ಪಾಲಿಕೆ ಅಧಿಕಾರಿಗಳ ವಿರುದ್ಧ ಸಿಎಂಗೆ ದೂರು

ಶಿವಮೊಗ್ಗ: ಮೇಯರ್ ಆದೇಶ ಧಿಕ್ಕರಿಸಿ ಸಾಮಾನ್ಯ ಸಭೆಯಿಂದ ಹೊರ ನಡೆದ ಪಾಲಿಕೆ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮೇಯರ್ ಲತಾಗಣೇಶ್ ಮತ್ತು ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಮಾ. 2ರ ಶಿವಮೊಗ್ಗ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯ ಪ್ರಶ್ನೋತ್ತರ ಸಂದರ್ಭದಲ್ಲಿ ಪಾಲಿಕೆ ಸದಸ್ಯರಿಗೆ ಆಯುಕ್ತರು ಹಾಗೂ ಇತರೆ ಅಧಿಕಾರಿಗಳು ಅಸಹಕಾರ ನೀಡಿದರು. ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ವರ್ಗಾವಣೆಗೊಂಡಿದ್ದರೂ ಕರ್ತವ್ಯದಿಂದ ಬಿಡುಗಡೆಗೊಳಿಸಿಲ್ಲ. ಸಭೆಯಿಂದ ಹೊರಕಳುಹಿಸಲು ಸದಸ್ಯರು ಒತ್ತಾಯಿಸಿದರೂ ಸ್ಪಂದಿಸಲಿಲ್ಲ.

ವರ್ಗಾವಣೆಗೊಂಡಿರುವ ಕಂದಾಯ ಅಧಿಕಾರಿಯನ್ನು ಸಭೆಯಿಂದ ಹೊರಕಳುಹಿಸಲು ಮೇಯರ್ ಲತಾ ಗಣೇಶ್ ಆಯುಕ್ತರಿಗೆ ಆದೇಶಿಸಿದರು. ಆದರೆ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಎಲ್ಲ ಅಧಿಕಾರಿಗಳೊಂದಿಗೆ ಆದೇಶ ಧಿಕ್ಕರಿಸಿ ಸಭೆಯಿಂದ ಹೊರ ನಡೆದರು. ಮೇಯರ್ ಆದೇಶವನ್ನು ಆಯುಕ್ತರು ಅಪಮಾನಿಸಿರುತ್ತಾರೆ ಎಂದು ದೂರಿದರು.

ಸಭೆ ಮುಂದೂಡಿದ ನಂತರ ಮಧ್ಯಾಹ್ನ 2ಕ್ಕೆ ಮತ್ತೆ ಸಭೆ ಆರಂಭವಾದ ವೇಳೆ ಆಯುಕ್ತೆ ಚಾರುಲತಾ ಸೋಮಲ್, ಉಪ ಆಯುಕ್ತೆ ಸಹನಾ ಹಾದಿಮನಿ ಸೇರಿ ಅಧಿಕಾರಿ ವರ್ಗ ಹಾಜರಾಗಲಿಲ್ಲ. ಕರ್ತವ್ಯ ಲೋಪದ ಮೇಲೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಮೇಯರ್ ಲತಾ ಗಣೇಶ್, ಉಪಮೇಯರ್ ಎಸ್.ಎನ್.ಚನ್ನಬಸಪ್ಪ, ಎಂಎಲ್​ಸಿ ಆರ್.ಪ್ರಸನ್ನಕುಮಾರ್, ಪಾಲಿಕೆ ಸದಸ್ಯರು ಹಾಜರಿದ್ದರು. ಜನಪ್ರತಿನಿಧಿಗಳ ಮನವಿ ಸ್ವೀಕರಿಸಿದ ಸಿಎಂ, ಈ ಕುರಿತು ಮಾಹಿತಿ ತರಿಸಿಕೊಳ್ಳುವುದಾಗಿ ಭರವಸೆ ನೀಡಿದರು.