ಪಾಲಿಸುವ ಇಚ್ಛಾಶಕ್ತಿ ನಿಮ್ಮಲ್ಲಿದ್ದರೆ ಕೇಳಿ ಈ ಮೌನದ ಮಾತು!

ಮೊನ್ನೆಯಷ್ಟೇ ವಿಶ್ವ ಯೋಗದಿನ ಮುಗಿಯಿತು. ಆರೋಗ್ಯದ ಕುರಿತು ಕಾಳಜಿ ಇರುವವರು ಅದನ್ನು ಮುಂದುವರಿಸಿದರು. ಮತ್ತೆ ಕೆಲವರು ಆ ದಿನವನ್ನಷ್ಟೇ ಯೋಗಕ್ಕೆ ಮೀಸಲಿಟ್ಟು ಅದಕ್ಕೆಂದೇ ಇರುವ ಚಾಪೆಯನ್ನು ಭದ್ರವಾಗಿ ಮಡಿಚಿಟ್ಟರá– ಬರುವ ವರ್ಷದ ಯೋಗದಿನಕ್ಕೆ. ಮಂತ್ರಿ-ಮಾಗಧರು ಒಂದೆರಡು ದಿನ ಪತ್ರಿಕೆಗಳ ಪುಟಗಳಲ್ಲಿ ರಾರಾಜಿಸಿದರು ಎನ್ನುವಲ್ಲಿಗೆ ಯೋಗದಿನ ಸಂಪನ್ನಗೊಂಡಿತು. ಬೆಳಗ್ಗೆದ್ದು ತಿಂಡಿ ತಿನ್ನುತ್ತೇವೆ, ಕೆಲಸಕಾರ್ಯಗಳಿಗೆ ಹೊರಡುತ್ತೇವೆ. ಊಟಕ್ಕೆಂದು ಸಮಯ ಮೀಸಲಿಡುತ್ತೇವೆ. ನಮ್ಮದೇ ಆರೋಗ್ಯಕ್ಕಾಗಿ ಮಾಡುವ ವ್ಯಾಯಾಮಕ್ಕೊಂದಿಷ್ಟು ಸಮಯ ಇಡಬಾರದೇ ಎಂಬ ಪ್ರಶ್ನೆ ಎಲ್ಲರದ್ದೂ. ಆದರೆ ಇಡುವುದಿಲ್ಲ. ಮನಸ್ಸಿದ್ದರೂ, ಮನೆ-ಮಕ್ಕಳು-ಭವಿಷ್ಯದ ಚಿಂತೆ ಇವೆಲ್ಲದರ ನಡುವೆ ನಮಗೇ ಒಂದಿಷ್ಟು ಹೊತ್ತನ್ನು ಮೀಸಲಿಡಲು ಆಗದ ಎಷ್ಟೋ ಜನ ನಮ್ಮ ನಡುವೆಯೇ ಖಂಡಿತ ಇದ್ದಾರೆ. ಆದರೆ ಒಂದಿಷ್ಟೂ ಕೈ ಕಾಲು ಅಲುಗಿಸದೇ ಮೈ ಬಗ್ಗಿಸದೇ ನೋವು ಮಾಡಿಕೊಳ್ಳದೇ ಆಚರಿಸಲು ಸಾಧ್ಯವಾಗುವ ಮಹಾನ್ ಯೋಗವೊಂದು ಎಲ್ಲರೂ ಮಾಡಬಹುದಾದಂಥದ್ದು; ಇದರಿಂದ ಎಷ್ಟೋ ಜನರ ಆರೋಗ್ಯ ಸರಿ ಹೋಗಬಲ್ಲದು ಎಂದರೆ ಅಚ್ಚರಿಯಾಗುತ್ತದೆಯೇ…?

