ಪಾಲಿಕೆ ವಿರುದ್ಧ ಹೈಕೋರ್ಟ್ ಅಸಮಾಧಾನ

ಬೆಂಗಳೂರು: ನಗರದಲ್ಲಿ ಫ್ಲೆಕ್ಸ್ ಹಾವಳಿ ಮರುಕಳಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಎಸ್. ಸುಜಾತಾ ಅವರಿದ್ದ ಪೀಠದಲ್ಲಿ ಶುಕ್ರವಾರ ನಡೆಯಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಬೆಂಗಳೂರಿನಲ್ಲಿ ಮತ್ತೆ ಫ್ಲೆಕ್ಸ್ ಹಾವಳಿ ಶುರುವಾಗಿದೆ. ಸಿನಿಮಾ ಜಾಹೀರಾತು ಸೇರಿ ಹಲವೆಡೆ ಫ್ಲೆಕ್ಸ್ ಅಳವಡಿಸಲಾಗಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ಬಗ್ಗೆ ಮಾಧ್ಯಮಗಳ ವರದಿ‌ ಗಮನಿಸಿದ್ದೇನೆ. ಫ್ಲೆಕ್ಸ್ ಅಳವಡಿಸಿದವರ ವಿರುದ್ಧ ಕೂಡಲೇ ಕ್ರಮ ಕೈಗೊಂಡು, ಎಫ್ಐಆರ್ ದಾಖಲಿಸಿರುವ ಕುರಿತು ಮಾಹಿತಿ ನೀಡಿ ಎಂದು ಬಿಬಿಎಂಪಿ ವಕೀಲರಿಗೆ ಸೂಚಿಸಿತು.

ಅಡ್ವೊಕೇಟ್ ಜನರಲ್ ಉದಯ ಹೊಳ್ಳ ವಾದ ಮಂಡಿಸಿ, ಹೈಕೋರ್ಟ್‌ನ ಹಿಂದಿನ ಆದೇಶದಂತೆ ಫ್ಲೆಕ್ಸ್ ಅಳವಡಿಸುವವರ ಮೇಲೆ ನಿಗಾ ವಹಿಸಲು ಡಿಸಿಪಿ ದರ್ಜೆಯ ಅಧಿಕಾರಿಯನ್ನು ನೋಡಲ್ ಆಫೀಸರ್ ಆಗಿ ನೇಮಕ ಮಾಡಲಾಗಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

ಜಾಹೀರಾತು ನೀತಿ ಕುರಿತು ಪಾಲಿಕೆಯಿಂದ ಕೆಲ ಸ್ಪಷ್ಟೀಕರಣ ಕೇಳಲಾಗಿದ್ದು, ಬಿಬಿಎಂಪಿಯಿಂದ ಪ್ರತಿಕ್ರಿಯೆ ಬಂದ ನಂತರ ಅನುಮೋದನೆ ನೀಡಲಾಗುವುದು ಎಂದು ಎಜಿ ತಿಳಿಸಿದರು.

ಅರ್ಜಿ ವಿಚಾರಣೆಯನ್ನು ಫೆ.7 ಕ್ಕೆ ಮುಂದೂಡಿದ .ಹೈಕೋರ್ಟ್, ಅಷ್ಟರೊಳಗೆ ಜಾಹೀರಾತು ನೀತಿಗೆ ಅನುಮೋದನೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿತು.