ಪಿಡಿಒಗಳಿಗೆ ನೋಟಿಸ್ ನೀಡಿ

ಹಾವೇರಿ: ಗ್ರಾಮವಿಕಾಸ ಯೋಜನೆಯಡಿ ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗ ಹಾಗೂ ಕೆಆರ್​ಐಡಿಎಲ್ ವತಿಯಿಂದ ಕೈಗೊಂಡಿರುವ ಕಾಮಗಾರಿಗಳಿಗೆ ಆಯ್ಕೆಯಾದ ಕೆಲ ಗ್ರಾಮಗಳಲ್ಲಿ ಇನ್ನೂ ಕಾಮಗಾರಿ ಆರಂಭಿಸದಿರುವ ಭರಡಿ ಹಾಗೂ ಹುರಳಿಹಾಳ ಗ್ರಾಪಂ ಪಿಡಿಒಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಸೂಚಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಜರುಗಿದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಆರ್ಥಿಕ ವರ್ಷದ ಅನುದಾನದಲ್ಲಿ ಜಿಲ್ಲೆಯ ವಿವಿಧ ಇಲಾಖೆಯಡಿ ನಿರ್ವಣವಾಗಿರುವ ಕಟ್ಟಡಗಳ ನಿರ್ವಣದ ಪ್ರಗತಿ ಹಾಗೂ ವೆಚ್ಚವಾದ ಅನುದಾನದ ವಿವರ ಪರಿಶೀಲಿಸಿ ಇಲಾಖೆವಾರು ಕಟ್ಟಡಗಳ ಪ್ರಗತಿ ಹಾಗೂ ಗುಣಮಟ್ಟ ಕುರಿತಂತೆ ಸ್ಥಳಪರಿಶೀಲನೆ ಮಾಡಲಾಗುವುದು. ಈ ಕುರಿತಂತೆ ದಿನಾಂಕ ನಿಗದಿಪಡಿಸಬೇಕು. ಪೂರ್ಣ ಅನುದಾನ ಬಿಡುಗಡೆಯಾದರೂ ನಿರ್ಮಾಣ ಆರಂಭಿಸದ ಕಟ್ಟಡಗಳನ್ನು ತ್ವರಿತವಾಗಿ ಆರಂಭಿಸಬೇಕು. ನಿವೇಶನ ಇತ್ಯಾದಿ ಸಮಸ್ಯೆಗಳನ್ನು ಇಲಾಖೆ ಮುಖ್ಯಸ್ಥರು ಸಂಬಂಧಿಸಿದವರನ್ನು ಸಂರ್ಪಸಿ ಪರಿಹರಿಸಬೇಕು ಎಂದರು.

ಜಿಲ್ಲೆಯ ಕೆಲವು ಭಾಗಗಳಲ್ಲಿ ಅಡಕೆ ಸಸಿಯ ಮೇಲೆ ಕೆಂಪು ರಸ ಉತ್ಪತ್ತಿಯಾಗುವ ರೋಗ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ತೋಟಗಾರಿಕಾ ಅಧಿಕಾರಿಗಳು ರೈತರ ತೋಟಗಳಿಗೆ ಭೇಟಿ ನೀಡಿ ರೋಗ ನಿವಾರಣೆಗೆ ರೈತರಿಗೆ ಸೂಕ್ತ ಸಲಹೆ ನೀಡಬೇಕು. ತೋಟಗಾರಿಕೆ ತಜ್ಞರು ರೈತರ ತೋಟಗಳಿಗೆ ಭೇಟಿ ನೀಡಿ ಕಾಲಕಾಲಕ್ಕೆ ಪರಿಶೀಲನೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ತೋಟಗಾರಿಕೆ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

ರೈತರಿಗೆ ವಿತರಿಸಿರುವ ನೆರಳು ಪರದೆ ಕಳಪೆ ಗುಣಮಟ್ಟದ್ದಾಗಿದೆ ಎಂದು ರೈತರು ದೂರು ನೀಡಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಲು ತೋಟಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು. ಕೃಷಿ ಇಲಾಖೆಯಿಂದ ವಿತರಿಸುವ ಕೃಷಿ ಹೊಂಡದ ತಾಡಪಾಲುಗಳನ್ನು ನೇರವಾಗಿ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೂಲಕ ವಿತರಣೆಯಾಗಬಾರದು ಎಂದು ಸೂಚಿಸಿದರು.