ಆ ಯೋಗದ ಹೆಸರೇ ‘ಮೌನ’. ನಮ್ಮ ಹಿರಿಯರೇ ಹೇಳಿದ್ದಾರಲ್ಲ ‘ಮಾತು ಬೆಳ್ಳಿ, ಮೌನ ಬಂಗಾರ’ ಅಂತ. ಆ ಬಂಗಾರವನ್ನು ನಮ್ಮೊಳಗೆ ತುಂಬಿಕೊಳ್ಳುವವರು ವಿರಳವಷ್ಟೇ. ಖುಷಿ ತರುವ ಮಾತುಗಳು ಹಿತವಾಗಿ ಕೇಳಿಸಿದರೆ, ನೋವಾಗಿಸಲೆಂದೇ ಹೂಡುವ ಕೊಂಕಿನ ಬಾಣಗಳು ರಣಕರ್ಕಶ. ಈ ನೋಯುವ ಕ್ಷಣಗಳನ್ನು ಜಾಣತನದಿಂದ ನಿವಾರಿಸಲು ಮೌನ ಸಹಕಾರಿ. ಬದುಕಿನಲ್ಲಿ ಎರಡು ಸಂದರ್ಭದಲ್ಲಿ ಮೌನ ಒಳ್ಳೆಯ ಗೆಳೆಯನಾಗಬಲ್ಲದಂತೆ. ಒಂದು, ಮತ್ತೊಬ್ಬರು ನಿಮ್ಮ ಯಾವುದೇ ಮಾತನ್ನು ಅರ್ಥಮಾಡಿಕೊಳ್ಳಲಾರರು ಎನ್ನಿಸಿದಾಗ; ಮತ್ತಿನ್ನೊಂದು, ನೀವು ಮಾತನಾಡದೆಯೇ ಅವರು ನಿಮ್ಮನ್ನು ಅರ್ಥಮಾಡಿಕೊಳ್ಳಬಲ್ಲರು ಎನ್ನಿಸಿದಾಗ…

ನಾವು ಚಿಕ್ಕವರಿದ್ದಾಗ ಬದುಕು ಎಷ್ಟು ಸರಳವಿತ್ತು. ಓರಗೆಯವರೊಡನೆ ಎಷ್ಟೋ ಬಾರಿ ಜಗಳವಾಡುತ್ತಿದ್ದೆವು, ಮಾತು ಬಿಡುತ್ತಿದ್ದೆವು. ಮತ್ತೆ ಅಷ್ಟೇ ವೇಗದಿಂದ ರಾಜಿಯಾಗುತ್ತಿದ್ದೆವು. ಮತ್ತೆ ಕೆಲವು ದಿನಗಳು ನಮ್ಮ ಗೆಳೆತನ ಜನ್ಮ ಜನ್ಮಾಂತರದ್ದು ಎನ್ನುವಷ್ಟು ಗಳಸ್ಯ-ಕಂಠಸ್ಯವೇನೋ ಎಂಬಂತೆ ತೋರುತ್ತಿತ್ತು. ಹೀಗಿದ್ದುದು ಮತ್ತೆ ಕೋಪದ ಕೂಪಕ್ಕೆ ಬೀಳಲೇನೂ ತೊಂದರೆಯೇ ಇಲ್ಲದಂತೆ ಬಿದ್ದೇಬಿಡುತ್ತಿತ್ತು.

ಕೋಪ ಎಂಬ ಕಾಲಘಟ್ಟದಲ್ಲಿ ನಮ್ಮ ನಡುವಿನ ಮೌನ ಬಹಳಷ್ಟನ್ನು ಹೇಳಿಬಿಡುತ್ತಿತ್ತು. ನಿಜಕ್ಕೂ ನಮ್ಮದು ಮಾತಿಲ್ಲದ ಸಂವಾದದ ಸಮಯವಷ್ಟೇ ಆಗ. ನಮ್ಮ ಇಡೀ ದಿನದ ಹೆಚ್ಚಿನ ಸಮಯ ಅವಳೊಡನೆ ಕೋಪ ಎಂಬುದನ್ನು ನೆನಪಿಸುತ್ತಲೇ ಇರುತ್ತಿತ್ತು. ಅವಳ ಪ್ರತಿ ನಡೆ, ನುಡಿಯ ಕಡೆಗೇ ನಮ್ಮ ಗಮನ ಇದ್ದುದು. ನಮ್ಮನ್ನು ನಾವು ನೋಡಿಕೊಳ್ಳುವುದಕ್ಕಿಂತ ಹೆಚ್ಚು ಅವಳ ಬಗೆಗೇ ನಮ್ಮ ಚಿಂತೆ-ಚಿಂತನೆಗಳು ಇರುತ್ತಿದ್ದುದು. ಮತ್ತೆ ಕೈಯೊಳಗೆ ಕೈ ಜೋಡಿಸಿ ಹಗುರಾಗುವ ಸಮಯ ಬಂದೇಬರುತ್ತದೆ ಎಂಬ ದೃಢನಂಬಿಕೆಯೂ ಇದ್ದ ಕಾರಣ ಕೈಗಳು ಸ್ನೇಹವನ್ನು ಬಳಸಿ ತಬ್ಬಲು ಹಾತೊರೆಯುತ್ತಲೇ ಇದ್ದವು, ಯಾರ ತಪ್ಪು ಒಪ್ಪಿನ ಚಿಂತೆ ಇಲ್ಲದೇ!!

