ಪಾಲಿಕೆ ಸುಪರ್ದಿಗೆ ಡಾ.ವಾಟರ್

ತುಮಕೂರು : ಪಾಲಿಕೆ ವ್ಯಾಪ್ತಿಯ 7, 25 ಹಾಗೂ 32ನೇ ವಾರ್ಡ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಹೈದರಾಬಾದ್ ಮೂಲದ ಡಾ.ವಾಟರ್ ಕಂಪನಿ ಒಡೆತನದ 3 ಶುದ್ಧ ನೀರಿನ ಘಟಕಗಳನ್ನು ಮಹಾನಗರ ಪಾಲಿಕೆ ಮಂಗಳವಾರ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.

ಪಾಲಿಕೆಯ ಜಾಗ ಹಾಗೂ ನೀರು ಪಡೆದು ಕಾರ್ಯನಿರ್ವಹಿಸುತ್ತಿದ್ದ, 7ನೇ ವಾರ್ಡ್​ನ ಅಗ್ರಹಾರದ ಶಿಶುವಿಹಾರ ಶಾಲಾ ಆವರಣ, 25ನೇ ವಾರ್ಡ್​ನ ಸಿದ್ಧಗಂಗಾ ಬಡಾವಣೆ ಹಾಗೂ 32ನೇ ವಾರ್ಡ್​ನ ಗೋಕುಲ ಬಡಾವಣೆಯಲ್ಲಿದ್ದ ಡಾ.ವಾಟರ್ ಘಟಕಗಳನ್ನು ಆಯುಕ್ತ ಟಿ.ಭೂಬಾಲನ್ ನೇತೃತ್ವದಲ್ಲಿ ವಶಕ್ಕೆ ಪಡೆದು ಸಾರ್ವಜನಿಕರ ಬಳಕೆಗೆ ಮರು ಚಾಲನೆ ನೀಡಲಾಯಿತು. ಜತೆಗೆ ಪಾಲಿಕೆಯಿಂದಲೇ ನಿರ್ವಹಣೆ ಮಾಡಲು ಸ್ಥಳದಲ್ಲೇ ಆಯುಕ್ತರ ಆದೇಶ ನೀಡಲಾಯಿತು.

ಮುಗಿದ ಒಪ್ಪಂದ:: ಹೈದರಾಬಾದ್ ಮೂಲದ ಡಾ. ವಾಟರ್ ಕಂಪನಿ ಜತೆ ಪಾಲಿಕೆ 3 ವರ್ಷಗಳ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದ ಅವಧಿ ಮುಗಿದಿದ್ದರೂ ನವೀಕರಣ ಮಾಡದೆ ಹಾಗೂ ಕೆಲ ನ್ಯೂನತೆಗಳನ್ನು ಸರಿಪಡಿಸದೇ ಸರ್ಕಾರದ ನಿಗದಿತ ದರಕ್ಕಿಂತ ಹೆಚ್ಚಿನ ಹಣವನ್ನು ಜನರಿಂದ ವಸೂಲಿ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಆಯುಕ್ತ ಭೂಬಾಲನ್ ಏಕಾಏಕಿ ದಾಳಿ ನಡೆಸಿ ಈ ಘಟಕಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದರ ಪರಿಷ್ಕರಣೆ: 3 ವರ್ಷಗಳಿಂದ ಡಾ. ವಾಟರ್ ಕಂಪನಿ ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡಿದೆ. 1 ಬಿಂದಿಗೆಗೆ 6 ರೂ., 20 ಲೀ. ಕ್ಯಾನ್​ಗೆ -8ರಿಂದ 10 ರೂ. ವಸೂಲಿ ಮಾಡಿದ್ದು, ಪಾಲಿಕೆ ಸುಪರ್ದಿಗೆ ಪಡೆದ ಬಳಿಕ ಸರ್ಕಾರದ ದರ ನಿಗದಿಯಂತೆ 1 ಬಿಂದಿಗೆಗೆ 3 ರೂ. 20 ಲೀ. ಕ್ಯಾನ್​ಗೆ 5 ರೂ. ನಿಗದಿಪಡಿಸಿ, ಪರಿಷ್ಕರಣೆ ಮಾಡಲಾಗಿದೆ.

