ಭಾಲ್ಕಿ: ಪುಟಾಣಿ ಮಕ್ಕಳಲ್ಲಿ ಅದ್ಭುತ ಪ್ರತಿಭೆ ಅಡಗಿದೆ. ಅದನ್ನು ಗುರುತಿಸಿ ಸನ್ಮಾರ್ಗದ ಕಡೆಗೆ ಕೊಂಡೊಯ್ಯುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.
ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಮಾಂಟೆಸ್ಸರಿ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಸ್ತು ಪ್ರದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ವಸ್ತು ಪ್ರದರ್ಶನದಲ್ಲಿ ಬಾಲ್ಯದಲ್ಲೇ ಮಕ್ಕಳು ಒಂದಕ್ಕಿಂತ ಒಂದು ವಿಭಿನ್ನವಾಗಿ ಮಾದರಿಗಳನ್ನು ಸಿದ್ಧಪಡಿಸಿದ್ದಾರೆ. ದೇಶ, ವಿದೇಶದ ನಕಾಶೆ, ಭೂಮಂಡಲ, ಅಬ್ಯಾಕಸ್, ಸಾಮಾನ್ಯ ಜ್ಞಾನ ಸೇರಿ ವಿವಿಧ ಮಾದರಿಯ ಪರಿಚಯ ಕನ್ನಡ, ಆಂಗ್ಲ, ಹಿಂದಿ ಭಾಷೆಯಲ್ಲಿ ಪರಿಚಯಿಸಿ ತಮ್ಮ ಜ್ಞಾನವನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ ಎಂದರು.
ಇಡೀ ವಿಶ್ವವನ್ನು ಒಂದು ಕ್ಷಣದಲ್ಲಿ ಕಣ್ಣು ಮುಂದೆ ತರುವ ಪ್ರಯತ್ನವನ್ನು ಮಕ್ಕಳು ಮಾಡಿದ್ದಾರೆ. ಪ್ರೌಢ ಹಂತದಲ್ಲಿ ಇರುವ ಜ್ಞಾನವನ್ನು ಮಾಂಟೆಸ್ಸರಿ ಹಂತದಲ್ಲೇ ಮಕ್ಕಳು ಬೆಳೆಸಿ ಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಮಕ್ಕಳು ವಿಷಯ ಜ್ಞಾನದ ಜತೆಗೆ ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಂಡು ರಾಜ್ಯ, ರಾಷ್ಟçಕ್ಕೆ ತಮ್ಮದೇ ಆದ ಕೊಡುಗೆ ನೀಡುವ ವಿಶ್ವಾಸ ಇದೆ ಎಂದರು.
ಹಿರೇಮಠ ಸಂಸ್ಥಾನದ ಕಾರ್ಯದರ್ಶಿ ಶ್ರೀ ಮಹಾಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಪ್ರಾಚಾರ್ಯ ಜಯಲಕ್ಷ್ಮೀ, ಸಿಬ್ಬಂದಿ ಮತ್ತು ಪಾಲಕರು ಇದ್ದರು.
ವಸ್ತು ಪ್ರದರ್ಶನ: ವಸ್ತು ಪ್ರದರ್ಶನದಲ್ಲಿ ಪುಟಾಣಿ ಮಕ್ಕಳು ವಿವಿಧ ಮಾದರಿಗಳನ್ನು ಸಿದ್ಧಪಡಿಸಿ ಪ್ರದರ್ಶಿಸಿರುವುದು ಗಮನ ಸೆಳೆಯಿತು. ದೇಶ ವಿದೇಶದ ನಕಾಶೆ, ಭೂಮಂಡಲ, ಪ್ರಾಸ, ಅಬ್ಯಾಕಸ್, ಸಾಮಾನ್ಯ ಜ್ಞಾನ, ಒಗಟು, ಸಾರ್ವಜನಿಕ ಸ್ಥಳ ಮಾದರಿಗಳನ್ನು ಮಕ್ಕಳು ಪ್ರದರ್ಶಿಸಿ ವಿವರಣೆ ನೀಡಿದರು.
ಬಾಲ್ಯದಿಂದಲೇ ಮಕ್ಕಳಲ್ಲಿನ ಪ್ರತಿಭೆ ಅರಳಿಸಲು ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾಂಟೆಸ್ಸರಿ ಶಾಲೆ ತೆರೆದು ಉತ್ತಮ ವೇದಿಕೆ ಕಲ್ಪಿಸಿದ್ದಾರೆ. ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು.
| ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ
