ಗೋಣಿಕೊಪ್ಪಲು: ಆಡಳಿತ ಮಂಡಳಿ ಆಡಳಿತಾತ್ಮಕ ಲೋಪವೆಸಗಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಮಡಿಕೇರಿಯ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪಾಲಿಬೆಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 29(ಸಿ) ಸರ್ಕಾರದ ಅಧಿಸೂಚನೆಯ ದತ್ತವಾದ ಅಧಿಕಾರದಂತೆ ಮಡಿಕೇರಿ ಉಪವಿಭಾಗದ ಸಹಾಯಕ ನಿಬಂಧಕರಾದ ಶೈಲಜಾ ಈ ಆದೇಶವನ್ನು ಮಾ.18ರಂದು ಹೊರಡಿಸಿದ್ದು, ಸಂಘದ ಸದರಿ ಸದಸ್ಯರು ಸಂಘದ ಇತರ ಯಾವುದೇ ಸಹಕಾರ ಸಂಘದ ಸಮಿತಿಯ ಸದಸ್ಯರಾಗಿ ಈ ಆದೇಶದ ದಿನಾಂಕದಿಂದ ಮುಂದಿನ 5 ವರ್ಷದ ಅವಧಿಗೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಅಥವಾ ನೇಮಕವಾಗುವುದಕ್ಕೆ ಅನರ್ಹರಾಗಿರುತ್ತಾರೆಂದು ಆದೇಶದಲ್ಲಿ ತಿಳಿಸಿದ್ದಾರೆ.
ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಡಳಿತ ಮಂಡಳಿಯು ಕರ್ತವ್ಯಲೋಪವೆಸಗಿದೆ. ನಿವೃತ್ತಿಯಾಗಿದ್ದ ಅಧಿಕಾರಿಯನ್ನು ಮತ್ತೆ ಕಾನೂನುಬಾಹಿರವಾಗಿ ಸೇವೆ ಮುಂದುವರಿಸುತ್ತಿದ್ದಾರೆ. ಅವರಿಗೆ ಅದೇ ವೇತನವನ್ನು ಮುಂದುವರಿಸುತ್ತಿದ್ದಾರೆ. ಇದರಿಂದ ಸಂಘಕ್ಕೆ ನಷ್ಟ ಸಂಭವಿಸಿದೆ. ಮತ್ತೊಬ್ಬರು ಉದ್ಯೋಗ ಅವಕಾಶದಿಂದ ವಂಚಿತರಾಗುವಂತೆ ಮಾಡಿದ್ದಾರೆ ಎಂದು ಸಂಘದ ಸದಸ್ಯ ಚನ್ನಯ್ಯನಕೋಟೆಯ ಎಚ್.ಪಿ.ಗಣೇಶ್ ಅವರು ಸಹಕಾರ ಸಂಘಗಳ ನಿಬಂಧಕರಿಗೆ 2024ರ ಡಿ.23ರಂದು ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಸಹಕಾರ ಸಂಘದ ನಿಬಂಧಕರು ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿ ಅಗತ್ಯ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಿದ್ದರು.
ದೂರುದಾರರು ನೀಡಿದ ದೂರಿನ ಅನ್ವಯ ತನಿಖೆ ಕೈಗೊಂಡ ಉಪನಿಬಂಧಕರು ಮೇಲ್ನೊಟಕ್ಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತಮ್ಮ ಅಧಿಕಾರವನ್ನು ಬಳಸಿ ಆಡಳಿತ ಮಂಡಳಿ ಸದಸ್ಯರನ್ನು ವಜಾಗೊಳಿಸಿ ಆದೇಶ ನೀಡಿದ್ದಾರೆ.
ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘವು ಕೊಡಗಿನ ಪ್ರತಿಷ್ಠಿತ ಸಹಕಾರ ಸಂಘಗಳಲ್ಲೊಂದಾಗಿದ್ದು 100 ವರ್ಷಗಳನ್ನು ಕಳೆದಿದೆ. ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆಯುವ ಮೂಲಕ ಹೆಸರು ಗಳಿಸಿತ್ತು. ಇದೀಗ ಆಡಳಿತ ಮಂಡಳಿಯ ವಜಾ ಹಿನ್ನೆಲೆಯಲ್ಲಿ ಸಹಕಾರ ಸಂಘಕ್ಕೆ ವಿಶೇಷ ಅಧಿಕಾರಿಗಳನ್ನು ನೇಮಕಗೊಳಿಸುವ ಪ್ರಕ್ರಿಯೆ ಆರಂಭಗೊಂಡಿದೆ.
