Thursday, 13th December 2018  

Vijayavani

Breaking News

ಪಾಸ್​ಪೋರ್ಟ್​ನಲ್ಲಿ ವಿಳಾಸ ಅಳಿಸಲು ಚಿಂತನೆ

Saturday, 13.01.2018, 3:02 AM       No Comments

ನವದೆಹಲಿ: ಗುರುತು, ವಿಳಾಸದ ದೃಢೀಕರಣಕ್ಕೆ ಬಳಕೆಯಾಗುತ್ತಿದ್ದ ಪಾಸ್​ಪೋರ್ಟ್​ನಲ್ಲಿ ಕೊನೆಯ ಪುಟದಲ್ಲಿದ್ದ ವಿಳಾಸವನ್ನು ತೆಗೆದುಹಾಕಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಇದು ಕಾರ್ಯರೂಪಕ್ಕೆ ಬಂದರೆ ಪಾಸ್​ಪೋರ್ಟ್ ವಿಳಾಸದ ದೃಢೀಕರಣಕ್ಕೆ ಸೂಕ್ತ ದಾಖಲೆ ಆಗುವುದಿಲ್ಲ.

ಮುಂದಿನ ಸರಣಿಯ ಪಾಸ್​ಪೋರ್ಟ್​ಗಳಲ್ಲಿ ಕೆಲವೊಂದು ಗಮನಾರ್ಹ ಬದಲಾವಣೆ ತರಲು ಸಚಿವಾಲಯ ಕ್ರಮ ಕೈಗೊಳ್ಳುವ ಸಾಧ್ಯತೆಯಿದ್ದು, ಪಾಸ್​ಪೋರ್ಟ್​ನ ಬಣ್ಣ ಬದಲಿಸಲು ಕೂಡ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಪಾಸ್​ಪೋರ್ಟ್ ನಲ್ಲಿ ಮೊದಲ ಪುಟದಲ್ಲಿ ವ್ಯಕ್ತಿಯ ಹೆಸರು, ಫೋಟೋ, ಪಾಸ್​ಪೋರ್ಟ್ ಸಂಖ್ಯೆ, ರಾಷ್ಟ್ರೀಯತೆ ಇರುತ್ತದೆ. ಕೊನೆಯ ಪುಟದಲ್ಲಿ ಸಂಪೂರ್ಣ ಕಾಯಂ ವಿಳಾಸವಿರುತ್ತದೆ.

ವಿದೇಶಾಂಗ ಸಚಿವಾಲಯದ ಪಾಸ್​ಪೋರ್ಟ್ ಮತ್ತು ವೀಸಾ ವಿಭಾಗದ ಅಧೀನ ಕಾರ್ಯದರ್ಶಿ ಸುರೇಂದ್ರ ಕುಮಾರ್ ಪ್ರಕಾರ, ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ಸರಣಿಯಲ್ಲಿ ಹೊಸ ಪಾಸ್​ಪೋರ್ಟ್ ಗಳು ಮುದ್ರಣಗೊಂಡಾಗ ಈ ಕ್ರಮ ಜಾರಿಗೆ ಬರಲಿದೆ. ಆದರೆ ಚಾಲ್ತಿಯಲ್ಲಿರುವ ಪಾಸ್​ಪೋರ್ಟ್​ಗಳಲ್ಲಿ ಈ ವಿವರ ಇರುತ್ತದೆ. ನವೀಕರಿಸಿ, ಹೊಸ ಪಾಸ್​ಪೋರ್ಟ್ ನೀಡುವಾಗ ಅವರಿಗೆ ನೂತನ ಸರಣಿಯ ಪಾಸ್​ಪೋರ್ಟ್ ಲಭಿಸಲಿದೆ ಎಂದಿದ್ದಾರೆ.

