ಪಾಲಿಕೆಗೆ ಉರ್ದು ಬೋರ್ಡ್​ ಆಕ್ರೋಶ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮಹಾನಗರ ಪಾಲಿಕೆ ಹೊಸ ಕಟ್ಟಡದ ಮೇಲೆ ಸರ್ಕಾರದ ನಿಯಮ ಮೀರಿ ಜಿಲ್ಲಾಡಳಿತ ಮತ್ತು ಪಾಲಿಕೆ ಸೇರಿ ಉರ್ದು ನಾಮಫಲಕವನ್ನು ಶುಕ್ರವಾರ ರಾತ್ರೋರಾತ್ರಿ ಹಾಕಿರುವುದು ಸಾರ್ವಜನಿಕರನ್ನು ಕೆರಳಿಸಿದೆ. ಕನ್ನಡಪರ ಹೋರಾಟಗಾರರ ಆಕ್ರೋಶ ಭುಗಿಲೆದ್ದಿದೆ.
ಈ ಹಿಂದೆ ಕಟ್ಟಡದ ಮೇಲೆ ಉರ್ದು ಹಾಗೂ ಇಂಗ್ಲಿಷ್ ನಾಮಫಲಕ ಅಳವಡಿಸಿದಾಗ ಕನ್ನಡಪರ ಸಂಘಟನೆಯವರು ವಿರೋಧಿಸಿ ಪ್ರತಿಭಟನೆ ನಡೆಸಿ ಮಸಿ ಬಳಿದಿದ್ದರು. ರಾತ್ರಿ ವೇಳೆ ಕೆಲವರು ಫಲಕವನ್ನೇ ಕಿತ್ತೆಸೆದಿದ್ದರು. ಬಳಿಕ ಪಾಲಿಕೆ ಕೆಲ ಅಧಿಕಾರಿಗಳು ಸೇರಿ 10ಕ್ಕೂ ಹೆಚ್ಚು ಜನರ ವಿರುದ್ಧ ಕೇಸ್ ದಾಖಲಾಗಿದ್ದವು.
ಕಳೆದ ವಿಧಾನಸಭೆ ಚುನಾವಣೆ ವೇಳೆ ತಣ್ಣಗಾಗಿದ್ದ ವಿವಾದವನ್ನು ಈಗ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೆದಕಿದ್ದರಿಂದ ಆರಿದ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇದರ ಹಿಂದೆ ಅಧಿಕಾರದಲ್ಲಿರುವ ಕಾಂಗ್ರೆಸ್ ಪ್ರಭಾವಿ ಕೈಗಳು ಕೆಲಸ ಮಾಡಿವೆ. ಹೀಗಾಗಿ ಮೇಯರ್ ಪರಿವಾರದ ವ್ಯಕ್ತಿಯೊಬ್ಬರು ಮುಂದೆ ನಿಂತು ಉರ್ದು ಮತ್ತು ಇಂಗ್ಲಿಷ್ ನಾಮಫಲಕ ಅಳವಡಿಸಿದ್ದಾರೆ ಎನ್ನಲಾಗಿದೆ.
ಮಾರ್ಚ್​ 27ರಂದು ಚುನಾವಣೆ ನೀತಿ ಸಂಹಿತೆ ಜಾರಿ ಮುನ್ನವೇ ಆಗಿನ ಮೇಯರ್ ಶರಣಕುಮಾರ ಮೋದಿ ಪೌರ ಕಾರ್ಮಿಕರ ಜತೆ ಪಾಲಿಕೆ ನೂತನ ಕಟ್ಟಡ ಉದ್ಘಾಟಿಸಿ ಕೆಲಸಗಳನ್ನು ಕಾರ್ಯಾರಂಭ ಮಾಡಿದ್ದರು. ಉರ್ದು ಫಲಕ ವಿರುದ್ಧ ಹೋರಾಟ ಶುರುವಾದಾಗ ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕರು ಕನ್ನಡದಲ್ಲಿ ಮಾತ್ರ ನಾಮಫಲಕ ಹಾಕಬೇಕು. ಉರ್ದುವಿನಲ್ಲಿ ಹಾಕಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ಫಲಕ ವಿವಾದ ಮುಚ್ಚಿ ಹೋಗಿತ್ತು. ಪರ-ವಿರೋಧ ಪ್ರತಿಭಟನಾಕಾರರು ತೆಪ್ಪಗಾಗಿದ್ದರು. ಹೀಗಿರುವಾಗ ಒಮ್ಮೆಲೆ ಏಕೆ ಉರ್ದು ಮತ್ತು ಇಂಗ್ಲಿಷ್ ಫಲಕ ಅಳವಡಿಸಲಾಗಿದೆ ಎಂಬುದು ಬಿಲಿಯನ್ ಡಾಲರ್ ಪ್ರಶ್ನೆಯಾಗಿದ್ದು, ಚರ್ಚೆಗೆ ಗ್ರಾಸವೊದಗಿಸಿದೆ.
ಮತ್ತೆ ಉರ್ದು, ಇಂಗ್ಲಿಷ್ ಫಲಕ ಹಾಕಿರುವ ವಿಷಯ ಅರಿಯುತ್ತಲೇ ಕನ್ನಡಪರ ಸಂಘಟನೆಗಳ ಮುಖಂಡರು ಪಾಲಿಕೆ ಮುಂದೆ ಶನಿವಾರ ಪ್ರತಿಭಟನೆ ನಡೆಸಿ ಕೂಡಲೇ ಈ ಫಲಕ ತೆಗೆದು ಹಾಕುವಂತೆ ಆಗ್ರಹಿಸಿದರು. ಇದರಿಂದಾಗಿ ಗೊಂದಲದ ವಾತಾವರಣ ಉಂಟಾಯಿತು. ಮಧ್ಯಪ್ರವೇಶಿಸಿದ ಪೊಲೀಸರು ಹೋರಾಟಗಾರರನ್ನು ವಶಕ್ಕೆ ತೆಗೆದುಕೊಂಡರು. ಮುನ್ನೆಚ್ಚರಿಕೆಯಾಗಿ ಪಾಲಿಕೆ ಸುತ್ತ ಬ್ರಹ್ಮಪುರ ಇನ್ಸ್ಪೆಕ್ಟರ್ ಶ್ರೀಮಂತ ಇಲ್ಲಾಳ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಎಸ್ಪಿ ಶಶಿಕುಮಾರ, ಹೆಚ್ಚುವರಿ ಎಸ್ಪಿ ಜಯಪ್ರಕಾಶ ಇತರರು ಭೇಟಿ ನೀಡಿ ಸ್ಥಿತಿಗತಿ ಅವಲೋಕನ ನಡೆಸಿದರು.

ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರ ಬಂಧನ: ನಿಯಮ ಉಲ್ಲಂಘಿಸಿ ಪಾಲಿಕೆ ಕಟ್ಟಡದ ಮೇಲೆ ಉರ್ದು ಮತ್ತು ಇಂಗ್ಲಿಷ್ ನಾಮಫಲಕ ಹಾಕಿದ್ದನ್ನು ಖಂಡಿಸಿ ಹಾಗೂ ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ಪಾಲಿಕೆಯ ಬಿಜೆಪಿ ಸದಸ್ಯರು ಶನಿವಾರ ಬೆಳಗ್ಗೆ ಪ್ರತಿಭಟನೆಗಿಳಿದರು. ಜಿಲ್ಲಾ ಉಸ್ತುವಾರಿ ಸಚಿವರ ಸಲಹೆಯಂತೆ ಮೇಯರ್ ಕಡೆಯವರು ಫಲಕ ಅಳವಡಿಸಿ ಇಲ್ಲದ ವಿವಾದ ಹುಟ್ಟು ಹಾಕಿದ್ದಾರೆ. ಶಾಂತವಾಗಿದ್ದ ಕಲಬುರಗಿಯಲ್ಲಿ ಅಶಾಂತಿ ಮೂಡಿಸುವ ಉದ್ದೇಶದಿಂದಲೇ ಇಂತಹ ಕೆಲಸ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಬೇಕು. ಹಿಂದಿನ ಆದೇಶದಂತೆ ಉರ್ದು ಇತರ ಭಾಷೆ ಫಲಕ ತೆಗೆದು ಹಾಕಬೇಕು. ಅಲ್ಲದೆ ಈ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ರಾಜಕೀಯ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಗಿಳಿದ ಬಿಜೆಪಿ ಸದಸ್ಯರಾದ ಶಿವಾನಂದ ಪಾಟೀಲ್ ಅಷ್ಟಗಿ, ಆರ್.ಎಸ್.ಪಾಟೀಲ್, ವಿಠ್ಠಲ್ ಜಾಧವ್, ಶಿವು ಸ್ವಾಮಿ, ವಿಶಾಲ್ ದರ್ಗಿ, ವೀರಣ್ಣ ಹೊನ್ನಳ್ಳಿ ಇತರರನ್ನು ಎಎಸ್ಪಿ ಅಕ್ಷಯ ಎಂ.ಹಾಕೆ, ಇನ್ಸ್ಪೆಕ್ಟರ್ ಶ್ರೀಮಂತ ಇಲ್ಲಾಳ ವಶಕ್ಕೆ ತೆಗೆದುಕೊಂಡರು.
ಇದೇ ವೇಳೆ ಕನ್ನಡಪರ ಸಂಘಟನೆಯವರ ಪ್ರತಿಭಟನೆ ತೀವ್ರಗೊಂಡಾಗ ಮುಖಂಡರಾದ ನಂದಕುಮಾರ ನಾಗಭುಜಂಗೆ, ಅಮೃತ ಪಾಟೀಲ್ ಸಿರನೂರ, ರವಿ ದೇಗಾಂವ, ಮನೋಹರ ಬಿರನೂರ, ಸಂದೀಪ ಭರಣಿ, ಸಿದ್ದು ಕದಂಗಲ್ ಇತರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಪೊಲೀಸ್ ಮೈದಾನಕ್ಕೆ ಕರೆದೊಯ್ದು ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆಗೊಳಿಸಿದರು.

Leave a Reply

Your email address will not be published. Required fields are marked *