ಪಾಲಿಟೆಕ್ನಿಕ್ ಸ್ಥಾಪನೆಗೆ ಸಹಕಾರ

ಮಾಗಡಿ: ಪಟ್ಟಣದಲ್ಲಿ ಕುರುಬ ಸಮುದಾಯಕ್ಕೆ 6 ಎಕರೆ ಜಮೀನು ಮಂಜೂರಾಗಿದ್ದು, ಈ ಜಾಗದಲ್ಲಿ ಪಾಲಿಟೆಕ್ನಿಕ್ ಕಾಲೇಜು ನಿರ್ವಿುಸಲಾಗುವುದೆಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ಹೇಳಿದ್ದರು. ಇದಕ್ಕೆ ಸರ್ಕಾರ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಶಾಸಕ ಎ.ಮಂಜುನಾಥ್ ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕನಕದಾಸರ 531ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಜೂರಾಗಿರುವ ಜಮೀನಿನ ಮಾರುಕಟ್ಟೆ ದರದ ಅರ್ಧದಷ್ಟನ್ನು ಕುರುಬ ಸಮುದಾಯ ಭರಿಸಬೇಕಾಗಿದ್ದು, ಈ ಪೈಕಿ ವೈಯಕ್ತಿಕವಾಗಿ 5 ಲಕ್ಷ ರೂ. ನೀಡುವುದಾಗಿ ತಿಳಿಸಿದರು.

500 ವರ್ಷಗಳ ಹಿಂದೆಯೇ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜವನ್ನು ಯಾವ ರೀತಿ ಕಟ್ಟಬೇಕು ಎಂಬ ಬಗ್ಗೆ ಅರಿವು ಮೂಡಿಸಿದ್ದರು. ಇವರು ತೋರಿಸಿದ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು. ಈಗಲೂ ಉತ್ತರ ಕರ್ನಾಟಕದಲ್ಲಿ ಹಾಲ ಮತಸ್ಥರು(ಕುರುಬ ಸಮಾಜ) ಮುಖ್ಯಸ್ಥರಿಂದಲೇ ಮೊದಲ ಪೂಜೆ ಮಾಡಿಸುವ ಪ್ರತೀತಿ ಇದೆ. ಬಿತ್ತನೆ ಸಂದರ್ಭದಲ್ಲೂ ಇವರಿಂದಲೇ ಆರಂಭ ಮಾಡಿಸಿದರೆ ಶುಭವಾಗುತ್ತದೆಂಬ ನಂಬಿಕೆ ಇದೆ. ಎಚ್.ಎಂ. ರೇವಣ್ಣ, ಸಚಿವ ಬಂಡೆಪ್ಪ ಕಾಶಂಪೂರ ಆಶೀರ್ವಾದದಿಂದ ನಾನಿಂದು ಶಾಸಕನಾಗಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ. ಕುರುಬ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಕನ್ನಡ ಉಪನ್ಯಾಸಕಿ ಡಾ.ಲಲಿತಾಂಬ ಮಾತನಾಡಿ, ನುಡಿದಂತೆ ನಡೆಯುತ್ತಿದ್ದ ಕನಕದಾಸರು, 500 ವರ್ಷಗಳ ಹಿಂದೆ ಮಾಡಿದ ಒಳ್ಳೆಯ ಕೆಲಸಗಳಿಂದ ಈಗಲೂ ಎಲ್ಲರ ಹೃದಯದಲ್ಲಿ ನೆಲೆಸಿದ್ದಾರೆ. ಸರ್ವರಿಗೂ ಸಮ ಬಾಳು ಎಂಬ ಸಂದೇಶ ನೀಡಿದ್ದು, ತಮ್ಮ ಕೀರ್ತನೆಗಳ ಮೂಲಕವೇ ಸಮಾಜದ ಅಂಕು ಡೊಂಕುಗಳನ್ನು ತಿದ್ದಿದ್ದರು ಎಂದು ತಿಳಿಸಿದರು.

ತಹಸೀಲ್ದಾರ್ ರಮೇಶ್ ಮಾತನಾಡಿ, ಸಮ ಸಮಾಜ ನಿರ್ವಣಕ್ಕಾಗಿ ಶ್ರಮಿಸಿದ ಇಂತಹ ದಾಸ ಶ್ರೇಷ್ಠರ ಜಯಂತಿ ಆಚರಿಸುತ್ತಿರುವುದು ಸಂತೋಷವಾಗಿದೆ ಎಂದರು.

ಕಲ್ಯಾ ಗೇಟ್​ನಿಂದ ಅಂಬೇಡ್ಕರ್ ಭವನದವರೆಗೂ ಕನಕದಾಸರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿರಿಸಿ ವಿವಿಧ ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ಮಾಡಲಾಯಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು, ಕುರುಬ ಸಮುದಾಯದ ಹಿರಿಯ ಮುಖಂಡರು ಹಾಗೂ ಸಮಾಜದ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಕನಕದಾಸರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.

ಸ್ಕೇಟಿಂಗ್​ನಲ್ಲಿ ಗಿನ್ನಿಸ್ ದಾಖಲೆ ನಿರ್ವಿುಸಿರುವ ಮಾಗಡಿ ತಾಲೂಕಿನ ಕುದೂರು ಹೋಬಳಿ ದಾಸಪ್ಪನ ಪಾಳ್ಯದ ಮಾಸ್ಟರ್ ಡಾ. ಎಸ್. ಗಗನ್​ಗೆ ಕನಕಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಹಕಾರಿ ಮಹಾ ಮಂಡಲ ನಿರ್ದೇಶಕ ಕೆ.ಕೃಷ್ಣಮೂರ್ತಿ, ಬಮುಲ್ ನಿರ್ದೇಶಕ ನರಸಿಂಹಮೂರ್ತಿ, ತಾಪಂ ಅಧ್ಯಕ್ಷ ಶಿವರಾಜು, ಉಪಾಧ್ಯಕ್ಷೆ ಅಂಬಿಕಾ, ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ್ಯ ನಾಯಕ್, ಬಿಇಒ ಸಿದ್ದೇಶ್ವರ್, ಇಒ ಚಂದ್ರು, ಪಿಡಬ್ಲು್ಯಡಿ ಇಂಜಿನಿಯರ್ ರಾಮಣ್ಣ, ಕುರುಬ ಸಂಘದ ತಾಲೂಕು ಅಧ್ಯಕ್ಷ ಎಂ.ಸಿ.ರಾಜಣ್ಣ, ಉಪಾಧ್ಯಕ್ಷ ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಶಿವಕುಮಾರ್, ಕಾನೂನು ಸಲಹೆಗಾರ ರಾಜಯ್ಯ, ಮುಖಂಡರಾದ ಚನ್ನರಾಜು, ಕಡೆಮನೆ ಕುಮಾರ್, ಮಾಸ್ಟರ್ ಪ್ರಕಾಶ್, ಚಂದ್ರಪ್ಪ, ರಾಜಣ್ಣ, ಉಮಾಶಂಕರ್, ಶಿವಪ್ರಸಾದ್, ಕಲ್ಕರೆ ಶಿವಣ್ಣ, ಚಂದೂರಾಯನಹಳ್ಳಿ ಕೃಷ್ಣ, ದೊಡ್ಡಯ್ಯ, ಪುರಸಭೆ ಸದಸ್ಯರಾದ ಕೆ.ವಿ.ಬಾಲು, ಎಂ.ಎನ್.ಮಂಜು, ದಂಡಿಗೆಪುರ ಕುಮಾರ್, ಹಾರೋಹಳ್ಳಿ ನರಸಿಂಹಮೂರ್ತಿ ಮತ್ತಿತರರು ಭಾಗವಹಿಸಿದ್ದರು.