ಹುಬ್ಬಳ್ಳಿ: ಸಾರ್ವಜನಿಕ ಶೌಚ ಗೃಹಗಳ ಕೊರತೆಯ ನಡುವೆಯೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಬಯಲು ಶೌಚ ಮುಕ್ತ (ಒಡಿಎಫ್) ಪ್ಲಸ್ ಪ್ರಮಾಣಪತ್ರ ಪಡೆದಿದೆ.
ಬಳಕೆಯಲ್ಲಿರುವ ಸಾರ್ವಜನಿಕ ಹಾಗೂ ಸಮುದಾಯ ಶೌಚಗೃಹಗಳ ಸ್ಥಿತಿಗತಿ, ನಿರ್ವಹಣೆಯನ್ನು ಪರಿಗಣಿಸಿ ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಎಂಒಎಚ್ಯುುಎ) ಕಳೆದ ವಾರ ಪಾಲಿಕೆಗೆ ಈ ಪ್ರಮಾಣ ಪತ್ರ ನೀಡಿದೆ. ಹು-ಧಾ ಮಹಾನಗರ ಪಾಲಿಕೆಯು 2018ರಲ್ಲಿ ಒಡಿಎಫ್ ನಗರವೆಂದು ಪ್ರಮಾಣಪತ್ರ ಪಡೆದಿತ್ತು. ಇದೀಗ ಒಡಿಎಫ್-ಪ್ಲಸ್ಗೆ ಅರ್ಹವಾಗಿದೆ. ಈ ನಡುವೆ ಒಮ್ಮೆ ಒಡಿಎಫ್-ಪ್ಲಸ್ ಪ್ರಮಾಣಪತ್ರಕ್ಕೆ ಪ್ರಯತ್ನಿಸಿ ವಿಫಲವಾಗಿತ್ತು.
ಈ ಬಾರಿ ಪೂರ್ಣ ಸಿದ್ಧತೆ ಮಾಡಿಕೊಂಡು 2021ರ ಜನೆವರಿಯಲ್ಲಿ ಒಡಿಎಫ್-ಪ್ಲಸ್ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿತ್ತು. ಫೆಬ್ರುವರಿಯಲ್ಲಿ ಕೇಂದ್ರದ ಎಂಒಎಚ್ಯುುಎ ನಿಯೋಜಿತ ಅಧಿಕಾರಿಗಳ ತಂಡವೊಂದು ಅವಳಿ ನಗರಕ್ಕೆ ಆಗಮಿಸಿ ಸಾರ್ವಜನಿಕ ಮತ್ತು ಸಮುದಾಯ ಶೌಚಗೃಹಗಳ ಸ್ಥಿತಿಗತಿ ಹಾಗೂ ನಿರ್ವಹಣೆಯನ್ನು ಪರಿಶೀಲಿಸಿತ್ತು. ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಕೇಂದ್ರೀಯ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಇಂಜಿನಿಯರಿಂಗ್ ಸಂಸ್ಥೆ (ಸಿಪಿಎಚ್ಇಇಒ)ಯು ನಿರ್ದಿಷ್ಟ ಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಹು-ಧಾ ಮಹಾನಗರ ಪಾಲಿಕೆಗೆ ಒಡಿಎಫ್ ಪ್ಲಸ್ ಪ್ರಮಾಣಪತ್ರ ಮಾನ್ಯ ಮಾಡಲಾಗಿದೆ. ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿ ಇದರ ಶ್ರೇಯಸ್ಸು ಸಲ್ಲುತ್ತದೆ.
ಅವಳಿ ನಗರದಲ್ಲಿ ಸಾರ್ವಜನಿಕ ಹಾಗೂ ಸಮುದಾಯ ಸೇರಿ 91 ಶೌಚಗೃಹ ಗಳಿವೆ. ಅದರಲ್ಲಿ 27 ಸಾರ್ವಜನಿಕ ಶೌಚಗೃಹಗಳು ಹಾಗೂ 19 ಸಮುದಾಯ ಶೌಚಗೃಹಗಳನ್ನು ಕೇಂದ್ರವು ಸಮೀಕ್ಷೆಗೆ ಆಯ್ದುಕೊಂಡಿತ್ತು. ಪ್ರತಿ ಶೌಚಗೃಹದಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆಯೋ? ಅಂಗವಿಕಲರಿಗೆ ಅನುಕೂಲಕರವಾದ ವ್ಯವಸ್ಥೆ ಇದೆಯೋ? ನಿರಂತರ ನೀರು ಪೂರೈಕೆ, ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಷಿನ್, ಸ್ಯಾನಿಟರಿ ಪ್ಯಾಡ್ ಬರ್ನರ್, ಹ್ಯಾಂಡ್ ಡ್ರೖೆಯರ್, ಕನ್ನಡಿ, ಸಿಂಕ್, ಇತ್ಯಾದಿ ಸೌಲಭ್ಯಗಳು ಇದೆಯೋ-ಇಲ್ಲವೋ ಎಂಬುದು ಪರಿಶೀಲನೆಗೆ ಒಳಪಟ್ಟಿದ್ದವು.