ಈಗ ಹಾಗಲ್ಲ. ಬದುಕು ಹಲವು ಮಜಲುಗಳನ್ನು ದಾಟುತ್ತಲೇ ನಾವು ಅದನ್ನು ನಮ್ಮದೇ ಮಾಪಕದಲ್ಲಿ ಅಳೆಯಹೊರಡುತ್ತೇವೆ. ಅದು ಹೀಗೇ ಇರಬೇಕು, ಹೀಗಿದ್ದರೇ ಸರಿ, ನಮ್ಮ ಆಯ್ಕೆಯ ಸತ್ಯವೇ ಅವರದ್ದೂ ಆಗಿರಬೇಕು… ಹೀಗೆ ನಿರೀಕ್ಷೆಗಳು ಹೆಚ್ಚಿದಷ್ಟೂ ನಾವು ನಮ್ಮದೇ ವರ್ತಲದೊಳಗೆ ಸುತ್ತಿಕೊಳ್ಳುತ್ತ ಹೋಗುತ್ತೇವೆ. ಇನ್ನೊಬ್ಬರನ್ನು ಸರಿ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಆಗದ ಮಟ್ಟಿಗೆ ಈ ವ್ಯಸನ ಬೆಳೆದು ಉಳಿದವರನ್ನು ‘ಜಡ್ಜ್’ ಮಾಡಲು ಹೊರಟುಬಿಡುತ್ತೇವೆ ಮೌನವಾಗಿರಬೇಕಾದ ಸಮಯದಲ್ಲಿ..

