ಪಾಲಿಕೆ ಕಣ್ಣೆದುರಿಗೇ ನಿಯಮ ಉಲ್ಲಂಘನೆ

ಹುಬ್ಬಳ್ಳಿ: ಧಾರವಾಡದಲ್ಲಿ ನಿರ್ಮಾಣ ಹಂತದಲ್ಲಿದ್ದ ವಾಣಿಜ್ಯ ಸಂಕೀರ್ಣ ನೆಲಸಮಗೊಂಡು 19 ಜನರನ್ನು ಬಲಿ ಪಡೆದು, ನೂರಾರು ಜನ ಗಾಯಗೊಂಡ ದುರಂತದಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಂತಿಲ್ಲ.

ಇದೀಗ ಅಂತಹದೇ ಆತಂಕ ಹುಬ್ಬಳ್ಳಿಯ ಜನರನ್ನು ಕಾಡುತ್ತಿದೆ. ಇಲ್ಲಿನ ಪಾಲಿಕೆ ಪ್ರಧಾನ ಕಚೇರಿಯಿಂದ ಕೆಲವೇ ಮೀಟರ್ ಅಂತರದಲ್ಲಿರುವ ಕೊಪ್ಪಿಕರ ರಸ್ತೆಯ ಉಮಚಗಿ ವಾಣಿಜ್ಯ ಸಂಕೀರ್ಣದ ಮೇಲೆ ನಿರ್ವಿುಸುತ್ತಿರುವ 2 ಮತ್ತು 3ನೇ ಮಹಡಿ ಸಂಪೂರ್ಣ ನಿಯಮ ಬಾಹಿರ ಎಂಬ ದೂರು ದಾಖಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳು ನೋಟಿಸ್ ನೀಡುವಿಕೆಯಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ.

ಈ ವಾಣಿಜ್ಯ ಸಂಕೀರ್ಣ 30 ವರ್ಷಗಳ ಹಿಂದೆಯೇ ನಿರ್ವಣಗೊಂಡಿದ್ದು, ಆಗ ಮೊದಲ ಮಹಡಿಗೆ ಮಾತ್ರ ಪಾಲಿಕೆ ಪರವಾನಿಗೆ ನೀಡಿತ್ತು. ಇಲ್ಲಿರುವ ಅಹ್ಮದಾಬಾದ್ ಸಾರಿ ಸೆಂಟರ್, ಅಹ್ಮದಾಬಾದ್ ಕಲೆಕ್ಷನ್ಸ್, ಬಾಟಾ ಪಾದರಕ್ಷೆ ಮಳಿಗೆಗಳ ಮೇಲಿನ 2 ಮಹಡಿಗಳ ನಿರ್ಮಾಣ ಕಾಮಗಾರಿ ಈಗ ಮುಕ್ತಾಯ ಹಂತದಲ್ಲಿದೆ.

ಆದರೆ ಈ ಕಟ್ಟಡದ ಮಹಡಿಗಳ ನಿರ್ವಣಕ್ಕೆ ಸೂಕ್ತ ಪರವಾನಿಗೆ ಇಲ್ಲ. ದುರ್ಬಲ ಕಟ್ಟಡದ ಮೇಲೆ ಮಹಡಿಗಳು ನಿರ್ವಣವಾಗುತ್ತಿವೆ ಎಂಬ ದೂರು ಇಲ್ಲಿನ ಮಳಿಗೆಯೊಂದರ ಮಾಲೀಕರಾದ ಸುಭಾಶ ಜೋತವಾನಿ ಅವರದ್ದು.

7-12-2010ರಂದು ಈ ವಾಣಿಜ್ಯ ಸಂಕೀರ್ಣ ನಿರ್ವಣಕ್ಕೆ ಶಿರಾಜ ಅಹಮ್ಮದ ಹಾಜಿ ಸೈಯ್ಯದ ತಾಜೋದ್ದಿನ್ ರಾಜೇಸಾಬ ಉಮಚಗಿ ಅವರಿಗೆ ಕಟ್ಟಡ ಪರವಾನಿಗೆ ನೀಡಿದ್ದ ಮಹಾನಗರ ಪಾಲಿಕೆ (ಹುಧಾಮಪಾಹು/50/04/ /ಕಪ/07/2008/2009), ನಂತರ 1-9-2012 ರಿಂದ ಹಲವಾರು ಬಾರಿ ನಿಯಮ ಉಲ್ಲಂಘನೆ, ಅನುಮೋದಿತ ನಕ್ಷೆಗೆ ವ್ಯತಿರಿಕ್ತ ನಿರ್ವಣ, ರ್ಪಾಂಗ್ ಜಾಗದ ಅತಿಕ್ರಮಣ, ಅನುಮತಿ ಇಲ್ಲದೇ ಲಿಫ್ಟ್ ನಿರ್ವಣಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿದೆ.

ಸ್ವತಃ ಪಾಲಿಕೆ ಅಧಿಕಾರಿಗಳೇ ಈ ವಾಣಿಜ್ಯ ಸಂಕೀರ್ಣದಲ್ಲಿ ನಿರ್ವಿುಸುತ್ತಿರುವ 2 ಮತ್ತು 3ನೇ ಮಹಡಿಯ ಜೊತೆಗೆ ಲಿಫ್ಟ್ ನಿರ್ವಣದ ವಿರುದ್ಧವೂ ಹಲವಾರು ನೋಟಿಸ್ ನೀಡಿದ್ದಾರೆ. ರ್ಪಾಂಗ್ ವ್ಯವಸ್ಥೆ ಇಲ್ಲದ ಈ ವಾಣಿಜ್ಯ ಸಂಕೀರ್ಣದ ಅಕ್ರಮ ಭಾಗ ತೆರವುಗೊಳಿಸಬಾರದೇಕೆ ಎಂಬ ಪ್ರಶ್ನೆಯನ್ನು ಅಧಿಕಾರಿಗಳು ನೋಟಿಸ್ ಮೂಲಕ ಕೇಳಿದ್ದರೂ, ತೆರವು ಕಾರ್ಯಾಚರಣೆಯ ಧೈರ್ಯ ತೋರುತ್ತಿಲ್ಲ. ಈ ಕಟ್ಟಡದ ಸ್ಟೆಬಿಲಿಟಿ ವರದಿಯೂ ಅಧಿಕಾರಿಗಳ ಬಳಿ ಇಲ್ಲ ಎನ್ನುತ್ತಾರೆ ಮತ್ತೊಂದು ಮಳಿಗೆಯ ಮಾಲೀಕರಾದ ಸುಂದರ ಜೋತವಾನಿ.

ಇಲ್ಲಿನ ಮಳಿಗೆಗಳಿಗೆ ಬರುವ ಗ್ರಾಹಕರಿಗೆ ವಾಹನಗಳನ್ನು ನಿಲ್ಲಿಸಲು ರ್ಪಾಂಗ್ ವ್ಯವಸ್ಥೆ ಇಲ್ಲ. ಇನ್ನೂ 2 ಮತ್ತು 3ನೇ ಮಹಡಿಯಲ್ಲಿ ತಲೆ ಎತ್ತುತ್ತಿರುವ 70-80 ಮಳಿಗೆಗಳಿಗೆ ಬರುವ ಗ್ರಾಹಕರು ತಮ್ಮ ವಾಹನಗಳನ್ನು ಎಲ್ಲಿ ನಿಲುಗಡೆ ಮಾಡಬೇಕೆಂಬ ಪ್ರಶ್ನೆ ಜೋತವಾನಿ ಹಾಗೂ ಸಾರ್ವಜನಿಕರದ್ದು.

