ಪಿಂಚಣಿಗಾಗಿ ಫಲಾನುಭವಿಗಳ ಪರದಾಟ

ಮುಂಡರಗಿ: ತಾಲೂಕಿನ ಪಿಂಚಣಿ ಫಲಾನುಭವಿಗಳಿಗೆ ಕಳೆದ ಏಳೆಂಟು ತಿಂಗಳಿಂದ ಪಿಂಚಣಿ ಬಂದಿಲ್ಲ. ಹೀಗಾಗಿ ಪಿಂಚಣಿದಾರರು ತಹಸೀಲ್ದಾರ್ ಕಚೇರಿಗೆ ನಿತ್ಯ ಅಲೆದಾಡುವಂತಾಗಿದೆ. ಕೆ-2 ವ್ಯವಸ್ಥೆ ಆರಂಭವಾದಾಗಿಂದ ತಾಲೂಕಿನ 65 ಪಿಂಚಣಿದಾರರ ಹೆಸರು ತಾತ್ಕಾಲಿಕವಾಗಿ ಅಮಾನತುಗೊಂಡಿವೆ. ಖಜಾನೆಯಲ್ಲಿ ತಾತ್ಕಾಲಿಕವಾಗಿ ಅಮಾನತುಗೊಂಡಿರುವ ಪಿಂಚಣಿದಾರರ ಹೆಸರು ಪುನಃ ಸೇರಿಸುವಂತೆ ಬೆಂಗಳೂರಿನ ಸಾಮಾಜಿಕ ಭದ್ರತಾ ಪಿಂಚಣಿ ಇಲಾಖೆಗೆ ತಹಸೀಲ್ದಾರ್ ಇಲಾಖೆಯಿಂದ ಮನವಿ ಸಲ್ಲಿಸಲಾಗಿದೆ. ಈ ಕೆಲ ತಾಂತ್ರಿಕ ದೋಷದಿಂದ ಪಿಂಚಣಿ ಸ್ಥಗಿತಗೊಂಡಿದೆ.

ಸರ್ಕಾರ ನೀಡುವಂತ ಪಿಂಚಣಿ ಹಣವು ತಾಲೂಕಿನ ಅದೆಷ್ಟೋ ಜನರ ಬದುಕಿಗೆ ಆಸರೆಯಾಗಿದೆ. ಕೆ-1 ಮತ್ತು ಕೆ-2 ಮೂಲಕ 1,333 ವೃದ್ಧರು, 4,580 ವಿಧವೆಯರು, 2,291 ಅಂಗವಿಕಲರು, 5,134 ಸಂದ್ಯಾ ಸುರಕ್ಷಾ, 298 ಮನಸ್ವಿನಿ, 13 ರೈತ ವಿಧವೆಯರು, 2 ಮೈತ್ರಿ ಮೂಲಕ ಮಾಸಿಕ ಪಿಂಚಣಿ ಪಡೆದುಕೊಳ್ಳತ್ತಿದ್ದಾರೆ. ಇದರಲ್ಲಿ 65 ಪಿಂಚಣಿದಾರರು ತಾತ್ಕಲಿಕವಾಗಿ ಅಮಾನತುಗೊಂಡಿವೆ.

ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಖಜಾನೆಯಲ್ಲಿ ತಾತ್ಕಲಿಕ ಅಮಾನತುಗೊಂಡಿರುವ ಪಿಂಚಣಿದಾರರ ಹೆಸರನ್ನು ಸೇರ್ಪಡಿಸಿ ಪಿಂಚಣಿ ದೊರೆಯುವಂತೆ ಮಾಡಿಕೊಡಬೇಕು ಎಂದು ಪಿಂಚಣಿ ಫಲಾನುಭವಿಗಳು ಒತ್ತಾಯಿಸಿದ್ದಾರೆ.

ನನ್ನ ಬುದ್ಧಿಮಾಂದ್ಯ ಮಗನಿಗೆ ಸರ್ಕಾರದಿಂದ ಬರುತ್ತಿದ್ದ ಪಿಂಚಣಿ ಸ್ಥಗಿತಗೊಂಡಿದೆ. ಆ ಹಣವು ಔಷಧಿಗೆ ಸಹಾಯ ಆಗ್ತಿತ್ರಿ. ಆದರೆ, ಕಳೆದ ಏಳೆಂಟು ತಿಂಗಳಿಂದ ಪಿಂಚಣಿ ಬರುತ್ತಿಲ್ಲ. ಇದರಿಂದ ನಮಗೆ ತೊಂದರೆಯಾಗಿದೆ. ಸರ್ಕಾರ ಪಿಂಚಣಿ ಬರುವಂಗ್ ಕ್ರಮ ಕೈಗೊಳ್ಳಬೇಕು.

| ಬಸಮ್ಮ ಹಟ್ಟಿ, ಬುದ್ಧಿಮಾಂದ್ಯ ಮಗನ ತಾಯಿ

ಕೆ-2 ಪ್ರಾರಂಭಗೊಂಡಾಗಿನಿಂದ 65 ಪಿಂಚಣಿದಾರರ ಹೆಸರು ಖಜಾನೆಯಲ್ಲಿ ತಾತ್ಕಾಲಿಕವಾಗಿ ಅಮಾನತುಗೊಂಡ ಹಿನ್ನೆಲೆಯಲ್ಲಿ ಮಾಸಿಕ ಪಿಂಚಣಿ ಸ್ಥಗಿತಿಗೊಂಡಿವೆ. ಈ ಕುರಿತು ಸಂಬಂಧಿಸಿದ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು.

| ಭ್ರಮರಾಂಬ ಗುಬ್ಬಿಶೆಟ್ಟಿ, ತಹಸೀಲ್ದಾರ್