ಪುಟ್ಟೇಗೌಡರನ್ನು ಭೇಟಿ ಮಾಡಿದ ಯಡಿಯೂರಪ್ಪ

ಚನ್ನರಾಯಪಟ್ಟಣ: ಪಟ್ಟಣದ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಅವರ ಮನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಮಧ್ಯಾಹ್ನ ಭೇಟಿ ನೀಡಿದರು.

ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಪುಟ್ಟೇಗೌಡ ಸೇರಿದಂತೆ ಅನೇಕ ಹಿರಿಯರು ಜೆಡಿಎಸ್ ಆಡಳಿತದ ವೈಖರಿಗೆ ಬೇಸರಗೊಂಡಿದ್ದು, ಒಬ್ಬೊಬ್ಬರಾಗಿಯೇ ಜೆಡಿಎಸ್ ತೊರೆದು ಹೊರ ನಡೆಯುತಿದ್ದಾರೆ ಎಂದರು.

ಸಾಮಾನ್ಯ ಜನರು ಮತ್ತೊಮ್ಮೆ ನರೇಂದ್ರ ಮೋದಿ ಅವರೇ ಭಾರತದ ಪ್ರಧಾನಿಯಾಗಬೇಕು ಎಂದು ಬಯಸುತ್ತಿದ್ದಾರೆ. ದೇಶದ ಹಿತಾಸಕ್ತಿ ಹಾಗೂ ಅಭಿವೃದ್ಧಿಗೆ ಮೋದಿಯವರ ಅಗತ್ಯವಿದೆ. ಇದು ದೇಶದ ಪ್ರತಿಯೊಬ್ಬರ ಆಶಯವೂ ಆಗಿದೆ ಎಂದರು.

ಹಾಸನ ಲೋಕಸಭಾ ಕ್ಷೇತ್ರಕ್ಕೆ ಎ.ಮಂಜು ಅಭ್ಯರ್ಥಿಯಾಗಿ ಸಿಕ್ಕಿರುವುದು ಜಿಲ್ಲೆಯ ಅಭಿವೃದ್ಧಿಗೆ ಉತ್ತಮ ಬೆಳವಣಿಗೆಯಾಗಿದ್ದು, ನಾವೆಲ್ಲರೂ ಅವರನ್ನು ಬೆಂಬಲಿಸಬೇಕಿದೆ. ಶಾಸಕ ಪ್ರೀತಂಗೌಡ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡು ಸುಮಾರು 1 ಲಕ್ಷ ಮತಗಳ ಅಂತರದಿಂದ ಎ.ಮಂಜು ಅವರನ್ನು ಗೆಲ್ಲಿಸಬೇಕು ಎಂದರು.

ಅರಸೀಕೆರೆ ಶಾಸಕ ಶಿವಲಿಂಗೇಗೌಡ ಒಬ್ಬ ಜವಾಬ್ದಾರಿಯುತ ಶಾಸಕನಾಗಿದ್ದು, ದೇಶದ ಪ್ರಧಾನಿ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡಬಾರದು. ಅದು ಅವರ ಸಂಸ್ಕೃತಿ ಮತ್ತು ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದರು.

ಹಾಸನದಲ್ಲಿ ಯುವಜನತೆ ಬಿಜೆಪಿ ಕಡೆ ಒಲವು ತೋರುತ್ತಿರುವುದು ಉತ್ತಮ ಬೆಳವಣಿಗೆ. ತಾವು ದಯಮಾಡಿ ಎ.ಮಂಜು ಬೆಂಬಲಿಸಿ ಗೆಲುವಿಗೆ ಶ್ರಮಿಸಬೇಕೆಂದು ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಅವರಲ್ಲಿ ಕೇಳಿಕೊಂಡರು.

ಸೌಹಾರ್ಧಯುತ ಭೇಟಿ: ನನ್ನ ಹಾಗೂ ಪುಟ್ಟೇಗೌಡ ನಡುವೆ ಹಳೆಯ ವಿಶ್ವಾಸವಿದೆ. ಬೆಂಗಳೂರಿನಿಂದ ಹಾಸನಕ್ಕೆ ತೆರಳುವ ವೇಳೆಯಲ್ಲಿ ಮಾತನಾಡಿಸಿಕೊಂಡು ಹೋಗಬೇಕೆನಿಸಿತು. ಆದ್ದರಿಂದ ಭೇಟಿ ನೀಡಿದ್ದೇನೆ. ಎ.ಮಂಜು ಪರ ಮತಯಾಚನೆ ಮಾಡಿದ್ದು, ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದಾಗ ಪುಟ್ಟೇಗೌಡರು ಅದಕ್ಕೆ ದನಿಗೂಡಿಸಿದರು.

ಶಾಸಕ ಜೆ.ಸಿ.ಮಾಧುಸ್ವಾಮಿ, ತಾಲೂಕು ಬಿಜೆಪಿ ಅಧ್ಯಕ್ಷ ಶಿವನಂಜೇಗೌಡ, ರೈತ ಮೋರ್ಚ ಜಿಲ್ಲಾ ಅಧ್ಯಕ್ಷ ಪಟೇಲ್ ಮಂಜುನಾಥ್, ತಾಲೂಕು ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

ಮಂಡ್ಯದಲ್ಲಿ ಬೇರೆಯವರ ಆಟ ನಡೆಯುವುದಿಲ್ಲ…
ಮಂಡ್ಯ ಜಿಲ್ಲೆಯಲ್ಲಿ ಸುಮಲತಾ ಅಂಬರೀಷ್ ಅವರಿಗೆ ಬಿಜೆಪಿಯು ಸಂಪೂರ್ಣ ಬೆಂಬಲ ನೀಡಲಿದ್ದು, ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅಂಬರೀಷ್ ಅವರು ವಿಜಯಶಾಲಿಯಾಗುವ ಬಗ್ಗೆ ವಿಶ್ವಾಸ ನನಗಿದೆ. ಬೇರೆ ಯಾರ ಆಟ ಕೂಡ ಅಲ್ಲಿ ನಡೆಯುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿ ಅವರ ಹೆಸರು ಹೇಳದೆ ಟಾಂಗ್ ನೀಡಿದರು.