ತುಂಗಾ ಮೇಲ್ದಂಡೆ ಯೋಜನೆಯಡಿ ರಾಣೆಬೆನ್ನೂರು, ರಟ್ಟಿಹಳ್ಳಿ ಹಾಗೂ ಹಿರೇಕೆರೂರು ಭಾಗದಲ್ಲಿ ನಿರ್ವಣವಾಗುತ್ತಿರುವ ಕಾಲುವೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಮುಖ್ಯ ಕಾಲುವೆ ಜೊತೆಗೆ ಹೊಲಗಾಲುವೆಗಳನ್ನು ನಿರ್ವಿುಸಬೇಕು. ಕಾಡಾಕ್ಕೆ ಈ ಕುರಿತಂತೆ ಮನವಿ ಮಾಡಿಕೊಳ್ಳಬೇಕು. ಹೊಲಗಾಲುವೆ ಇಲ್ಲದೆ ಜಮೀನಿನಲ್ಲಿ ನೀರು ಹಾದು ಹೋದರೂ ನೂರಾರು ಎಕರೆ ಜಮೀನಿಗೆ ನೀರುಣಿಸಲು ಸಾಧ್ಯವಾಗಿಲ್ಲ. ಈ ಕುರಿತಂತೆ ಆದ್ಯತೆಯ ಮೇಲೆ ಕ್ರಮ ವಹಿಸಬೇಕು ಎಂದು ಯುಟಿಪಿ ಇಂಜಿನಿಯರ್​ಗೆ ಸೂಚಿಸಿದರು.

ಅನುದಾನ ಸಮರ್ಪಕ ಬಳಕೆ ಮಾಡಿ

ಮಹಿಳೆಯರು, ಅಂಗವಿಕಲರು, ಹಿರಿಯ ನಾಗರಿಕರು, ರೈತರು, ವಿದ್ಯಾರ್ಥಿಗಳು ಒಳಗೊಂಡಂತೆ ವಿವಿಧ ವರ್ಗಗಳಿಗೆ ಸರ್ಕಾರ ರೂಪಿಸಿರುವ ಯೋಜನೆಗಳು ಸಕಾಲಕ್ಕೆ ಆಯಾ ವರ್ಗದ ಜನರಿಗೆ ತಲುಪಬೇಕು. ಆಯಾ ವರ್ಷವೇ ಬಿಡುಗಡೆಯಾದ ಅನುದಾನ ಪೂರ್ಣ ಪ್ರಮಾಣದಲ್ಲಿ ವೆಚ್ಚ ಮಾಡಬೇಕು. ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಈ ಕುರಿತಂತೆ ತ್ವರಿತವಾಗಿ ಕ್ರಮ ವಹಿಸಬೇಕು. ಜನಪ್ರತಿನಿಧಿಗಳ ನೇತೃತ್ವದಲ್ಲಿ ಫಲಾನುಭವಿಗಳ ಆಯ್ಕೆ ಮಾಡುವ ಸಂದರ್ಭದಲ್ಲಿ ನಿರಂತರ ಸಂಪರ್ಕದೊಂದಿಗೆ ತ್ವರಿತವಾಗಿ ಫಲಾನುಭವಿಗಳನ್ನು ಆಯ್ಕೆಮಾಡಿ ಕೇಂದ್ರ ಕಚೇರಿಯೊಂದಿಗೆ ಸಂಪರ್ಕ ಸಾಧಿಸಿ ಅನುದಾನ ಬಿಡುಗಡೆಗೆ ಕ್ರಮ ವಹಿಸಬೇಕು ಎಂದು ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ದೀಪಾ ಅತ್ತಿಗೇರಿ, ಸಿಇಒ ಕೆ. ಲೀಲಾವತಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ದುಗ್ಗತ್ತಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಾರುತಿ ರಾಠೋಡ, ಕೃಷಿ ಹಾಗೂ ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಲೀಲಾವತಿ ಚವ್ಹಾಣ, ಉಪಕಾರ್ಯದರ್ಶಿ ಜಿ. ಗೋವಿಂದಸ್ವಾಮಿ, ಸಿಪಿಒ ಕುಮಾರ ಮಣ್ಣವಡ್ಡರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *