ಪಾಲಿಕೆ ಸದಸ್ಯರಿಗೆ ನಿರೀಕ್ಷಣಾ ಜಾಮೀನು

ಶಿವಮೊಗ್ಗ: ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿ ಬಂಧನದ ಭೀತಿ ಎದುರಿಸುತ್ತಿದ್ದ ಶಿವಮೊಗ್ಗ ಮಹಾನಗರ ಪಾಲಿಕೆಯ ಇಬ್ಬರು ಸದಸ್ಯರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದ್ದು, ತಾತ್ಕಲಿಕವಾಗಿ ನಿರಾಳರಾಗಿದ್ದಾರೆ.

ಸದಸ್ಯರಾದ 2ನೇ ವಾರ್ಡ್(ಅಶ್ವತ್ಥನಗರ)ನ ಇ.ವಿಶ್ವಾಸ್ ಹಾಗೂ 15ನೇ ವಾರ್ಡ್(ಹರಿಗೆ)ನ ಸತ್ಯನಾರಾಯಣ ರಾಜ್ ಎಂಬುವರಿಗೆ ಜಾಮೀನು ಮಂಜೂರಾಗಿದೆ. ವಿಶ್ವಾಸ್ ವಿರುದ್ಧ ಫೆ.16ರಂದು ಆರ್​ಟಿಒ ಅಧಿಕಾರಿಗೆ ಬೆದರಿಕೆ, ಹಲ್ಲೆ, ಜಾತಿ ನಿಂದನೆ ಕೇಸ್ ದಾಖಲಾಗಿತ್ತು. ಪ್ರಭಾರ ಸಾರಿಗೆ ಅಧಿಕಾರಿ ವಿ.ಜಿ.ಶ್ರೀನಿವಾಸಯ್ಯ ಅವರಿಗೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದಲ್ಲದ್ದೆ, ಚಪ್ಪಲಿ ತೋರಿಸಿದ್ದರು. ಆ ಬಳಿಕ ತಲೆಮರೆಸಿಕೊಂಡಿದ್ದ ವಿಶ್ವಾಸ್​ಗೆ ಬೆಂಗಳೂರಿನ ಹೈಕೋರ್ಟ್​ನಿಂದ ಎರಡು ದಿನಗಳ ಹಿಂದೆ ನಿರೀಕ್ಷಣಾ ಜಾಮೀನು ದೊರೆತಿದೆ. ಈ ಬಗ್ಗೆ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಡಿವೈಎಸ್ಪಿ ಉಮೇಶ್ ನಾಯ್್ಕ ತನಿಖೆ ನಡೆಸುತ್ತಿದ್ದರು.

ಮೊಟ್ಟೆ ಸತೀಶ್​ಗೂ ಬೇಲ್:ಕೊಲೆ ಪ್ರಕರಣದ ಆರೋಪಿ ಸತ್ಯನಾರಾಯಣ್​ರಾಜ್ ಅಲಿಯಾಸ್ ಮೊಟ್ಟೆ ಸತೀಶ್​ಗೂ ಜಾಮೀನು ದೊರೆತಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ 2018ರ ಡಿ. 23ರ ರಾತ್ರಿ ರೌಡಿಶೀಟರ್ ಬಾಲು ಅಲಿಯಾಸ್ ಬಂಕ್ ಬಾಲುನನ್ನು ಹರಿಗೆ ಸಮೀಪದ ಹಾತಿನಗರದ ಬಯಲಿನಲ್ಲಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸತ್ಯನಾರಾಯಣ್​ರಾಜ್ 5ನೇ ಆರೋಪಿಯಾಗಿದ್ದು, ತುಂಗಾನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಿಸುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ. ಆ ಪ್ರಕರಣದಲ್ಲಿ ಸೀಗೆಹಟ್ಟಿಯ ಅನಿಲ್ ಅಲಿಯಾಸ್ ಅಂಬು ಮೊದಲನೇ, ಪ್ರವೀಣ್ ಅಲಿಯಾಸ್ ಧನಂಜಯ ಎರಡನೇ, ದರ್ಶನ್ ಮೂರನೇ ಆರೋಪಿಯಾಗಿದ್ದ. ಮೊಟ್ಟೆ ಸತೀಶ್ ಲಾಟರಿ ಮೂಲಕ ಸದಸ್ಯರಾಗಿ ಆಯ್ಕೆಯಾಗಿದ್ದರು. ಇಬ್ಬರು ಪಾಲಿಕೆ ಸಾಮಾನ್ಯ ಸಭೆಗೆ ಗೈರು ಹಾಜರಾಗಿದ್ದರಿಂದ ಸದಸ್ಯತ್ವ ರದ್ದಾಗುವ ಭೀತಿ ಎದುರಿಸುತ್ತಿದ್ದರು. ಆದರೆ ಜಾಮೀನು ದೊರೆತಿರುವುದರಿಂದ ಸ್ವಲ್ಪ ನಿರಾಳರಾಗಿದ್ದಾರೆ.

Leave a Reply

Your email address will not be published. Required fields are marked *