ಮಹಾನಗರ ಪಾಲಿಕೆಯಲ್ಲಿ ಈ ಕುರಿತು ವಿಚಾರಿಸಿದರೆ ನೋಟಿಸ್ ನೀಡಿರುವ ಕಥೆಯನ್ನೇ ಪುನರುಚ್ಚರಿಸುತ್ತಾರೆ ಹೊರತು ಕ್ರಮ ಕೈಗೊಂಡಿರುವುದು ಏನು ಎಂಬ ಪ್ರಶ್ನೆಗೆ ಮೌನವೇ ಉತ್ತರ.

ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಧರೆಗುರುಳಿ, ಮೂವರು ಅಧಿಕಾರಿಗಳು ಈಗಾಗಲೇ ಅಮಾನತುಗೊಂಡು ಜೈಲು ಸೇರಿ ಬಂದರೂ ಪಾಲಿಕೆಗೆ ಮಾತ್ರ್ರ ಇನ್ನೂ ಜ್ಞಾನೋದಯವಾಗುತ್ತಿಲ್ಲ ಎಂಬುದು ಜೋತವಾನಿ ಹಾಗೂ ಸಾರ್ವಜನಿಕರ ಅಸಮಾಧಾನ.

ಈ ವಾಣಿಜ್ಯ ಸಂಕೀರ್ಣದಲ್ಲಿ ನಡೆದಿದೆ ಎನ್ನಲಾದ ನಿಯಮಬಾಹಿರ ಮಹಡಿಗಳ ನಿರ್ವಣದ ವಿರುದ್ಧ ಸುಂದರ ಜೋತವಾನಿ ಹೈಕೋರ್ಟ್ ಮೆಟ್ಟಿಲು ಏರಿದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ.

ಒಂದು ವಾರದಲ್ಲಿ ಸೂಕ್ತ ದಾಖಲೆಗಳನ್ನು ಸಲ್ಲಿಸುವುದಾಗಿ ವಾಣಿಜ್ಯ ಸಂಕೀರ್ಣದ ಮಾಲೀಕರು ತಿಳಿಸಿದ್ದಾರೆ. ದಾಖಲೆ ಸಲ್ಲಿಸದಿದ್ದರೆ 10-15 ದಿನಗಳಲ್ಲಿ, ನಿರ್ವಣಗೊಳ್ಳುತ್ತಿರುವ ಅಕ್ರಮ ಭಾಗ ತೆರವುಗೊಳಿಸಲಾಗುವುದು. | ಎಚ್.ಎಂ. ಪುಡಕಲಕಟ್ಟಿ, ಡಿಡಿಟಿಪಿ, ಹು-ಧಾ ಮಹಾನಗರ ಪಾಲಿಕೆ

ನಗರ ಯೋಜನೆ ಶಾಖೆಯಿಂದ ಕೊಪ್ಪಿಕರ ರಸ್ತೆಯ ವಾಣಿಜ್ಯ ಸಂಕೀರ್ಣಕ್ಕೆ 2013ರಿಂದ ಕೇವಲ ನೋಟಿಸ್ ನೀಡಲಾಗುತ್ತಿದ್ದು, ಯಾವುದೇ ಕ್ರಮ ತೆಗೆದುಕೊಳ್ಳದಿರುವುದನ್ನು ಗಮನಿಸಿದ್ದೇನೆ. ಈ ಕುರಿತು ಸೂಕ್ತ ತನಿಖೆ ಕೈಗೊಳ್ಳಲಾಗುವುದು. | ಎ.ಆರ್. ದೇಸಾಯಿ, ಉಪ ಆಯುಕ್ತ, ಮಹಾನಗರ ಪಾಲಿಕೆ

ವಾಣಿಜ್ಯ ಸಂಕೀರ್ಣದ ಮೇಲೆ ಹೆಚ್ಚುವರಿ ಮಹಡಿಗಳ ನಿರ್ಮಾಣ ಮಾಡುವ ಮೊದಲು ಆ ಕಟ್ಟಡದ ಸಾಮರ್ಥ್ಯದ ಪರಿಶೀಲನೆ ನಡೆಸಬೇಕು ಹಾಗೂ ಕೆಳಗಿನ ಮಹಡಿಗಳ ವ್ಯಾಪಾರಸ್ಥರನ್ನು ತೆರವುಗೊಳಿಸಬೇಕು. ಆದರೆ ಪಾಲಿಕೆ ಅಧಿಕಾರಿಗಳು ಯಾವುದೇ ನಿಯಮ ಅನುಸರಿಸುವುದಿಲ್ಲ. ಅವಳಿ ನಗರದಲ್ಲಿ ಅಕ್ರಮ ಕಟ್ಟಡಗಳ ಮಾಲೀಕರಿಗೆ ಪಾಲಿಕೆ ಅಧಿಕಾರಿಗಳ ಭಯವೇ ಇಲ್ಲದಂತಾಗಿದೆ. |ಸುರೇಶ ಕಿರೇಸೂರ, ಅಧ್ಯಕ್ಷರು, ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್, ಹುಬ್ಬಳ್ಳಿ

ಈಗಿರುವ ಮಳಿಗೆಗಳಿಗೆ ಬರುವ ಗ್ರಾಹಕರಿಗೆ ಇಲ್ಲಿ ವಾಹನಗಳ ರ್ಪಾಂಗ್​ಗೆ ಜಾಗ ಇಲ್ಲ. 2 ಮತ್ತು 3ನೇ ಮಹಡಿಗಳ ನಿರ್ವಣದಿಂದ ಇನ್ನೂ 70-80 ಮಳಿಗೆಗಳು ಪ್ರಾರಂಭಗೊಳ್ಳಲಿವೆ. ಅಲ್ಲಿಗೆ ಬರುವ ಗ್ರಾಹಕರು ತಮ್ಮ ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು ? ಈಗಾಗಲೇ ಕೊಪ್ಪಿಕರ ರಸ್ತೆಯಲ್ಲಿ ವಾಹನ ದಟ್ಟಣೆಯ ಸಮಸ್ಯೆ ಕಾಡುತ್ತಿದೆ. | ಸುಂದರ ಜೋತವಾನಿ, ಉಮಚಗಿ ವಾಣಿಜ್ಯ ಸಂಕೀರ್ಣದ ಮೂಲ ವ್ಯಾಪಾರಸ್ಥರು

ಉಮಚಗಿ ವಾಣಿಜ್ಯ ಸಂಕೀರ್ಣದಲ್ಲಿ ನಿಯಮಬಾಹಿರವಾಗಿ ನಡೆಯುತ್ತಿರುವ ಮಹಡಿಗಳ ನಿರ್ವಣದ ವಿರುದ್ಧ ಕ್ರಮ ಕೈಗೊಳ್ಳುವಂತೆ ನನ್ನ ಅವಧಿಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದೆ. ಆದರೆ ಅಧಿಕಾರಿಗಳು ದಿನಕ್ಕೊಂದು ಸಬೂಬು ಹೇಳುತ್ತ ದಿನ ದೂಡಿದರು. | ಸುಧೀರ ಸರಾಫ, ಮಾಜಿ ಮೇಯರ್

ವಾಣಿಜ್ಯ ಸಂಕೀರ್ಣದಲ್ಲಿ ನಿಯಮಗಳನುಸಾರವಾಗಿಯೇ ಮಹಡಿಗಳನ್ನು ನಿರ್ವಿುಸಲಾಗುತ್ತಿದೆ. ನಮ್ಮಲ್ಲಿ ಅಧಿಕೃತ ದಾಖಲೆಗಳಿದ್ದು, ಸಮಯ ಬಂದಾಗ ಪಾಲಿಕೆ ಅಧಿಕಾರಿಗಳ ಎದುರು ಹಾಜರುಪಡಿಸಲಾಗುವುದು. | ಶಬೀಲ್ ಉಮಚಗಿ, ಉಮಚಗಿ ವಾಣಿಜ್ಯ ಸಂಕೀರ್ಣದ ಮಾಲೀಕ

Leave a Reply

Your email address will not be published. Required fields are marked *