ಪಿಂಚಣಿ ನೀಡದ್ದಕ್ಕೆ ಹೋರಾಟ

ದೊಡ್ಡಬಳ್ಳಾಪುರ: ವೃದ್ಧಾಪ್ಯ ವೇತನ ಸೇರಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಸರ್ಕಾರದಿಂದ ಬಿಡುಗಡೆಯಾಗುವ ಹಣವನ್ನು ಅಂಚೆ ಕಚೇರಿಯಿಂದ ಫಲಾನುಭವಿಗಳಿಗೆ ವಿತರಣೆ ಮಾಡದಿರುವ ಕ್ರಮ ಖಂಡಿಸಿ ನಗರದ ಪ್ರಧಾನ ಅಂಚೆ ಕಚೇರಿ ಮುಂದೆ ಕರೇನಹಳ್ಳಿ ನಾಗರಿಕ ಹಿತರಕ್ಷಣ ಸಮಿತಿ ಸೋಮವಾರ ಪ್ರತಿಭಟನೆ ನಡೆಸಿತು.

ಸಮಿತಿ ಮುಖಂಡ ಕೆರಮಲಬದ್ರಿ ಮಾತನಾಡಿ, ನವೆಂಬರ್​ನಿಂದಲೂ ಪಿಂಚಣಿ ಹಣ ನೀಡಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಸೂಕ್ತ ಉತ್ತರ ನೀಡುತ್ತಿಲ್ಲ. ಸರ್ಕಾರದಿಂದ ಪ್ರತಿ ತಿಂಗಳು ಹಣ ಬರುತ್ತಿದೆ. ಈ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಿ ಅಂಚೆ ಇಲಾಖೆಗೆ ಮಾಹಿತಿ ಕಳುಹಿಸಲಾಗಿದೆ. ಆದರೆ ಅಂಚೆ ಕಚೇರಿ ಅಧಿಕಾರಿಗಳು ಸಿಬ್ಬಂದಿ ಕೊರತೆ ಇದೆ ಎನ್ನುವ ನೆಪ ಹೇಳಿ ಸೌಲಭ್ಯ ತಲುಪಿಸುತ್ತಿಲ್ಲ ಎಂದು ಆರೋಪಿಸಿದರು.

ತಾಲೂಕಿನಲ್ಲಿ 32,000 ಜನರಿಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಬರುತ್ತಿದೆ. ಇದರಲ್ಲಿ 16,000 ಫಲಾನುಭವಿಗಳು ನಗರ ವ್ಯಾಪ್ತಿಯಲ್ಲಿ ಇದ್ದಾರೆ. ಪ್ರತಿ ದಿನವು ಫಲಾನುಭವಿಗಳು ಕಚೇರಿಗೆ ಅಲೆಯುವಂತಾಗಿದೆ. ಬಾಕಿ ಪಿಂಚಣಿ ಹಣವನ್ನು ಫಲಾನುಭವಿಗಳಿಗೆ ವಿತರಣೆ ಮಾಡಬೇಕು. ಇಲ್ಲವಾದರೆ ವಾರದ ಗಡುವಿನ ನಂತರ ಅಂಚೆ ಕಚೇರಿ ಮುಂದೆ ನಿರಂತರವಾಗಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರೇನಹಳ್ಳಿ ನಿವಾಸಿ ದೇವೀರಮ್ಮ ಮಾತನಾಡಿ, ನಮ್ಮ ಮನೆಯಲ್ಲಿ ಆನಾರೋಗ್ಯ ಪೀಡಿತರೇ ಹೆಚ್ಚಾಗಿದ್ದು, ಪ್ರತಿ ತಿಂಗಳು ಮಾಸಿಕ ಪಿಂಚಣಿ ಬರುತಿತ್ತು.ಇದರಿಂದ ಔಷಧ, ಮಾತ್ರೆ ಖರ್ಚಿಗೆ ಅನುಕೂಲವಾಗುತಿತ್ತು. ಆದರೆ ಐದು ತಿಂಗಳಿಂದಲು ಪಿಂಚಣಿ ನೀಡಿಲ್ಲ. ಕೂಲಿ ಮಾಡಿ ಜೀವನ ಮಾಡುವ ಜನ ನಾವು ಔಷಧ, ಮಾತ್ರೆಗೆ ಸಾಲ ಮಾಡುವಂತಾಗಿದೆ ಎಂದು ಅಳಲು ತೋಡಿಕೊಂಡರು.

ನಗರದ ಅಂಚೆ ಕಚೇರಿ ವ್ಯವಸ್ಥಾಪಕ ರಮೇಶ್​ಬಾಬು ಮಾತನಾಡಿ, ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಪಿಂಚಣಿ ವಿತರಣೆ ಮಾಡುವುದು ಕಷ್ಟವಾಗಿದೆ. ಜೂನ್ 15ರ ಒಳಗೆ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕರೇನಹಳ್ಳಿ ನಾಗರೀಕ ಹಿತರಕ್ಷಣ ಸಮಿತಿ ಅಧ್ಯಕ್ಷ ಆರ್.ಶ್ರೀನಿವಾಸ್, ಉಪಾಧ್ಯಕ್ಷ ಉಗ್ರಾಪು ಅಶ್ವತ್ಥ್, ಖಜಾಂಚಿ ರಮೇಶ್ ಇತರರು ಇದ್ದರು.

 

Leave a Reply

Your email address will not be published. Required fields are marked *