ಪಾಶ್ವಾತ್ಯ ಸಂಸ್ಕೃತಿ ಅನುಕರಣೆ ಮಾರಕ

ಧಾರವಾಡ: ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಭಾರತೀಯರಿಂದಲೇ ನಮ್ಮ ಸಂಸ್ಕೃತಿ ಹಾಳಾಗುತ್ತಿದೆ ಎಂದು ಉಡುಪಿಯ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ವನವಾಸಿ ರಾಮಮಂದಿರದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಮಾಳಮಡ್ಡಿಯ ಪ್ರಹ್ಲಾದ ವಿದ್ಯಾರ್ಥಿ ನಿಲಯದ ವಜ್ರ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಆಶೀರ್ವವಚನ ನೀಡಿದರು.

ಭಾರತೀಯ ಸಂಸ್ಕೃತಿ ಹಾಳಾಗುತ್ತಿರುವುದರಿಂದಲೇ ಅನೇಕ ಬುದ್ಧಿಜೀವಿಗಳು ರಾಮ, ಕೃಷ್ಣನನ್ನು ಕಡೆಗಣಿಸುವ ಮೂಲಕ ಅವರ ಬಗ್ಗೆ ಅಪಹಾಸ್ಯ ಮಾಡುತ್ತಿದ್ದಾರೆ. ನಮ್ಮ ಹಿರಿಯರು ನೀಡಿದ ಅಸ್ತ್ರವಾದ ಸಂಸ್ಕೃತಿಯನ್ನು ನಾವು ಕಾಪಾಡುವ ಮೂಲಕ ಯುವ ಪೀಳಿಗೆಗೆ ಸಹ ಅದನ್ನು ನೀಡುವ ಕೆಲಸ ಮಾಡಬೇಕು ಎಂದರು.

ಒಬ್ಬ ವ್ಯಕ್ತಿಯ ಹಬ್ಬ ಬಂದರೆ ಆಯುಷ್ಯದಲ್ಲಿನ ಒಂದು ವರ್ಷ ಕಡಿಮೆಯಾಯಿತು ಎಂದು ಆತಂಕ ಪಡಬೇಕಾಗುತ್ತದೆ. ಆದರೆ, ಸಂಸ್ಥೆಯ ಹಬ್ಬ ಬಂದರೆ ಅದು ಸಂಭ್ರಮಿಸುವ ದಿನ. ಹೀಗೆ ನಾವು ಕಟ್ಟಿದ ಸಂಸ್ಥೆಯ 60ನೇ ವರ್ಷದ ಹಬ್ಬದ ದಿನವನ್ನು ಸಂಭ್ರಮಿಸುವ ಭಾಗ್ಯವನ್ನು ದೇವರು ನೀಡಿದ್ದಾನೆ ಎಂದರು.

ಪೇಜಾವರ ಮಠದ ಕಿರಿಯ ಸ್ವಾಮೀಜಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಾತನಾಡಿ ಆಚಾರ, ವಿಚಾರಗಳು ನಮ್ಮ ಬದುಕಿಗೆ ಅರ್ಥ ಕೊಡುತ್ತವೆ. ಅಂತಹ ಆಚಾರ, ವಿಚಾರಗಳಿಗೆ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಶ್ರೀಗಳು ಈ ಸಂಸ್ಥೆ ಪ್ರಾರಂಭಿಸಿದ್ದಾರೆ. ಹಿರಿಯರು ನೀಡಿದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ನೀಡುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದರು.

ವಿದ್ಯಾವಾಚಸ್ಪತಿ ಡಾ. ಪ್ರಭಂಜನಾಚಾರ್ಯ ವ್ಯಾಸನಕೆರೆ ಮಾತನಾಡಿ, ಪ್ರಹ್ಲಾದ ವಿದ್ಯಾರ್ಥಿ ನಿಲಯ ವಿದ್ಯಾರ್ಥಿಗಳಿಗೆ ಸಂಸ್ಕಾರದ ಜೊತೆಗೆ ಲೌಕಿಕ ಜ್ಞಾನ ನೀಡುವ ಕೆಲಸ ಮಾಡುತ್ತಿದೆ. ಇಂತಹ ಸಂಸ್ಥೆಗಳನ್ನು ಹುಟ್ಟು ಹಾಕುವ ಮಟ್ಟಿಗೆ ನಿಲಯದ ವಿದ್ಯಾರ್ಥಿಗಳು ಬೆಳೆಯಬೇಕು. ಅಂದಾಗ ನಿಲಯದ ಶ್ರಮ ಸಾರ್ಥಕವಾಗಲಿದೆ ಎಂದರು.

ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಮಾತನಾಡಿ, ಶ್ರೀಗಳು ಕಟ್ಟಿದ ಸಂಸ್ಥೆ ಕೇವಲ ವಿದ್ಯಾರ್ಥಿ ನಿಲಯವಾಗಿಲ್ಲ. ವಿದ್ವಾನ್​ರಾಗಲು ಸಂಸ್ಕೃತಿ ನೀಡುವ ಕೇಂದ್ರವಾಗಿದೆ. ಸಮಾಜದಲ್ಲಿ ಹಣ ಹಾಗೂ ಅಧಿಕಾರ ಹೊಂದುವುದು ಹೇಗೆ ಎಂಬುದನ್ನು ತಿಳಿಸಲು ಅನೇಕ ಸಂಸ್ಥೆಗಳಿವೆ. ಆದರೆ ಮನುಷ್ಯನಿಗೆ ಸಂಸ್ಕಾರ ಕಲಿಸಲು ಕೆಲವೇ ಸಂಸ್ಥೆಗಳಿವೆ. ಅಂತಹ ಸಂಸ್ಥೆಗಳಲ್ಲಿ ಈ ನಿಲಯವೂ ಒಂದು ಎಂದರು.

ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ರಾಜೀವ ಪಾಟೀಲ ಕುಲಕರ್ಣಿ, ಅಧ್ಯಕ್ಷತೆ ವಹಿಸಿದ್ದ ನಿಲಯದ ಅಧ್ಯಕ್ಷ ಎಸ್.ಆರ್. ಕೌಲಗುಡ್ಡ ಮಾತನಾಡಿದರು. ನಿಲಯದ ಹಳೇ ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು.

ಇದಕ್ಕೂ ಪೂರ್ವದಲ್ಲಿ ಪ್ರಹ್ಲಾದ ವಿದ್ಯಾರ್ಥಿ ನಿಲಯದಿಂದ ವನವಾಸಿ ರಾಮಮಂದಿರದವರೆಗೆ ಪೇಜಾವರ ಶ್ರೀಗಳ ಭವ್ಯ ಶೋಭಾಯಾತ್ರೆ ನಡೆಯಿತು. ಬೆಳಗ್ಗೆ ಪ್ರಹ್ಲಾದ ವಿದ್ಯಾರ್ಥಿ ನಿಲಯದಲ್ಲಿ ಪೇಜಾವರ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಭಕ್ತರು ಕಿರಿಯ ಶ್ರೀಗಳ ತುಲಾಭಾರ ನೆರವೇರಿಸಿದರು.

ವಿದ್ಯಾಸಾಗರ ದೀಕ್ಷಿತ ಸ್ವಾಗತಿಸಿದರು. ಗುರುರಾವ್ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹ.ವೆಂ. ಕಾಖಂಡಕಿ ನಿರೂಪಿಸಿದರು. ಆರ್.ವೈ. ಕಟ್ಟಿ ವಂದಿಸಿದರು.

ಎಲ್ಲರ ಸಹಕಾರದಿಂದ ಈ ಸಂಸ್ಥೆ ಉತ್ತಮ ಶಿಕ್ಷಣ ಹಾಗೂ ಧಾರ್ವಿುಕ ಸೇವೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ನೀಡುವ ನಿಟ್ಟಿನಲ್ಲಿ ಹೊಸ ಶಿಕ್ಷಣ ಸಂಸ್ಥೆ ಪ್ರಾರಂಭಿಸುವ ಉದ್ದೇಶ ಹೊಂದಿದ್ದು, ಅಲ್ಲಿ ಭಕ್ತಿ, ಅಧ್ಯಾತ್ಮ, ಸುಸಂಸ್ಕೃತ ಶಿಕ್ಷಣ ನೀಡಲಾಗುವುದು. ನಾವು ಇಂಗ್ಲಿಷ್ ವಿರೋಧಿಯಾಗಿದ್ದರೂ ನಮ್ಮ ಸಂಸ್ಥೆಯಲ್ಲಿ ಸಂಸ್ಕೃತಿಯೊಂದಿಗೆ ಇಂಗ್ಲಿಷ್ ಶಿಕ್ಷಣ ನೀಡಲಾಗುವುದು.

ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು 

 

Leave a Reply

Your email address will not be published. Required fields are marked *