ಉಳಿದ 4 ಕ್ಕೆ ನೋಟಿಸ್:  ಪಾಲಿಕೆ ವ್ಯಾಪ್ತಿಯಲ್ಲಿ ಡಾ.ವಾಟರ್ ಕಂಪನಿಯ 7 ಆರ್​ಒ ಘಟಕಗಳು ಇದ್ದು, ಸದ್ಯ 3 ಘಟಕಗಳ ಒಪ್ಪಂದದ ಅವಧಿ ಮುಗಿದಿದೆ. ಇನ್ನುಳಿದ 4 ಘಟಕಗಳ ಒಡಂಬಡಿಕೆ ಅವಧಿಯು 20 ದಿನದೊಳಗೆ ಮುಗಿಯಲಿದೆ. ಸರ್ಕಾರದ ನಿಯಮಾನುಸಾರ ಶುಲ್ಕ ಪಾವತಿಸುವಂತೆ ಪಾಲಿಕೆಯಿಂದ 2 ಬಾರಿ ನೋಟಿಸ್ ಸಹ ನೀಡಲಾಗಿದೆ.

23ಆರ್​ಒ ಘಟಕಗಳು ವಶಕ್ಕೆ !: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ನಿರ್ವಿುತಿ ಕೇಂದ್ರದಿಂದ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ವಿುಸಿದ್ದ 23 ಆರ್​ಒ ಘಟಕಗಳನ್ನು ಅಕ್ರಮವಾಗಿ ವಶಕ್ಕೆ ಪಡೆದ ಆಯಾ ವಾರ್ಡ್ ಕಾಪೋರೇಟರ್​ಗಳು, ‘ಸ್ವಂತ ಆದಾಯ’ವಾಗಿ ಬಳಸಿಕೊಳ್ಳುತ್ತಿದ್ದರು. ಇದರಿಂದ ಪಾಲಿಕೆ ಬೊಕ್ಕಸಕ್ಕೆ ನಷ್ಟವಾಗುತ್ತಿದ್ದುದನ್ನು ಅರಿತು ಕಳೆದ ತಿಂಗಳಷ್ಟೇ ಈ ಆರ್​ಒ ಘಟಕಗಳನ್ನು ಪಾಲಿಕೆ ಸುಪರ್ದಿಗೆ ಪಡೆಯಲಾಗಿದೆ.

ಆಯುಕ್ತ ಭೂಬಾಲನ್ ಜತೆ ಆರೋಗ್ಯಾಧಿಕಾರಿ ಡಾ.ನಾಗೇಶ್, ಈಎಲೆಕ್ಟ್ರಿಕಲ್ ಇಂಜಿನಿಯರ್ ವಸಂತ್, ಶೆಟ್ಟಹಳ್ಳಯ್ಯ ಹಾಜರಿದ್ದರು.

ನಗರದ ವಿವಿಧ ವಾರ್ಡ್​ಗಳಲ್ಲಿ 7 ಡಾ.ವಾಟರ್ ಆರ್​ಒ ಘಟಕಗಳಿದ್ದು ಇದರಲ್ಲಿ 3 ಆರ್​ಒ ಘಟಕಗಳ ಒಪ್ಪಂದ ಅವಧಿ ಮುಗಿದಿದೆ. ಈ ಘಟಕಗಳಲ್ಲಿ ಸಾರ್ವಜನಿಕರಿಂದ ಹೆಚ್ಚಿನ ದರ ವಸೂಲಿ ಮಾಡಲಾಗಿತ್ತು. ಜತೆಗೆ ಪ್ರಯೋಗಾಲಯಕ್ಕೆ ನೀರಿನ ಮಾದರಿ ಕಳುಹಿಸದೇ ಇರುವುದು ಪತ್ತೆಯಾಗಿದೆ. ಘಟಕಗಳನ್ನು ಪಾಲಿಕೆ ವಶಕ್ಕೆ ಪಡೆದಿದ್ದು, ಇನ್ಮುಂದೆ ನಮ್ಮ ಸಿಬ್ಬಂದಿಯೇ ಇವುಗಳ ಉಸ್ತುವಾರಿ ವಹಿಸುವರು.

| ಟಿ.ಭೂಬಾಲನ್ ಆಯುಕ್ತ, ಮಹಾನಗರ ಪಾಲಿಕೆ

Leave a Reply

Your email address will not be published. Required fields are marked *