ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾಗಬೇಡಿ

ಚಿಕ್ಕಬಳ್ಳಾಪುರ: ಅಜ್ಞಾನವನ್ನು ಕಳೆದು ಸುಜ್ಞಾನವನ್ನು ಬೆಳೆಸುವಲ್ಲಿ ಆಧ್ಯಾತ್ಮಿಕ ಕಾರ್ಯಕ್ರಮಗಳು ಸಹಕಾರಿ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಅಂಕಣಗೊಂದಿ ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ಮೂರನೇ ವರ್ಷದ ರಾಮಕೋಟಿ ಜಪಯಜ್ಞ ಸಪ್ತಾಹಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ತಂತ್ರಜ್ಞಾನ ಬೆಳವಣಿಗೆಯ ತೀವ್ರ ಪೈಪೋಟಿಯ ಯುಗದಲ್ಲಿ ಬಹುತೇಕರು ಸಂವೇದನೆ ಇಲ್ಲದ ಒಂದು ಯಂತ್ರದ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲಸದ ಒತ್ತಡದಲ್ಲಿ ಸುತ್ತಲಿನ ಆಗು ಹೋಗುಗಳ ಬಗ್ಗೆ ತಿಳಿದುಕೊಳ್ಳಲು ಮುಂದಾಗುತ್ತಿಲ್ಲ. ಮತ್ತೊಂದೆಡೆ ಸುಭದ್ರ ದೇಶದ ನಿರ್ವಣದಲ್ಲಿ ಪ್ರಮುಖ ಪಾತ್ರ ವಹಿಸುವ ಯುವಜನರು ಸಾಮಾಜಿಕ ಜಾಲತಾಣಗಳ ಜಾಲಾಡುವಿಕೆಯಲ್ಲೇ ಕಾಲಹರಣ ಮಾಡುತ್ತಿದ್ದು, ಅನಪೇಕ್ಷಿತ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ಸಮಾಜದ ಸ್ವಾಸ್ಥ್ಯ ನಿರೀಕ್ಷೆಗೆ ಅನುಗುಣವಾಗಿ ಸುಧಾರಣೆ ಕಾಣುತ್ತಿಲ್ಲ ಎಂದರು.

ಹಿರಿಯರು ಕಿರಿಯರಿಗೆ ಒಳ್ಳೆಯದು, ಕೆಟ್ಟದರ ಬಗ್ಗೆ ಸಮರ್ಪಕವಾಗಿ ತಿಳಿಸುವುದರ ಜತೆಗೆ ಅನುಕರಣೆಯಲ್ಲೂ ಮಾದರಿಯಾಗಬೇಕು. ನಿರಂತರವಾಗಿ ಸನ್ಮಾರ್ಗದಲ್ಲಿ ನಡೆಯುವಂತಾಗಲು ಉತ್ತಮ ಮಾರ್ಗದರ್ಶನ ನೀಡಬೇಕು. ಈ ನಿಟ್ಟಿನಲ್ಲಿ ಮನೆಗಳಿಂದಲೇ ಸಕಾರಾತ್ಮಕ ಬದಲಾವಣೆಗಳಾಗಬೇಕು ಎಂದರು.

ಭಾರತದ ಕಲೆ, ಸಂಸ್ಕೃತಿ, ಪರಂಪರೆ, ಸಂಪ್ರದಾಯ, ಆಚಾರ ವಿಚಾರಗಳಲ್ಲಿ ಜಗತ್ತಿನ ಗಮನ ಸೆಳೆದಿದೆ. ವಿದೇಶಿಯರು ಇಲ್ಲಿನ ವಿಶಿಷ್ಟ ಆಚರಣೆಗಳನ್ನು ಸ್ವಯಂ ಪ್ರೇರಣೆಯಿಂದ ತಿಳಿದು ಪಾಲಿಸುತ್ತಿದ್ದಾರೆ. ಆದರೆ, ದೇಶೀಯ ಅನೇಕ ಜನರು ಕೀಳರಿಮೆಯಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ ಎಂದು ವಿಷಾದಿಸಿದರು.