ಈಗ ನಮ್ಮ ಬದುಕು ನಮ್ಮದೇ ಆಗಿಲ್ಲ. ಸಾಮಾಜಿಕ ಜಾಲತಾಣಗಳಿಂದಾಗಿ ನಮ್ಮನ್ನು ಗಮನಿಸುವವರು ಬಹಳ ಇದ್ದಾರೆ ಎಂದು ನಮ್ಮನ್ನು ನಾವು ನಂಬಿಸಿಕೊಂಡ ಕಾಲವಿದು. ಮಾತುಗಳು ಅಕ್ಷರರೂಪಕ್ಕಿಳಿದು ನಮ್ಮ ಸ್ಟೇಟಸ್ಸುಗಳಾಗಿ, ನಾವ್ಯಾರು? ನಮ್ಮನ್ನು ಜಗತ್ತು ಹೇಗೆ ಗುರುತಿಸಬೇಕು? ಎಂದು ಪರಿಚಯಿಸಿಕೊಳ್ಳುವ ಹಂಬಲ ನಮ್ಮದು. ಇಂತಹ ಧಾವಂತದಲ್ಲಿ ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ತೋರಿಸಲೇಬೇಕು. ಇಲ್ಲದಿದ್ದರೆ ನಮ್ಮ ಇರುವಿಕೆಯ ಗುರುತು ಸಿಕ್ಕದು ಎಂಬ ಭಯದಲ್ಲಿ ಎಲ್ಲವನ್ನೂ ಹೇಳಿಕೊಳ್ಳುವ ಆತುರ ತೋರಿಬಿಡುತ್ತೇವೆ. ಅದನ್ನು ಮೆಚ್ಚಿಕೊಳ್ಳುವವರ ಸಂಖ್ಯೆಯಿಂದ ನಮ್ಮ ಹೆಮ್ಮೆಯ ಬಲೂನು ದೊಡ್ಡದಾಗುತ್ತ ಹೋದಂತೆ, ಒಂದು ಅಡ್ಡಮಾತು ಬಂದರೂ ಸಾಕು ಅದನ್ನು ಹೇಳಿದವನ ಮುಂದೆ ನಮ್ಮನ್ನು ನಂಬಿಸಲು ಹೆಣಗಾಡುತ್ತೇವೆ. ಅದಕ್ಕಾಗಿ ಹೊಸ ಹೊಸ ಮಾತುಗಳನ್ನು ಹುಟ್ಟುಹಾಕುತ್ತೇವೆ. ಒಪ್ಪಿಸಲು ಸಾಧ್ಯವಿಲ್ಲವೋ ಆಗ ಕೆಟ್ಟಮಾತುಗಳಿಂದ ಅವನನ್ನು ಅದುಮಲು ಹೊರಡುತ್ತೇವೆ.. ಇಲ್ಲೆಲ್ಲ ನಮ್ಮ ಶಬ್ದಭಂಡಾರ ಖಾಲಿಯಾಗುವುದೇ ವಿನಾ ಕಾಸಿನ ಪ್ರಯೋಜನ ಖಂಡಿತ ಇರಲಾರದು. ಬರಿ ಗುಲ್ಲು, ನಿದ್ದೆಗೇಡು ಅಷ್ಟೇ.

ಅದರ ಬದಲು ಮೌನವಹಿಸಿದರೆ ಸರಿ… ನಮ್ಮನ್ನು ಕೆಣಕ ಹೊರಟ ಪ್ರಕ್ರಿಯೆ ಮುಂದುವರಿಯುವುದಿಲ್ಲ. ಅವರ ಮಾತುಗಳು ನಮ್ಮನ್ನು ತಾಕಲೇ ಇಲ್ಲ ಅಂದುಕೊಂಡು ಸುಮ್ಮನಿದ್ದರೆ ಸರಿ. ಇನ್ನಷ್ಟು ಘಾಸಿಗೊಳ್ಳುತ್ತಾರೆ. ಮುಂದುವರಿಯುವ ದಾರಿ ಕಾಣದೇ ಸುಮ್ಮನಾಗುತ್ತಾರೆ. ಯಾಕೆಂದರೆ ಮಾತು ಇನ್ನೊಂದು ಮಾತಿಗೆ ಆಸ್ಪದ ನೀಡಿದರೆ, ಮೌನ ಆ ಎಳೆಯನ್ನು ಕಡಿದುಬಿಡುತ್ತದೆ. ಮೌನದ ಕತ್ತಿಯೇಟು ಮಾತಿಗಿಂತ ಹರಿತ. ಗಾಯ ಮಾಡದೇ ಕೊಲ್ಲಬಲ್ಲದು.

ಈ ಮೌನಕ್ಕಿರುವ ಮಹತ್ವ ಬಹಳ. ಯಾರಿಲ್ಲದ ಏಕಾಂತ, ಮಾತಿಗೆ ಜತೆಯಿಲ್ಲದ ಘಳಿಗೆಗಳಲ್ಲಿ ನಮ್ಮೊಳಗಿನ ಮೌನದ ಧ್ವನಿ ಕೇಳಿಸುತ್ತದೆ. ಹೊಸ ಹೊಸ ಆಲೋಚನೆಗಳು ಆಗ ಹುಟ್ಟಬಹುದು. ಬದುಕನ್ನು ಸುಂದರವಾಗಿ ಕಟ್ಟುವ ಕಲೆಗೆ ಇದು ಸಹಕಾರಿಯಾಗಬಹುದು. ನಮ್ಮ ಶಕ್ತಿಯ ಅರಿವು ನಮಗೇ ಇಲ್ಲದ ಸಮಯದಲ್ಲಿ ಮೌನ ಅದನ್ನು ತೋರಿಸಿಕೊಡಬಹುದು. ಮಾತುಗಳನ್ನು ಕೇಳಿಯೋ ಓದಿಯೋ ತಿಳಿಯಬಹುದಾದ ನಮ್ಮ ನಿಜವಾದ ಅಂತಃಸತ್ವವನ್ನು ಮೌನ ತಾನಾಗೇ ಗುರುತಿಸಿ ನಮ್ಮನ್ನು ಗಟ್ಟಿಗೊಳಿಸಬಲ್ಲುದು.