ಸ್ವಚ್ಛ ಭಾರತ ಅಭಿಯಾನದಡಿ ಪ್ರಾರಂಭದಲ್ಲಿ ಪ್ರತಿ ಮನೆಗೆ ವೈಯಕ್ತಿಕ ಶೌಚ ಗೃಹಗಳ ನಿರ್ವಣಕ್ಕೆ ಒತ್ತು ನೀಡಲಾಗಿತ್ತು. ಅದರಲ್ಲಿ ತೋರಿದ ಸಾಧನೆಯನ್ನು ಒಡಿಎಫ್ಗೆ ಪರಿಗಣಿಸಲಾಗಿತ್ತು. ಬಳಿಕ ಬಳಕೆಯಲ್ಲಿರುವ ಸಾರ್ವಜನಿಕ ಹಾಗೂ ಸಮುದಾಯ ಶೌಚಗೃಹಗಳ ಸ್ಥಿತಿಗತಿ, ನಿರ್ವಹಣೆಯನ್ನು ಪರಿಗಣಿಸಿ ಒಡಿಎಫ್-ಪ್ಲಸ್ ಪ್ರಮಾಣಪತ್ರ ನೀಡಲಾಗಿದೆ. ಇನ್ನು ಮುಂದೆ ಪಂಚತಾರಾ ಹೋಟೆಲ್ ಅಥವಾ ವಿಮಾನ ನಿಲ್ದಾಣಗಳಲ್ಲಿ ಇರುವಂತೆ ಸಾರ್ವಜನಿಕ ಹಾಗೂ ಸಮುದಾಯ ಶೌಚಗೃಹಗಳ ಗುಣಮಟ್ಟ ಸುಧಾರಿಸಿದರೆ ಹು-ಧಾ ಮಹಾನಗರ ಪಾಲಿಕೆ ಒಡಿಎಫ್-ಪ್ಲಸ್ ಪ್ಲಸ್ ಪ್ರಮಾಣಪತ್ರಕ್ಕೆ ಅರ್ಹತೆ ಪಡೆಯಲಿದೆ. ಹು-ಧಾ ಮಹಾನಗರ ಪಾಲಿಕೆಯು ಒಡಿಎಫ್-ಫ್ಲಸ್ ಪ್ರಮಾಣಪತ್ರ ಪಡೆದ ದೇಶದ 2294ನೇ ಹಾಗೂ ರಾಜ್ಯದ 75ನೇ ನಗರ ಸ್ಥಳೀಯ ಸಂಸ್ಥೆಯಾಗಿದೆ.
ಸಂಖ್ಯೆ ಇಳಿಮುಖ: ಹು-ಧಾ ಅವಳಿ ನಗರದಲ್ಲಿ ಸಾರ್ವಜನಿಕ ಶೌಚಗೃಹಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕೆಲ ವರ್ಷಗಳ ಹಿಂದೆ 128 ಇದ್ದ ಸಾರ್ವಜನಿಕ ಶೌಚಗೃಹಗಳ ಸಂಖ್ಯೆ ಈಗ 91ಕ್ಕೆ ಇಳಿದಿದೆ. ಅವಳಿ ನಗರ ಬೆಳೆದಂತೆ ಸಾರ್ವಜನಿಕ ಶೌಚಗೃಹಗಳ ನಿರ್ವಣಕ್ಕೆ ಸೂಕ್ತ ಸ್ಥಳ ಲಭ್ಯವಾಗುತ್ತಿಲ್ಲ. ಜನಸಂಖ್ಯೆ ಹೆಚ್ಚಿದಂತೆ ಸಾರ್ವಜನಿಕ ಶೌಚಗೃಹಗಳ ಸಂಖ್ಯೆ ಹೆಚ್ಚಬೇಕಿತ್ತು. ಆದರೆ, ಕಡಿಮೆಯಾಗಿರುವುದು ವಿಪರ್ಯಾಸ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಕಳೆದ ವಾರ ಒಡಿಎಫ್-ಪ್ಲಸ್ ಪ್ರಮಾಣಪತ್ರ ನೀಡಿದೆ. ಶೌಚಗೃಹಗಳ ನಿರ್ವಹಣೆ ಹಾಗೂ ಗುಣಮಟ್ಟವನ್ನು ಇನ್ನಷ್ಟು ಎತ್ತರಿಸಿಕೊಳ್ಳಲು ಇದು ಸಹಕಾರಿಯಾಗಲಿದೆ.
|ಡಾ. ಸುರೇಶ ಇಟ್ನಾಳ ಪಾಲಿಕೆ ಆಯುಕ್ತ