ಆಧ್ಯಾತ್ಮಿಕ ಕಾರ್ಯಕ್ರಮಗಳು ಒಳ್ಳೆಯ ಚಿಂತನೆಗಳನ್ನು ಬೆಳೆಸುತ್ತವೆ. ಇದನ್ನರಿತು ಸತ್ಕಾರ್ಯಗಳೊಂದಿಗೆ ಭಗವಂತನನ್ನು ಸ್ಮರಿಸುವ ಮೂಲಕ ಸಾರ್ಥಕತೆಯ ಜೀವನ ನಡೆಸಬೇಕೆಂದು ತಿಳಿಸಿದರು.

ರಾಮಕೋಟಿ ಜಪಯಜ್ಞ ಸಪ್ತಾಹ ಭಕ್ತ ಮಂಡಳಿ ಅಧ್ಯಕ್ಷ ಪಿ.ಎನ್.ಕೃಷ್ಣಪ್ಪ ಮಾತನಾಡಿ, ಲೋಕ ಕಲ್ಯಾಣಾರ್ಥ ಮೂರನೇ ಬಾರಿಗೆ ಚಿಕ್ಕಬಳ್ಳಾಪುರದಲ್ಲಿ ಜಪಯಜ್ಞ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಮೊದಲೇ ಜಿಲ್ಲೆ ಬರದಿಂದ ತತ್ತರಿಸಿದೆ. ಇಲ್ಲಿ ಒಳ್ಳೆಯ ಮಳೆ ಬೆಳೆಯಾಗಿ ಜನರು ನೆಮ್ಮದಿಯಿಂದ ಜೀವನ ನಡೆಸುವಂತಾಗಲು ದೇವರನ್ನು ಪ್ರಾರ್ಥಿಸಲಾಗುತ್ತಿದೆ ಎಂದರು. ರಾಮಕೋಟಿ ಜಪಯಜ್ಞ ಸಪ್ತಾಹ ಭಕ್ತ ಮಂಡಳಿ ಉಪಾಧ್ಯಕ್ಷ ರಂಗಣ್ಣ, ಕಾರ್ಯದರ್ಶಿ ನಾರಾಯಣಪ್ಪ, ಖಜಾಂಚಿ ಕೃಷ್ಣಮೂರ್ತಿ, ಮುಖಂಡ ಗಂಗಾಧರ್ ಮತ್ತಿತರರಿದ್ದರು.

ವಿವಿಧ ತಂಡಗಳ ಭಜನೆ: ಅಂಕಣಗೊಂದಿ ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ರಾಮಕೋಟಿ ಜಪಯಜ್ಞ ಸಪ್ತಾಹಕ್ಕೆ ಚಾಲನೆ ನೀಡಲಾಯಿತು. ಸತ್ಯಜ್ಞಾನ ಸಿದ್ಧಾಶ್ರಮದ ಶ್ರೀ ಅರುಣ್ ಭಗವಾನ್ ಸ್ವಾಮಿ ಭಕ್ತ ಮಂಡಳಿ, ಗಂಗರೆಕಾಲುವೆ ವೀರಾಂಜನೇಯ, ಬೀಚಗಾನಹಳ್ಳಿಯ ವೀರಾಂಜನೇಯ ಭಜನಾ ಮಂಡಳಿ, ಮುದ್ದೇನಹಳ್ಳಿ ಗೋವಿಂದ ತೀರ್ಥಸ್ವಾಮಿ ಗ್ರಾಮೀಣ ಕಲಾ ಸಂಘ ಸೇರಿ ವಿವಿಧ ಭಜನಾ ತಂಡಗಳು ಕಾರ್ಯಕ್ರಮ ನಡೆಸಿಕೊಟ್ಟವು.

 

Leave a Reply

Your email address will not be published. Required fields are marked *