ನಮ್ಮ ತಪ್ಪುಗಳನ್ನು ಪ್ರಶ್ನಿಸುವ ಧೈರ್ಯ ತೋರುವುದೂ ಈ ಮೌನವೇ. ಹೊರಗಿನ ತೋರಿಕೆಯ ಮುಖವಾಡ ಕಳಚಿಟ್ಟ ನಮ್ಮ ಸೋಲುಗಳು, ಸುಳ್ಳುಗಳು, ಹಿಂಜರಿಕೆಗಳು ಹೊರಬರುವುದು ಮೌನದ ಅಂಗಳಕ್ಕೆ. ಮತ್ತವು ಮರುಕಳಿಸದಂತೆ ಮಾಡುವ ಜಾಣ್ಮೆಯೂ ಈ ಮೌನಕ್ಕೇ ಇರುವುದು. ನಮ್ಮೊಳಗಿನ ನಂಬಿಕೆಗಳನ್ನು ಇನ್ನಷ್ಟು ಬಲಪಡಿಸುವ ಕೆಲಸವನ್ನು ಮೌನ ಮಾಡುತ್ತದೆ, ನಮ್ಮ ಯೋಚನೆಗಳು ಸಕಾರಾತ್ಮಕವಾಗಿದ್ದರೆ. ನಾವು ಪ್ರತಿಯೊಬ್ಬರಿಗೂ ಬಿಟ್ಟಿಸಲಹೆ ಕೊಡುತ್ತೇವೆ, ನಮ್ಮ ಮಾತುಗಳನ್ನು ಕೇಳಲೇಬೇಕೆಂಬ ಆಗ್ರಹದಲ್ಲೇ ಮಾತಾಡುತ್ತೇವೆ. ಅವನಿಗೆ ಬೇಕಿದೆಯೋ ಬೇಡವೋ ನಮ್ಮ ಜ್ಞಾನ ಪ್ರದರ್ಶನವಷ್ಟೇ ನಮಗೆ ಮುಖ್ಯ. ಒದರುವುದನ್ನೆಲ್ಲ ಒದರಿ ‘ನಾನು ಹೇಳಿದ ಕಾರಣ ಆಯ್ತು’ ಎಂದು ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವ ಹುಂಬತನ ನಮ್ಮದು. ಅದನ್ನು ಬಿಟ್ಟು ಎದುರಿನವರು ಹೇಳಿದ್ದನ್ನು ಕೇಳಿಸಿಕೊಳ್ಳುವ ತಾಳ್ಮೆ ನಮ್ಮಲ್ಲಿರುವುದಿಲ್ಲ. ಆದರೆ ಮೌನ ನಮ್ಮಲ್ಲಿರುವ ಕೇಳುಗನನ್ನು ಜಾಗೃತಗೊಳಿಸುತ್ತದೆ. ಬೇಕಿದ್ದನ್ನು ಒಳಗಿರಿಸಿಕೊಳ್ಳುವ ಸಾಮರ್ಥ್ಯ ಹೆಚ್ಚಿಸುತ್ತದೆ.

ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುವಾಗ ‘ಪಿನ್ ಡ್ರಾಪ್ ಸೈಲೆನ್ಸ್ ಇರಬೇಕು’ ಎಂದು ಬಯ್ಯುತ್ತಿದ್ದುದು ಇದೇ ಕಾರಣಕ್ಕೆ. ಮೌನ ನಮ್ಮ ಒಳಗಿನ ಜಾಗವನ್ನು ವಿಸ್ತಾರಗೊಳಿಸುತ್ತದೆ. ಹೇಳುವ ವಿಷಯಗಳು ತಲೆಯೊಳಗಿಳಿಯಲು ಇದು ಸಹಕಾರಿ ಎಂಬುದಕ್ಕೆ ಈ ಮೌನಕ್ಕೆ ಒತ್ತು ನೀಡುತ್ತಿದ್ದುದು.

ಇದೆಲ್ಲವೂ ಅಲ್ಲದೇ ಮೌನದ ಇನ್ನೊಂದು ಮಹತ್ತರ ಕೆಲಸ ಶಕ್ತಿಸಂಚಯನ. ಮಾತಿಗಾಗಿ ವ್ಯರ್ಥವಾಗುವ ಶಕ್ತಿಯನ್ನು ತನ್ನಲ್ಲೇ ಕೂಡಿಡುತ್ತದೆ. ಅಗತ್ಯ ಇದ್ದಾಗಷ್ಟೇ ಹೊರ ಬರುವ ಮಾತು ಶಕ್ತಿಶಾಲಿಯಾಗಿ ಹೊರ ಹೊಮ್ಮಲು ಬೇಕಾದ ಪರಿಕರಗಳನ್ನು ಒಳಗೇ ಸಿದ್ಧಪಡಿಸುವ ಚಾಣಾಕ್ಷತನ ಮೌನಕ್ಕಿದೆ. ಇಂತಹ ಫಲಭರಿತ ಮಾತು ಪರಿಣಾಮಕಾರಿಯಾಗಿ ಹೊರ ಬರಲು ಮೌನದ ತಪಸ್ಸು ಕಾರಣವಾಗುತ್ತದೆ. ಶರೀರ ಮತ್ತು ಮನಸ್ಸಿಗೆ ಅಗತ್ಯವಿರುವ ವಿಶ್ರಾಂತಿಯನ್ನು ಮೌನ ಕೊಡಬಲ್ಲುದು. ಅದೊಂದು ಧ್ಯಾನಸ್ಥ ಸ್ಥಿತಿಯಷ್ಟೇ ಮಹತ್ವದ್ದು. ಮೌನ ಒಳ ಮನಸ್ಸನ್ನು ತೆರೆದುಕೊಳ್ಳುತ್ತ ಹೊರಗಿನ ದುಗುಡವನ್ನು ಕರಗಿಸಿಕೊಳ್ಳುತ್ತ ಸಮದರ್ಶನ ನೀಡುತ್ತ ಸಾಗುತ್ತದೆ. ಬದುಕು ಮಾಗುವುದು ಇದರಿಂದಲೇ.

ಈ ಮೌನದ ಮಹತ್ವ ತಿಳಿದ ಕಾರಣವೇ ಋಷಿ ಮುನಿಗಳು ದೂರದ ಕಾಡಲ್ಲಿ ಮೌನದ ಅರಮನೆ ಕಟ್ಟಿ ಒಳಗಣ್ಣಿನಿಂದ ಪ್ರಪಂಚ ಪರ್ಯಟನೆ ಮಾಡುತ್ತಿದ್ದುದು. ದಾಸವರೇಣ್ಯರಾದ ಪುರಂದರದಾಸರು ಮಾತಿನ ಮೂಲವಾದ ನಾಲಿಗೆಯನ್ನು ‘ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ’ ಎಂದು ಬಗೆ ಬಗೆಯಲ್ಲಿ ಕೇಳಿಕೊಂಡಿದ್ದು. ಅದರಲ್ಲೂ ‘ಚಾಡಿ ಹೇಳಲು ಬೇಡ ನಾಲಿಗೆ ನಿನ್ನಾ ಬೇಡಿಕೊಂಬೆನು ನಾಲಿಗೆ’ ಎಂದು ಬೊಗಸೆಯೊಡ್ಡಿದ್ದು. ತಮ್ಮನ್ನು ತಾವು ಸರಿ ಎಂದು ತೋರ್ಪಡಿಸಿಕೊಳ್ಳಲು ಚಾಣಾಕ್ಷರು ಬಳಸುವ ಅಸ್ತ್ರ ಇದೇ ಚಾಡಿ.. ನಮ್ಮ ಬಾಯಿಂದಲೇ ಮಾತುಗಳನ್ನು ಹೊರಡಿಸಿ ಇನ್ನೊಬ್ಬನಲ್ಲಿ ‘ಅವನು ಹೀಗೆ ಹೇಳಿದ’ ಎಂದು ತಮ್ಮ ಸಾಚಾತನವನ್ನು ಒಪ್ಪಿಸಿಕೊಳ್ಳುವ ಕೊಳಕು ಬುದ್ಧಿ ಅವರದ್ದು. ಇನ್ನು ಕೆಲವರದ್ದು ತಾನು ಅವರ ಪರ ಇವರ ಪರ ಎಂದು ಗುಂಪನ್ನು ಒಡೆದು ಸಂಭ್ರಮಿಸುವ ಕೆಟ್ಟ ಚಾಳಿ. ಇದರಿಂದಾಗಿ ಅನವಶ್ಯಕವಾಗಿ ಯಾರ್ಯಾರೋ ಬಲಿಯಾಗಿ ನೋಯುವ ಸ್ಥಿತಿ. ಇಂತಹ ವಿಷವರ್ತಲದಿಂದ ಹೊರ ಬೀಳಲು ಮೌನದ ಅಸ್ತ್ರವೊಂದೇ ರಾಮಬಾಣ. ಮಾತಿಗೆ ಮಾತು ಜೋಡಿಸಿದರೆ ತಾನೇ ಅನವಶ್ಯಕ ನುಡಿಗಳು ಹೊರ ಬೀಳುವುದು.. ಅದೇ ಇಲ್ಲವಾದಲ್ಲಿ..

ಮೌನ ನಮ್ಮ ಮಾನಸಿಕ ಆರೋಗ್ಯವನ್ನು ಹದವಾಗಿಡುತ್ತದೆ. ಮನಸ್ಸಿನ ಸಂತುಲತೆಯನ್ನು ಹೆಚ್ಚಿಸುತ್ತದೆ. ನಾಲಿಗೆಯ ಮೇಲೆ ಈ ಹತೋಟಿ, ನಮ್ಮನ್ನು ದೊಡ್ಡವರನ್ನಾಗಿಸುತ್ತದೆ. ಒಳಗೇ ಪಕ್ವವಾಗಿ ಹೊರ ಬರುವ ನಮ್ಮ ಮಾತುಗಳಿಗೆ ಬೆಲೆ ಸಿಗುತ್ತದೆ. ಮಾತಿನಿಂದ ಗೆಲ್ಲಲಾರದ ಶತ್ರು ಮೌನದಿಂದ ಸೋಲೊಪ್ಪಿಕೊಳ್ಳುವಂತಾಗುತ್ತದೆ. ಸುಲಭವಾಗಿ ರೂಢಿಸಿಕೊಳ್ಳಬಹುದಾದ ಈ ಯೋಗವನ್ನು ದಿನದ ಯಾವ ಹೊತ್ತಿನಲ್ಲೂ ಮಾಡಬಹುದು.

(ಲೇಖಕರು ಸಾಹಿತಿ)

One Reply to “ಪಾಲಿಸುವ ಇಚ್ಛಾಶಕ್ತಿ ನಿಮ್ಮಲ್ಲಿದ್ದರೆ ಕೇಳಿ ಈ ಮೌನದ ಮಾತು!”

  1. ಯಾರು ಈ ಲೇಖಕರು ! ವಂದನೆಗಳು
    ನೀಮಗೆ. ಇದನ್ನು ಓದುತ್ತಿರುವಾಗಲೇ ಶಾಂತಿಯ ವಿಶ್ರಾಂತಿ ಮನಸ್ಸಿಗೆ ಅನುಭವವಾಗುತ್ತಿದೆ
    ಥಾಂಕ್ ಯು

Leave a Reply

Your email address will not be published. Required fields are marked *