ಪಾಸ್ ದರ ಏರಿಕೆಗೆ ವಿರೋಧ

ದೇವನಹಳ್ಳಿ: ಮುನ್ಸೂಚನೆ ನೀಡದೆ ದಿನದ ಹಾಗೂ ಮಾಸಿಕ ಬಸ್ ಪಾಸ್ ದರ ಏರಿಕೆ ಮಾಡಿರುವ ಬಿಎಂಟಿಸಿ ನಡೆ ಖಂಡಿಸಿ ಪ್ರಯಾಣಿಕರು ಬುಧವಾರ ಪಟ್ಟಣದಲ್ಲಿ ಬಸ್ ತಡೆದು ಪ್ರತಿಭಟಿಸಿದರು.

ಸಂಸ್ಥೆ ಜೂ.12ರಿಂದ ನಿಗದಿತ ದರಕ್ಕಿಂತ 6 ರೂಪಾಯಿ ಏರಿಕೆ ಮಾಡಿದೆ. ಇದನ್ನು ಪ್ರಯಾಣಿಕರು ಪ್ರಶ್ನಿಸಿದಾಗ ಬಸ್ ನಿರ್ವಾಹಕ ಹಾಗೂ ಪ್ರಯಾಣಿಕರ ನಡುವೆ ಜಟಾಪಟಿ ನಡೆದು ಪ್ರಯಾಣಿಕರು ಪತ್ರಿಭಟನೆಗೆ ಮುಂದಾದರು. ಕೆಲವು ಕಡೆ ಬಸ್ ನಿರ್ವಾಹಕರು ಪ್ರಯಾಣಿಕರ ಜತೆ ಘರ್ಷಕ್ಕಿಳಿದು ಬಸ್ ನಿಲ್ಲಿಸಿ ಧರಣಿ ನಡೆಸಿದರು.

ಸಾದಹಳ್ಳಿ ಟೋಲ್​ನಲ್ಲಿ ಬಿಎಂಟಿಸಿ ಸಂಸ್ಥೆ ಪ್ರತಿ ಟ್ರಿಪ್​ಗೆ 405 ರೂ. ಸುಂಕ ಪಾವತಿ ಮಾಡುತ್ತಿದ್ದು, ನಷ್ಟ ತಪ್ಪಿಸಲು ವಿದ್ಯಾರ್ಥಿ ಹಾಗೂ ಹಿರಿಯ ನಾಗರಿಕರ ಪಾಸ್ ಹೊರತುಪಡಿಸಿ ದಿನದ ಹಾಗೂ ಮಾಸಿಕ ಪಾಸ್ ದರ 6 ರೂಪಾಯಿಗೆ ಏರಿಕೆ ಮಾಡಿರುವುದನ್ನು ವಿರೋಧಿಸಿದರು.

ಪ್ರಯಾಣಿಕರ ಮನವೊಲಿಕೆ: ಶಾಸಕ ನಿಸರ್ಗ ನಾರಾಯಣಸ್ವಾಮಿ ಮಧ್ಯ ಪ್ರವೇಶಿಸಿ ಬಿಎಂಟಿಸಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು. ದರ ಏರಿಕೆ ಪರಿಶೀಲನೆ ನಡೆಸುವವರೆಗೂ ಹಳೆಯ ದರ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಶೀಘ್ರವೇ ಸಮಸ್ಯೆ ಬಗೆಹರಿಸುವುದಾಗಿ ಪ್ರಯಾಣಿಕರ ಮನವೊಲಿಸಿದರು. ಶಾಸಕರ ಭರವಸೆಗೆ ಒಪ್ಪಿದ ಪ್ರಯಾಣಿಕರು ಪ್ರತಿಭಟನೆ ಹಿಂದಕ್ಕೆ ಪಡೆದರು.

ಬಿಎಂಟಿಸಿ ಉತ್ತರ ವಲಯ ವಿಭಾಗೀಯ ಅಧಿಕಾರಿ ಎಸ್.ಕೆ.ಹಿರೇಮಠ್, ಡಿಪೋ ಮ್ಯಾನೇಜರ್​ಗಳಾದ ರವೀಂದ್ರ, ಸುರೇಶಬಾಬು, ಚಾಲಕರ ಸಂಘದ ಪದಾಧಿಕಾರಿ ಚನ್ನಕೇಶವ ಹಾಗೂ ಇತರರು ಇದ್ದರು.

 

ಟೋಲ್ ಸುಂಕ ಹಾಗೂ ಡಿಸೇಲ್ ದರ ಏರಿಕೆ ಹಿನ್ನೆಲೆಯಲ್ಲಿ ಬಿಎಂಟಿಸಿ ದಿನದ ಹಾಗೂ ಮಾಸಿಕ ಬಸ್ ಪಾಸ್​ಗಳ ದರವನ್ನು 6 ರೂಪಾಯಿಗೆ ಏರಿಕೆ ಮಾಡಿದೆ. ಸಂಸ್ಥೆಗೆ ಉಂಟಾಗುತ್ತಿರುವ ನಷ್ಟ ತಪ್ಪಿಸಲು ದರ ಏರಿಸಲಾಗಿದೆ. ಶಾಸಕರ ಆದೇಶದಂತೆ ಸದ್ಯ ಬೆಲೆ ಏರಿಕೆ ಹಿಂದಕ್ಕೆ ಪಡೆಯಲಾಗಿದೆ.

| ವಿಶ್ವನಾಥ್, ಬಿಎಂಟಿಸಿ ಮುಖ್ಯ ಸಂಚಾರ ಅಧಿಕಾರಿ, ಬೆಂಗಳೂರು

 

Leave a Reply

Your email address will not be published. Required fields are marked *