ಪಿಚ್​ಗೆ ಫೈರ್ ಟ್ರೀಟ್​ವೆುಂಟ್

ಹುಬ್ಬಳ್ಳಿ: ಮಳೆಯಿಂದ ಒದ್ದೆಯಾಗಿದ್ದ ರಾಜನಗರ ಕೆಎಸ್​ಸಿಎ ಮೈದಾನವನ್ನು ಒಣಗಿಸಲು ಫೈರ್ ಟ್ರೀಟ್​ವೆುಂಟ್​ನ್ನು ಮೊದಲ ಬಾರಿ ಪ್ರಯೋಗ ಮಾಡಲಾಯಿತು.

ಬುಧವಾರ ಪದೇ ಪದೆ ಕಾಡಿದ ಮಳೆಯಿಂದ ಎರಡು ಪಂದ್ಯಗಳು ಒಂದು ಎಸೆತ ಕಾಣದೆ ರದ್ದಾದವು. ಪಿಚ್ ಹಾಗೂ 30 ಯಾರ್ಡ್ ಸುತ್ತಳತೆಯ ಪ್ರದೇಶ ಸುರಕ್ಷಿತವಾಗಿತ್ತು. ಆದರೆ, 30 ಯಾರ್ಡ್ ಹೊರಗಿನ ಮೈದಾನ ತೇವಾಂಶದಿಂದ ಕೂಡಿತ್ತು. ಮೈದಾನದಲ್ಲಿನ ತೇವಾಂಶ ಕಡಿಮೆ ಮಾಡಲು 5-6 ಲಾರಿ ಫೈನ್ ಸ್ಯಾಂಡ್ (ಮರಳು) ಹಾಗೂ ಕಟ್ಟಿಗೆ ಪುಡಿ ಬಳಕೆ ಮಾಡಲಾಗಿದೆ. ಆದರೂ ತೇವಾಂಶ ಕಡಿಮೆಯಾಗಿರಲಿಲ್ಲ. ಕೊನೆಯಲ್ಲಿ ಬಳಕೆಗೆ ತಂದಿದ್ದು ಫೈರ್ ಟ್ರೀಟ್​ವೆುಂಟ್.

ಅಗಲವಾದ ಲೋಹದ ಟ್ರೇನಲ್ಲಿ ಉರುವಲು ಕಟ್ಟಿಗೆ, ಕಾಗದ ಹಾಗೂ ಇಂದನ ಬಳಸಿ ಬೆಂಕಿ ಹೊತ್ತಿಸಲಾಗುತ್ತದೆ. ಸಾಕಷ್ಟು ಉರಿದ ಬಳಿಕ ಕಾದ ಟ್ರೇನ್ನು ಮೈದಾನದಲ್ಲಿ ಎಳೆದುಕೊಂಡು ಹೋಗಿ ಒದ್ದೆ ಭಾಗ ಒಣಗಿಸಲು ಪ್ರಯತ್ನಿಸಲಾಗುತ್ತದೆ. ಬುಧವಾರ ಗ್ರೌಂಡ್ಸ್ ಸಿಬ್ಬಂದಿ ಇಂಥ 3 ಟ್ರೇ ಬಳಸಿ ಸುಮಾರು 3 ತಾಸು ಮೈದಾನ ಒಣಗಿಸುವ ಕಸರತ್ತು ನಡೆಸಿದರು.

ನಗರದಲ್ಲಿ ಕಳೆದ ಒಂದೂವರೆ ತಿಂಗಳಿಂದ ಜಿಟಿ ಜಿಟಿ ಮಳೆಯ ವಾತಾವರಣವಿದೆ. ಬಿಸಿಲು ಕಾಣಿಸಿದ್ದೆ ಅಪರೂಪ. ಹಾಗಾಗಿ ಮೈದಾನದಲ್ಲಿ ಸಾಕಷ್ಟು ತೇವಾಂಶವಿದೆ. ಸಣ್ಣ ಮಳೆ ಬಂದರೂ ಪಂದ್ಯ ನಡೆಸಲು ಸಾಧ್ಯವಾಗಿಲ್ಲ. ಒಂದೆರಡು ದಿನ ಪ್ರಖರ ಬಿಸಿಲು ಕಾಣಿಸಿಕೊಂಡರೆ ಮಾತ್ರ ತೇವಾಂಶ ಕಡಿಮೆಯಾಗಲು ಸಾಧ್ಯವಿತ್ತು.

ಬುಧವಾರ ಹುಬ್ಬಳ್ಳಿ ಟೈಗರ್ಸ್-ಬಳ್ಳಾರಿ ಟಸ್ಕರ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್-ಬಿಜಾಪುರ ಬುಲ್ಸ್ ನಡುವಿನ ಪಂದ್ಯ ರದ್ದಾಯಿತು. ಆಟ ನೋಡಲು ಬಂದ ಪ್ರೇಕ್ಷಕರು ನಿರಾಸೆ ಅನುಭವಿಸಿದರು. 2-3 ತಾಸು ಮಳೆಯಿಲ್ಲದಿದ್ದರೂ ಪಂದ್ಯ ನಡೆಸಲು ವಿಳಂಬ ಮಾಡುತ್ತಿದ್ದಾರೆಂದು ಕೆಲ ಪ್ರೇಕ್ಷಕರಿಂದ ಆಕ್ರೋಶ ಸಹ ವ್ಯಕ್ತವಾಯಿತು.