ಪಾಲಕರ ನಿಂದಿಸಿದ ಗೆಳೆಯನ ಕೊಂದವ ಸೆರೆ: ಉತ್ತರ ಪ್ರದೇಶಕ್ಕೆ ಪರಾರಿಯಾಗಿದ್ದ ಆರೋಪಿ

ಬೆಂಗಳೂರು: ಕುಡಿದ ಮತ್ತಿನಲ್ಲಿ ಪಾಲಕರು ಮತ್ತು ಸಹೋದರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಕ್ಕೆ ಮದ್ಯದ ಬಾಟಲಿಯಿಂದ ಚುಚ್ಚಿ ಸ್ನೇಹಿತನನ್ನೇ ಕೊಲೆ ಮಾಡಿದ್ದ ಪ್ರಕರಣವನ್ನು ಮರಣೋತ್ತರ ಪರೀಕ್ಷಾ ವರದಿ ಸಹಾಯದಿಂದ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಭೇದಿಸಿದ್ದಾರೆ.

ಉತ್ತರಪ್ರದೇಶ ಗೋರಖ್​ಪುರದ ರಮೇಶ್(30) ಕೊಲೆಯಾದವ. ಮನೋಹರ್ ಪ್ರೇಮ್ಂದ್ (33) ಬಂಧಿತ. ಮಹಾಲಕ್ಷ್ಮೀ ಲೇಔಟ್ ನಿವಾಸಿ ಲೋಕೇಶ್ ಲಗ್ಗೆರೆಯಲ್ಲಿ ಒಳಾಂಗಣ ವಿನ್ಯಾಸ ಅಂಗಡಿ ಇಟ್ಟುಕೊಂಡಿದ್ದಾರೆ. ಅವರ ಅಂಗಡಿಯಲ್ಲಿ 3 ವರ್ಷಗಳಿಂದ ರಮೇಶ್ ಹಾಗೂ ಮನೋಹರ್ ಮತ್ತು ಇನ್ನೂ ಕೆಲ ಹುಡುಗರು ಕೆಲಸ ಮಾಡುತ್ತಿದ್ದರು.

ಕೆಲಸಗಾರರಿಗೆ ಉಳಿದುಕೊಳ್ಳಲು ಲಗ್ಗೆರೆ, ಕೆಂಪೇಗೌಡ ಲೇಔಟ್​ನಲ್ಲಿ ಶೀಟ್ ಮನೆಗಳನ್ನು ನೀಡಿದ್ದರು. ಜ.15ರಂದು ಸಂಕ್ರಾಂತಿ ಹಬ್ಬವಿದ್ದ ಹಿನ್ನೆಲೆಯಲ್ಲಿ ಮೂರು ದಿನ ರಜೆ ನೀಡಲಾಗಿತ್ತು. ಅಂದು ಮನೋಹರ್ ಮತ್ತು ರಮೇಶ್ ಅತಿಯಾಗಿ ಮದ್ಯಸೇವನೆ ಮಾಡಿದ್ದರು. ಮತ್ತಿನಲ್ಲಿದ್ದ ರಮೇಶ್ ತನ್ನ ಸ್ನೇಹಿತ ಮನೋಹರ್​ನ ಪಾಲಕರನ್ನು ಅವಾಚ್ಯವಾಗಿ ನಿಂದಿಸಿದ್ದ. ಇದರಿಂದ ಆಕ್ರೋಶಗೊಂಡ ಆತ, ರಮೇಶ್ ಗಾಢನಿದ್ದೆಯಲ್ಲಿದ್ದಾಗ ಒಡೆದ ಮದ್ಯದ ಬಾಟಲಿಯಿಂದ ಕಿಬ್ಬೊಟ್ಟೆಗೆ ಚುಚ್ಚಿ ಹಲ್ಲೆ ನಡೆಸಿದ್ದ. ಗಾಯಗೊಂಡ ರಮೇಶ್ ಕಿರುಚಲು ಆರಂಭಿಸಿದಾಗ ರಾಡ್​ನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಉತ್ತರ ಪ್ರದೇಶಕ್ಕೆ ಪರಾರಿಯಾಗಿದ್ದ.

ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು

ರಮೇಶ್ ಮತ್ತು ಇತರರು ಕೆಲಸಕ್ಕೆ ಬಾರದೆ ಮೊಬೈಲ್ ಆಫ್ ಮಾಡಿಕೊಂಡ ಹಿನ್ನೆಲೆಯಲ್ಲಿ ಅನುಮಾನಗೊಂಡು ಲೋಕೇಶ್, ಕೆಲಸಗಾರರು ಉಳಿದುಕೊಂಡಿದ್ದ ಮನೆಯ ಹತ್ತಿರ ಹೋಗಿ ನೋಡಿದಾಗ ಬೀಗ ಹಾಕಿರುವುದು ಕಂಡು ಬಂದಿತ್ತು. ಆದರೆ, ಮನೆಯೊಳಗಿನಿಂದ ಕೆಟ್ಟ ವಾಸನೆ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಬಾಗಿಲು ಒಡೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ರಮೇಶ್ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಲೋಕೇಶ್ ಮಹಾಲಕ್ಷ್ಮೀ ಲೇಔಟ್ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.