ಪಾಸ್​ಪೋರ್ಟ್​ನ ಕೊನೆಯ ಪುಟ ತೆಗೆದುಹಾಕಿದರೂ, ಅದರಲ್ಲಿನ ವಿಳಾಸ ಮತ್ತಿತರ ವಿವರಗಳು ವಲಸೆ ವಿಭಾಗ, ಪಾಸ್​ಪೋರ್ಟ್ ಕಚೇರಿಯಲ್ಲಿ ಇರುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎನ್ನಲಾಗಿದೆ. ಅಲ್ಲದೆ 2012ರಿಂದ ವಿತರಿಸಲಾಗುತ್ತಿರುವ ಪಾಸ್​ಪೋರ್ಟ್​ಗಳಲ್ಲಿ ಬಾರ್​ಕೋಡ್ ಜಾರಿಮಾಡಲಾಗಿದೆ. ಇದರಿಂದ ಎಲ್ಲ ವಿವರವನ್ನು ಬಾರ್​ಕೋಡ್ ಮೂಲಕ ಪಡೆಯಲು ಸಾಧ್ಯವಾಗುತ್ತಿದೆ. -ಏಜೆನ್ಸೀಸ್

ಬಣ್ಣದಲ್ಲೂ ಬದಲಾವಣೆ

ಪ್ರಸ್ತುತ ಮೂರು ಬಣ್ಣದ ಪಾಸ್​ಪೋರ್ಟ್​ಗಳನ್ನು ವಿತರಿಸಲಾಗುತ್ತಿದೆ. ಬಿಳಿ ಬಣ್ಣದ ಪಾಸ್​ಪೋರ್ಟ್ ಸರ್ಕಾರಿ ಅಧಿಕಾರಿಗಳು ಮತ್ತು ಅಧಿಕೃತ ಇಲಾಖೆ ಮೂಲಕ ವಿದೇಶ ಪ್ರಯಾಣ ಕೈಗೊಳ್ಳುವವರಿಗೆ ನೀಡಲಾಗುತ್ತದೆ. ಕೆಂಪು ಬಣ್ಣದ ಪಾಸ್​ಪೋರ್ಟನ್ನು ರಾಯಭಾರ ಕಚೇರಿ ಅಧಿಕಾರಿಗಳಿಗೆ ಮತ್ತು ನೀಲಿ ಬಣ್ಣದ ಪಾಸ್​ಪೋರ್ಟ್ ಗಳನ್ನು ಜನಸಾಮಾನ್ಯರಿಗೆ ನೀಡಲಾಗುತ್ತದೆ. ನೀಲಿ ಬಣ್ಣದ ಪಾಸ್​ಪೋರ್ಟ್​ನಲ್ಲಿ ಎರಡು ವರ್ಗಗಳಿವೆ. ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗೆ ಒಳಪಡುವ (ಇಸಿಆರ್) ಪಾಸ್​ಪೋರ್ಟ್ ಹೊಂದಿರುವ ವ್ಯಕ್ತಿಗಳದ್ದು ಒಂದು ವರ್ಗವಾದರೆ, ತಪಾಸಣೆಯಿಂದ ವಿನಾಯಿತಿ ಪಡೆದವರ ವರ್ಗಕ್ಕೆ (ಇಸಿಎನ್​ಆರ್) ಇನ್ನೊಂದು ಪಾಸ್​ಪೋರ್ಟ್ ನೀಡಲಾಗುತ್ತದೆ. ಈ ಎರಡೂ ಪಾಸ್​ಪೋರ್ಟ್ ಗಳ ಬಣ್ಣ ನೀಲಿಯಾಗಿರುವ ಕಾರಣ ತಪಾಸಣೆಯ ಸಂದರ್ಭದಲ್ಲಿ ಕೆಲವೊಮ್ಮೆ ಗೊಂದಲ ಉಂಟಾಗುತ್ತಿದೆ. ಇಸಿಆರ್ ವರ್ಗದವರಿಗೆ ಕಿತ್ತಳೆ ಬಣ್ಣದ ಪಾಸ್​ಪೋರ್ಟ್ ನೀಡಲು ಚಿಂತನೆ ನಡೆದಿದೆ.

Leave a Reply

Your email address will not be published. Required fields are marked *

Back To Top