಣ್ಣ ಬಳಿಗೇರ, ಆರ್.ಕೆ. ಚವ್ಹಾಣ ಪುರಸಭೆ ಸದಸ್ಯರಾದ ಕನಕಪ್ಪ ಅರಳಿಗಿಡದ, ಸುಭಾಸ ಮ್ಯಾಗೇರಿ, ರೂಪ್ಲೇಶ ರಾಠೋಡ, ಶರಣಪ್ಪ ಬೆಟಗೇರಿ, ವೀರಪ್ಪ ಪಟ್ಟಣಶೆಟ್ಟಿ, ಲಲಿತಾ ಸವಣೂರು, ವಿಜಯಾ ಮಳಗಿ, ಕೌಸರಬಾನು ಹುನಗುಂದ ಹಾಗೂ ಬಿ.ಎಂ. ಸಜ್ಜನ, ಬಸವರಾಜ ಬಂಕದ, ಶರಣಪ್ಪ ಚಳಗೇರಿ, ಅಶೋಕ ವನ್ನಾಲ, ಭಾಸ್ಕರ ರಾಯಬಾಗಿ ಇದ್ದರು.

ರಾಜ್ಯ ಸರ್ಕಾರಕ್ಕೆ ಉಳಿಗಾಲವಿಲ್ಲ:ಮಂಡ್ಯದಲ್ಲಿ ಸುಮಲತಾ ಗೆಲ್ಲುತ್ತಾರೆ ಎನ್ನುವುದನ್ನರಿತ ಸಿಎಂ ಕುಮಾರಸ್ವಾಮಿ ಹುಚ್ಚರಂತೆ ಆಡುತ್ತಿದ್ದಾರೆ, ಗೂಂಡಾಗಿರಿ ನಡೆಸುತ್ತಿದ್ದಾರೆ. ಫಲಿತಾಂಶ ಬರುವರೆಗೂ ಇವರ ಗೂಂಡಾಗಿರಿ ನಡೆಯುತ್ತದೆ. ನಂತರ ಸರ್ಕಾರವೇ ಉಳಿಯುವುದಿಲ್ಲ. ರಾಹುಲ್ ಗಾಂಧಿ ಕೃಪೆಯಿಂದ ಸಿಎಂ ಆಗಿದ್ದೇನೆ ಎನ್ನುವ ಕುಮಾರಸ್ವಾಮಿಗೆ ರಾಜ್ಯದ ಜನತೆಯ ಮೇಲೆ ವಿಶ್ವಾಸವಿಲ್ಲ. ಜನರು ಇವರನ್ನು ಮನೆಗೆ ಕಳಿಸಲು ತೀರ್ವನಿಸಿದ್ದಾರೆ. ಹೊಟ್ಟೆಪಾಡಿಗಾಗಿ ಯುವಕರು ಸೈನ್ಯ ಸೇರುತ್ತಾರೆ ಎನ್ನುವ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ನಾಲಾಯಕ್ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದರು.