ಬೆಳಗಾವಿ: ಪ್ರಧಾನಮಂತ್ರಿ ಕಾರ್ಯಾಲಯದ ನಿರ್ದೇಶನದಂತೆ ಭದ್ರತಾ ವ್ಯವಸ್ಥೆ, ಶಿಷ್ಟಾಚಾರ ಹಾಗೂ ವೇದಿಕೆ ನಿರ್ಮಾಣ ಸೇರಿ ಪ್ರತಿಯೊಂದು ಕೆಲಸವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಕಾರ್ಯಕ್ರಮ ಯಶಸ್ಸಿಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೂಚಿಸಿದರು.
ಫೆ.27ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯ ಉನ್ನತ ಅಧಿಕಾರಿಗಳ ಜತೆ ಬುಧವಾರ ವಿಡಿಯೋ ಸಂವಾದ ಮೂಲಕ ಪೂರ್ವಸಿದ್ಧತೆ ಪರಿಶೀಲನೆ ಸಭೆ ನಡೆಸಿ ಮಾಹಿತಿ ಪಡೆದ ಅವರು, ಅಂತಿಮ ಕಾರ್ಯಕ್ರಮ ಪಟ್ಟಿ ಪ್ರಕಾರ ಕೊನೆಗಳಿಗೆಯಲ್ಲಿನ ಕೆಲವು ಮಾರ್ಪಾಡುಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ತುರ್ತು ವೈದ್ಯಕೀಯ ಸೌಲಭ್ಯ, ಭದ್ರತೆ ಮತ್ತು ಸಂಚಾರ ನಿರ್ವಹಣೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಶಿಷ್ಟಾಚಾರ ಪಾಲನೆ ಸೇರಿ ಪ್ರತಿಯೊಂದು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಪ್ರಧಾನಮಂತ್ರಿಗಳ ತಾತ್ಕಾಲಿಕ ಕಾರ್ಯಕ್ರಮ ಪಟ್ಟಿಯ ಪ್ರಕಾರ ಸಂಬಂಧಿಸಿದ ಇಲಾಖೆಗಳ ಜತೆ ಚರ್ಚಿಸಿ ಈಗಾಗಲೇ ಕಾರ್ಯಕ್ರಮದ ಸಿದ್ಧತೆಗಳನ್ನು ಆರಂಭಿಸಲಾಗಿದ್ದು, ಪ್ರಧಾಮಂತ್ರಿಗಳ ಕಾರ್ಯಾಲಯ ಹಾಗೂ ಎಸ್‌ಪಿಜಿ ಅಧಿಕಾರಿಗಳ ತಂಡದ ನಿರ್ದೇಶನದ ಅನ್ವಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ವಿಡಿಯೋ ಸಂವಾದದಲ್ಲಿ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ, ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಜಿಪಂ ಸಿಇಒ ಹರ್ಷಲ್ ಭೋಯಾರ್, ಎಸ್ಪಿ ಡಾ.ಸಂಜೀವ ಪಾಟೀಲ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಉಪ ವಿಭಾಗಾಧಿಕಾರಿ ಬಲರಾಮ ಚವ್ಹಾಣ, ಡಿಎಚ್‌ಒ ಡಾ.ಮಹೇಶ ಕೋಣಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ ಸೇರಿ ಇತರರಿದ್ದರು.
ಅಧಿಕಾರಿಗಳ ಸಮಿತಿ ರಚನೆ
27ರಂದು ಪ್ರಧಾನಮಂತ್ರಿ ಅವರ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಲಿರುವುದರಿಂದ ಪಾರ್ಕಿಂಗ್ ಮತ್ತು ಊಟದ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಬೇಕು. ತುರ್ತು ವೈದ್ಯಕೀಯ ಸೌಲಭ್ಯ, ಶುದ್ಧ ಕುಡಿಯುವ ನೀರು, ಮೊಬೈಲ್ ಶೌಚಗೃಹ ಮತ್ತಿತರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚಿಸಿದರು. ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಸಿದ್ಧತೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಪ್ರತಿಯೊಬ್ಬ ಅಧಿಕಾರಿ ತಮಗೆ ವಹಿಸಲಾದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು ಎಂದು ತಿಳಿಸಿದರು.