ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಿ

ನರಗುಂದ: ಹುಲ್ಲೂರ ಗ್ರಾಪಂ ವ್ಯಾಪ್ತಿಯಲ್ಲಿ ಬಸವ ವಸತಿ ಯೋಜನೆ ಫಲಾನುಭವಿಗಳ ಆಯ್ಕೆ ಪಟ್ಟಿಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಲೋಪವೆಸಗಿದ್ದಾರೆ. ಆದ್ದರಿಂದ ಪಿಡಿಒ ಮತ್ತು ಕಾರ್ಯದರ್ಶಿ ಮೇಲೆ ತನಿಖೆ ಕೈಗೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಶಾಸಕ ಸಿ.ಸಿ. ಪಾಟೀಲ ರೋಣ ತಾಪಂ ಇಒ ಎಂ.ವಿ. ಚಳಗೇರಿ ಅವರಿಗೆ ಸೂಚಿಸಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ 2019-20ನೇ ಸಾಲಿನ ಮೊದಲ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಕೈಗೊಂಡು ಅವರು ಮಾತನಾಡಿದರು. ಬಸವ ವಸತಿ ಯೋಜನೆಯಡಿ ನಾನು 49 ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಿ ನೀಡಿದ್ದೆ. ಆದರೆ, ಅದರಲ್ಲಿನ ಅರ್ಹ ಫಲಾನುಭವಿಗಳನ್ನು ತೆಗೆದು ಹಾಕಲಾಗಿದೆ. ಹಾಗೆ ಮಾಡಲು ನಿಮಗೇನು ಅಧಿಕಾರವಿದೆ ಎಂದು ಪಿಡಿಒ ವಿರುದ್ಧ ಹರಿಹಾಯ್ದರು. ಕುರಡಗಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದೆ ಎಂದು ಗ್ರಾಮಸ್ಥರಿಂದ ಆರೋಪ ಕೇಳಿ ಬಂದಿದೆ ಎಂದರು. ಇದಕ್ಕೆ ರೋಣ ಪಿಎಸ್​ಐ ನಡುವಿನಮನಿ ಪ್ರತಿಕ್ರಿಯಿಸಿ, ಕಳೆದ 15 ದಿನಗಳ ಅವಧಿಯಲ್ಲಿ ಎರಡು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಲಾಗಿದೆ ಎಂದರು. ಪಾಪನಾಸಿ, ಲಕ್ಕುಂಡಿ ಗ್ರಾಮಗಳ 5 ಲಕ್ಷ ರೂ. ವೆಚ್ಚದ ರಸ್ತೆ ದುರಸ್ತಿ ಕಾಮಗಾರಿ ಕಳಪೆಯಾಗಿದೆ. ಪರಿಶೀಲನೆ ಕೈಗೊಂಡು ಸೂಕ್ತ ಕ್ರಮ ಕೈಗೊಳ್ಳಿ ಎಂದು ಶಾಸಕರು ಗದಗ ತಾಪಂ ಇಒ ಸದಾಶಿವ ಜಿನಗಾ ಅವರಿಗೆ ಸೂಚಿಸಿದರು. ಕದಡಿ ಗ್ರಾಮದಲ್ಲಿ ಜಿಪಂದಿಂದ ವಿವಿಧ ಕಾಮಗಾರಿಗಳಿಗಾಗಿ 58 ಲಕ್ಷ ರೂ. ಬಿಡುಗಡೆಯಾಗಿದೆ. ಇದರಲ್ಲಿ ಕೇವಲ 17 ಲಕ್ಷ ರೂ. ಮಾತ್ರ ವಿನಿಯೋಗಿಸಲಾಗಿದ್ದು, ಸರಿಯಾಗಿ ಅನುದಾನ ಬಳಸಿಕೊಳ್ಳುವಂತೆ ತಾಕೀತು ಮಾಡಿದರು. ತಾಪಂ ಅಧ್ಯಕ್ಷ ಪ್ರಭುಲಿಂಗಪ್ಪ ಯಲಿಗಾರ, ತಾಪಂ ಉಪಾಧ್ಯಕ್ಷೆ ದೀಪಾ ನಾಗನೂರ, ಜಿಪಂ ಸದಸ್ಯರಾದ ರೇಣುಕಾ ಅವರಾದಿ, ರಾಜೂಗೌಡ ಕೆಂಚನಗೌಡ್ರ, ಶಿವಕುಮಾರ ನೀಲಗುಂದ, ತಾಪಂ ಸದಸ್ಯ ಟಿ.ಬಿ. ಶಿರಿಯಪ್ಪಗೌಡ್ರ, ತಹಸೀಲ್ದಾರರಾದ ಆಶೆಪ್ಪ ಪೂಜಾರ, ಶರಣಮ್ಮ ಕಾರಿ, ಶ್ರೀನಿವಾಸಮೂರ್ತಿ ಕುಲಕರ್ಣಿ, ಚನ್ನಪ್ಪ ಅಂಗಡಿ, ಆರ್.ಎನ್.ಪಾಟೀಲ, ಗ್ರಾಪಂ, ತಾಪಂ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಪಂ ಪಿಡಿಒಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *