ಪಿಡಿಒಗೆ ಶಾಸಕ ಬೊಮ್ಮಾಯಿ ತರಾಟೆ

ಬಂಕಾಪುರ: ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ಪೂರ್ಣಗೊಂಡರೂ ಬಿಲ್ ಪಾವತಿಸದೆ ಗ್ರಾಮದ ಅಭಿವೃದ್ಧಿಗೆ ಸಹಕರಿಸದ ಪಿಡಿಒಗೆ ಶಾಸಕ ಬಸವರಾಜ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡ ಘಟನೆ ಹಳೇಬಂಕಾಪುರ ಗ್ರಾಮದಲ್ಲಿ ನಡೆಯಿತು.

ಬುಧವಾರ ಸಂಜೆ ಗ್ರಾಮದಲ್ಲಿನ ವಿವಿಧ ಕಾಮಗಾರಿಗೆ ಭೂಮಿ ಪೂಜೆ ಮತ್ತು ಗ್ರಾ.ಪಂ. ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ ಶಾಸಕರಿಗೆ, ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಪಿಡಿಒ ಕಾರ್ಯವೈಖರಿ ಬಗೆಗೆ ದೂರು ನೀಡಿದರು.

ಕಾಮಗಾರಿ ಮುಗಿದು ಆರು ತಿಂಗಳು ಗತಿಸಿದರೂ ಇದುವರೆಗೆ ಬಿಲ್ ಪಾವತಿಸದೆ ಸತಾಯಿಸುತ್ತಿದ್ದಾರೆ. ಈ ಬಗೆಗೆ ಕೇಳಿದರೆ ನೀವು ಕೈಗೊಂಡ ಕಾಮಗಾರಿ ಬಗ್ಗೆ ದೂರುಗಳು ಬಂದಿವೆ ಎಂದು ಕುಂಟು ನೆಪ ಹೇಳಿ ಸತಾಯಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಶಾಸಕರ ಮುಂದೆ ಅಳಲು ತೋಡಿಕೊಂಡರು.

ಸಮಸ್ಯೆ ಆಲಿಸಿದ ಶಾಸಕರು, ಅಲ್ಲಿಯೇ ಇದ್ದ ಪಿಡಿಒ ಮತ್ತು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಚಂದ್ರು ಪೂಜಾರರನ್ನು ಕರೆದು, ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿದ್ದು ಗ್ರಾಮದ ಅಭಿವೃದ್ಧಿ ಮಾಡಲಿಲ್ಲ ಅಂದರೆ, ಈ ಇಲಾಖೆಯಲ್ಲಿ ಯಾಕೆ ಇದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.

20 ದಿನಗಳಿಂದ ಶುದ್ಧ ನೀರಿನ ಘಟಕ ಕೆಟ್ಟು ಹೋಗಿದೆ. ಇನ್ನೂ ರಿಪೇರಿ ಮಾಡಿಲ್ಲ. ಕೂಡಲೆ ನರೇಗಾ ಸಮಸ್ಯೆ ಬಗೆಹರಿಸಿ ಎಂದು ಸೂಚಿಸಿದರು.

ಇದಕ್ಕೂ ಪೂರ್ವ ಗ್ರಾಮದಲ್ಲಿ 10 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ, ಚರಂಡಿ, 20 ಲಕ್ಷ ರೂ. ಅನುದಾನದಲ್ಲಿ ಗ್ರಾ.ಪಂ ಮೊದಲನೇ ಅಂತಸ್ತಿನ ಕಟ್ಟಡ ಅಡಿಗಲ್ಲು ಸಮಾರಂಭ ನೆರವೇರಿಸಿದರು.

ಗ್ರಾ.ಪಂ. ಅಧ್ಯಕ್ಷ ನಿಂಗಪ್ಪ ಕಮ್ಮಾರ, ತಾ.ಪಂ. ಅಧ್ಯಕ್ಷೆ ಪಾರವ್ವ ಆರೇರ, ಜಿ.ಪಂ. ಅಧ್ಯಕ್ಷೆ ಶೋಭಾ ಗಂಜಿಗಟ್ಟಿ, ನಾಗರಾಜ ಪಾಟೀಲ, ಕಮಲವ್ವ ಹರಿಜನ, ಮಂಜುನಾಥ ಮಲ್ಲಾಡದ, ಹಣಮಂತಪ್ಪ ತಳ್ಳಳ್ಳಿ, ಮಹಾಂತೇಶ ಬಾವಿಕಟ್ಟಿ, ಸುಭಾಸ ತಳವಾರ, ಶಂಕ್ರಪ್ಪ ಮೂಡಣ್ಣವರ ಇತರರು ಇದ್ದರು. ಶಿಕ್ಷಕ ಪಿ.ಎಂ. ಹದ್ದಣ್ಣವರ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *