ಪಿಡಿಒಗೆ ಲೈಂಗಿಕ ಕಿರುಕುಳ ಆರೋಪ

ಮಳವಳ್ಳಿ/ಬೆಳಕವಾಡಿ: ತಾಲೂಕಿನ ಕಗ್ಗಲೀಪುರ ಪಿಡಿಒ ಜತೆ ತಾಲೂಕು ಯೋಜನಾಧಿಕಾರಿ ಅನುಚಿತ ವರ್ತನೆ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಿಡಿಒ ಯಶಸ್ವಿನಿ ಜತೆ ತಾಲೂಕು ಯೋಜನಾಧಿಕಾರಿ ಪವನ್ ಕುಮಾರ್ ಅನುಚಿತವಾಗಿ ವರ್ತಿಸಿದ್ದಲ್ಲದೆ, ಗ್ರಾಪಂನಲ್ಲಿ ಎಳೆದಾಡಿದ್ದಾರೆ ಎಂದು ಆರೋಪಿಸಿ ಯಶಸ್ವಿನಿ ಪತಿ ದೂರು ನೀಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ಕಗ್ಗಲೀಪುರ ಗ್ರಾಪಂನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒ ಯಶಸ್ವಿನಿ ಜತೆ ಪವನ್ ಕುಮಾರ್ ಸಲುಗೆಯಿಂದ ಮಾತನಾಡುತ್ತಿದ್ದ. ದಿನಕಳೆದಂತೆ ಪೋನ್‌ನಲ್ಲೇ ಅಸಭ್ಯವಾಗಿ ಅಂಗಾಂಗ ವರ್ಣನೆ ಮಾಡುತ್ತಾ ಕಾಮಚೇಷ್ಟೆಗೆ ಬೇಡಿಕೆ ಇಟ್ಟ ಪವನ್‌ಕುಮಾರ್, ಸಹಕರಿಸದಿದ್ದರೆ ಯಾವುದಾದರೊಂದು ಆರೋಪಕ್ಕೆ ಸಿಲುಕಿಸಿ ಕೆಲಸದಿಂದ ಅಮಾನತು ಮಾಡುವುದಾಗಿ ಬೆದರಿಕೆಯೊಡ್ಡಿದ್ದ. ಇದರಿಂದ ಭಯಗೊಂಡು ಪಿಡಿಒ ಯಶಸ್ವಿನಿ ಕಳೆದ ಎರಡು ತಿಂಗಳಿನಿಂದ ಪವನ್ ಕುಮಾರ್‌ನಿಂದ ಅಂತರ ಕಾಯ್ದುಕೊಂಡಿದ್ದರು.

ಇದರಿಂದ ಆಕ್ರೋಶಗೊಂಡ ಪವನ್ ಕುಮಾರ್ ಸೋಮವಾರ ಮದ್ಯ ಸೇವನೆ ಮಾಡಿಕೊಂಡು ಕಗ್ಗಲೀಪುರ ಗ್ರಾಮ ಪಂಚಾಯಿತಿಗೆ ತೆರಳಿ ಕರ್ತವ್ಯದಲ್ಲಿದ್ದ ಪಿಡಿಒ ಯಶಸ್ವಿನಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಗ್ರಾಮಸ್ಥರ ಪ್ರತಿಭಟನೆ:
ಗ್ರಾಮ ಪಂಚಾಯಿತಿ ಒಳನುಗ್ಗಿ ಕರ್ತವ್ಯದಲ್ಲಿದ್ದ ಮಹಿಳಾ ಪಿಡಿಒ ಮೇಲೆ ತಾಲೂಕು ಯೋಜನಾಧಿಕಾರಿ ಹಲ್ಲೆ ನಡೆಸಿರುವುದನ್ನು ಖಂಡಿಸಿ ಮಂಗಳವಾರ ಗ್ರಾಮಸ್ಥರು ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಾಲೂಕು ಪಂಚಾಯಿತಿ ಇಒ ಸತೀಶ್, ಕರ್ತವ್ಯದಲ್ಲಿದ್ದ ಮಹಿಳಾ ಪಿಡಿಒಗೆ ಹಲ್ಲೆ ನಡೆಸಿರುವ ಸಾಕ್ಷೃಗಳು ಪಂಚಾಯಿತಿ ಸಿಸಿಟಿವಿಯಲ್ಲಿ ದಾಖಲಾಗಿವೆ. ಈಗಾಗಲೇ ಪಿಡಿಒ ಪೊಲೀಸರಿಗೆ ದೂರು ನೀಡಿರುವುದರಿಂದ ಪೊಲೀಸರೊಡನೆ ಪಂಚಾಯಿತಿಗೆ ಆಗಮಿಸಿ ಕೂಡಲೇ ಯೋಜನಾಧಿಕಾರಿಯ ವಿರುದ್ಧ ಶಿಸ್ತುಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಗ್ರಾಮದ ಮುಖಂಡರಾದ ಪರಶಿವಮೂರ್ತಿ, ಮಹೇಶ್, ನಂಜೇಗೌಡ, ವೀರಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.