ಪುತ್ತಿಗೆ ಮಠಕ್ಕೆ ಉತ್ತರಾಧಿಕಾರಿ ನೇಮಕ ಸಿದ್ಧತೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿ ಅಷ್ಟಮಠಗಳಲ್ಲಿ ಒಂದಾದ ಪುತ್ತಿಗೆ ಮಠಕ್ಕೆ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಏ.22ರಂದು ಸಂನ್ಯಾಸ ದೀಕ್ಷೆ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ದೇಶ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಶಾಖಾ ಮಠಗಳನ್ನು ಪ್ರಾರಂಭಿಸಿದ್ದು, ಅಪಾರ ಶಿಷ್ಯವರ್ಗವನ್ನು ಹೊಂದಿದ್ದಾರೆ. ಪ್ರಸಕ್ತ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಶಿಷ್ಯ ಸ್ವೀಕಾರಕ್ಕೆ ಮುಂದಾಗಿದ್ದು, ಪುತ್ತಿಗೆ ಶ್ರೀಗಳೂ ಕಡಿಯಾಳಿ ಮೂಲದ ವಟುವನ್ನು ಗುರುತಿಸಿ ಉತ್ತರಾಧಿಕಾರಿ ನೇಮಕಕ್ಕೆ ಸಿದ್ಧತೆ ನಡೆಸಿದ್ದಾರೆ.

ಹಿರಿಯಡ್ಕ ಸಮೀಪದ ಪುತ್ತಿಗೆ ಮೂಲಮಠದಲ್ಲಿ ಶನಿವಾರ ಶಿಷ್ಯ ಸ್ವೀಕಾರಕ್ಕೆ ಪೂರ್ವಭಾವಿಯಾಗಿ ವಿರಜಾ ಹೋಮ ಮೊದಲಾದ ಧಾರ್ಮಿಕ ವಿಧಿಗಳು ನಡೆದಿದ್ದು, ಭಾನುವಾರ ಆತ್ಮಶ್ರಾದ್ಧ ಹಾಗೂ ಸೋಮವಾರ ಸಂನ್ಯಾಸ ದೀಕ್ಷೆ ಪ್ರಕ್ರಿಯೆ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹಾಗೂ ದ್ವಂದ್ವ ಮಠವಾದ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆಯಲಿದೆ ಎಂಬ ಮಾಹಿತಿ ಲಭಿಸಿದೆ.

ಪಲಿಮಾರು ಪರ್ಯಾಯದ ಬಳಿಕ ತಲಾ ಎರಡು ವರ್ಷ ಅದಮಾರು ಮತ್ತು ಕೃಷ್ಣಾಪುರ ಪರ್ಯಾಯ ನಡೆಯಲಿದೆ. ಮುಂದಿನ ಸರದಿ ಪುತ್ತಿಗೆ ಮಠದ್ದಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ ಶಿಷ್ಯನನ್ನು ಸಿದ್ಧಗೊಳಿಸಲು ಪುತ್ತಿಗೆ ಶ್ರೀಗಳು ಚಿಂತಿಸಿದ್ದಾರೆ ಎನ್ನಲಾಗಿದೆ.

ಇಬ್ಬರು ಯುವ ಯತಿಗಳ ಸೇರ್ಪಡೆ:
ಪುತ್ತಿಗೆ ಶ್ರೀಗಳು ಶಿಷ್ಯ ಸ್ವೀಕಾರ ಮಾಡಿದರೆ ಒಂದೇ ವರ್ಷದಲ್ಲಿ ಉಡುಪಿ ಅಷ್ಟಮಠಕ್ಕೆ ಇಬ್ಬರು ಯುವ ಯತಿಗಳು ಸೇರ್ಪಡೆಗೊಂಡಂತಾಗುತ್ತದೆ. ಮೇ ತಿಂಗಳಲ್ಲಿ ಪಲಿಮಾರು ಮಠಕ್ಕೆ ಕಿರಿಯ ಶ್ರೀಗಳು ಆಗಮಿಸಲಿದ್ದಾರೆ. ಯೋಗ ದೀಪಿಕಾ ಗುರುಕುಲದ ವಿದ್ಯಾರ್ಥಿ ಶೈಲೇಶ ಉಪಾಧ್ಯಾಯ ಅವರನ್ನು ಶ್ರೀಗಳು ಆಯ್ಕೆ ಮಾಡಿದ್ದು, ಮೇ 9ರಿಂದ 12ರವರೆಗೆ ಸನ್ಯಾಸ ಪೀಠಾರೋಹಣ ಕಾರ್ಯಕ್ರಮ ನಿಗದಿಯಾಗಿದೆ. ಅದಮಾರು, ಪೇಜಾವರ ಮಠದಲ್ಲಿ ಈಗಾಗಲೇ ಉತ್ತರಾಧಿಕಾರಿಗಳಿದ್ದಾರೆ. ಕೃಷ್ಣಾಪುರ ಹಾಗೂ ಶಿರೂರು ಮಠಕ್ಕೂ ಪೀಠಾಧಿಪತಿಗಳ ನೇಮಕವಾದರೆ ಕಾಣಿಯೂರು ಶ್ರೀ, ಸೋದೆ ಶ್ರೀ ಸಹಿತ ರಥಬೀದಿಯಲ್ಲಿ ಎಲ್ಲ ಮಠಗಳಲ್ಲೂ ಯುವ ಯತಿಗಳೇ ಕಂಗೊಳಿಸಲಿದ್ದಾರೆ.

Leave a Reply

Your email address will not be published. Required fields are marked *