ಪಾರ್ಶ್ವನಾಥ ಭಗವಾನರ ಮಹಾಮಸ್ತಕಾಭಿಷೇಕ

ನಿಪ್ಪಾಣಿ: ಆತ್ಮಕಲ್ಯಾಣ ಮತ್ತು ಶಾಂತಿಗಾಗಿ ದಾನ ಉತ್ತಮ ಮಾರ್ಗವಾಗಿದೆ ಎಂದು ಎಂದು ಆಚಾರ್ಯ ವರ್ಧಮಾನ ಸಾಗರ ಮಹಾರಾಜರು ಹೇಳಿದ್ದಾರೆ.

ತಾಲೂಕಿನ ಸ್ತವನಿಧಿ ಗ್ರಾಮದಲ್ಲಿ ಶ್ರೀ 1008 ಪಾರ್ಶ್ವನಾಥ ಭಗವಾನರ ಪಂಚಕಲ್ಯಾಣ ಮಹೋತ್ಸವ ಮತ್ತು ಮಹಾಮಸ್ತಕಾಭಿಷೇಕ ಕಾರ್ಯಕ್ರಮದ ಕೊನೆಯ ದಿನವಾದ ಭಾನುವಾರ ಆಶೀರ್ವಚನ ನೀಡಿದರು. ಉತ್ತಮ ಸಂಸ್ಕಾರದೊಂದಿಗೆ ಮಕ್ಕಳನ್ನು ಬೆಳೆಸುವುದು ಎಲ್ಲರ ಜವಾಬ್ದಾರಿ ಎಂದರು.

ಬೆಳಗ್ಗೆ ಮಂಗಲ ನಿನಾದ, ಮಂಗಲ ವಾದ್ಯ ಘೋಷ, ಭಗವಾನ ಶ್ರೀ ಪಾರ್ಶ್ವನಾಥರ ಪಂಚಾಮೃತ ಅಭಿಷೇಕ, ಮಹಾಶಾಂತಿ ಮಂತ್ರ, ಭಗವಾನರ ನಿರ್ವಾಣ ಕಲ್ಯಾಣ, ಮಂಗಲ ಕುಂಭ ಮೆರವಣಿಗೆ, ಮಂಟಪದಲ್ಲಿ ಭಗವಾನರ ಅಭಿಷೇಕ ಜರುಗಿದವು. ವಿವಿಧ ಗಣ್ಯರನ್ನು ಸತ್ಕರಿಸಲಾಯಿತು. ಮಧ್ಯಾಹ್ನ ಅಮೃತ ಸ್ಥಾನ 1008 ಕಳಸದಿಂದ ಭಗವಂತರ ಹಾಲಿನ ಮಹಾಮಸ್ತಕಾಭಿಷೇಕ ಅದ್ದೂರಿಯಾಗಿ ಜರುಗಿತು. ಧ್ವಜಾರೋಹಣ, ಮಂಗಳಾರತಿ ಜರುಗಿದವು.

ವೃಷಭ ಸಾಗರ ಮಹಾರಾಜ, ವರ್ಧಮಾನ ಸಾಗರಜಿ ಮಹಾರಾಜ, ಸಕಲಕೀರ್ತಿ ಮಹಾರಾಜ, ವಿಧೇಹಸಾಗರ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಕಂಕನ ವಿಸರ್ಜನೆ ಕಾರ್ಯಕ್ರಮದೊಂದಿಗೆ ಪಂಚಕಲ್ಯಾಣ ಮಹೋತ್ಸವ ಮತ್ತು ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ತೆರೆ ಬಿತ್ತು. ಶ್ರಾವಕ, ಶ್ರಾವಕಿಯರು ಉಪಸ್ಥಿತರಿದ್ದರು.