ಪಾರದರ್ಶಕ ಚುನಾವಣೆಗೆ ಸಹಕರಿಸಿ

ಹಾವೇರಿ: ಪಾರದರ್ಶಕ ಹಾಗೂ ವ್ಯವಸ್ಥಿತ ಚುನಾವಣೆಗೆ ಮತಗಟ್ಟೆ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಸಿಬ್ಬಂದಿಯು ತರಬೇತಿಯಲ್ಲಿ ಪಡೆದ ಮಾಹಿತಿ ಪ್ರಕಾರ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಉಪವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ತಿಪ್ಪೇಸ್ವಾಮಿ ಹೇಳಿದರು.

ಲೋಕಸಭೆ ಚುನಾವಣೆ ನಿಮಿತ್ತ ನಗರದ ಹುಕ್ಕೇರಿ ಮಠದ ಶಿವಲಿಂಗೇಶ್ವರ ಪ್ರೌಢಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಮತಗಟ್ಟೆ ಅಧಿಕಾರಿಗಳ ಮೊದಲ ಸುತ್ತಿನ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮತಗಟ್ಟೆ ಮಟ್ಟದ ಅಧಿಕಾರಿಗಳು ಮತದಾನದ ಹಿಂದಿನ ದಿನ ಮತಯಂತ್ರ, ಚುನಾವಣೆ ಸಾಮಗ್ರಿ, ಪೋಲಿಂಗ್ ಏಜೆಂಟರ ನೇಮಕ ಪತ್ರ ಮತ್ತಿತರ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿ ಖಾತ್ರಿಪಡಿಸಿಕೊಳ್ಳಬೇಕು. ಮತದಾನದ ದಿನದಂದು ಮತಯಂತ್ರಗಳು, ಟೆಂಡರ್ ಬ್ಯಾಲೆಟ್ ಪೇಪರ್, ವಿಭಿನ್ನತಾ ಗುರುತಿನ ಮುದ್ರೆ, ಅಳಿಸಲಾಗದ ಶಾಯಿ ಮತ್ತಿತರ ಚುನಾವಣೆ ಸಾಮಗ್ರಿಯನ್ನು ಮಸ್ಟರಿಂಗ್ ಸೆಂಟರ್​ನಲ್ಲಿ ಚೆಕ್​ಲಿಸ್ಟ್ ಪ್ರಕಾರ ಪಡೆದುಕೊಳ್ಳಬೇಕು ಎಂದರು.

ಮತದಾನ ಕೇಂದ್ರಕ್ಕೆ ತಲುಪಿದ ನಂತರ ನಿರ್ದಿಷ್ಟಪಡಿಸಿದ ಕೇಂದ್ರಕ್ಕೆ ತೆರಳಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ರಾಜಕೀಯ ಪಕ್ಷಗಳು ಅಥವಾ ಚುನಾವಣೆ ಘೊಷಣೆ ಹೊಂದಿರುವ ಛಾಯಾಚಿತ್ರಗಳನ್ನು ಮರೆಮಾಚಬೇಕು. ಎಲ್ಲ ವಿಳಾಸದ ಟ್ಯಾಗ್ ಬರೆದಿಟ್ಟುಕೊಂಡು ನಮೂನೆಗಳಿಗೆ ವಿಭೇಧ ಚಿಹ್ನೆಯ ಗುರುತು ಹಾಕಿಟ್ಟುಕೊಳ್ಳಬೇಕು. ಮತದಾರರ ಅಧಿಕೃತ ಪಟ್ಟಿಯ ಎಲ್ಲ ಪುಟಗಳು ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದರು.

ಮತದಾನ ನಡೆಯುವ ವೇಳೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ, ಮತಗಟ್ಟೆ ಪ್ರದೇಶ, ಮತದಾರರ ಸಂಖ್ಯೆ, ಮತದಾನದ ಸಮಯ ಕುರಿತಂತೆ ಮತಗಟ್ಟೆ ಹೊರಗಡೆ ಎದ್ದು ಕಾಣುವಂತೆ ಪ್ರದರ್ಶಿಸಬೇಕು. ಮತದಾನ ಪ್ರಾರಂಭದ ನಂತರ ಮೊದಲನೇ ಮತದಾರನು ಮತ ಚಲಾಯಿಸಿದಾಗ ಸಿ.ಯು. ನಲ್ಲಿ ಟೋಟಲ್ ಬಟನ್ ಒತ್ತಿ ಒಂದು ಮತ ಚಲಾವಣೆಯಾಗಿದೆಯೇ ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದರು.

ಪ್ರಿಸೈಡಿಂಗ್ ಅಧಿಕಾರಿಗಳು ಮತಗಟ್ಟೆ ಹಾಗೂ ಮತದಾನ ಸಮಯದಲ್ಲಿನ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳಬೇಕು. ಮತದಾನ ಪ್ರಾರಂಭವಾಗುವ ಮೊದಲು ಏಜೆಂಟರಿಗೆ ಗುರುತು ಮಾಡಲ್ಪಟ್ಟ ಮತದಾರರ ಪಟ್ಟಿಯನ್ನು ತೋರಿಸಬೇಕು. ಅಧಿಕೃತ ಮತದಾರರ ಪಟ್ಟಿ ಇದೆಯೇ ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ಕೇಂದ್ರದಲ್ಲಿ ಸಾಮಗ್ರಿ ಪಡೆಯುವುದು ಹಾಗೂ ನೀಡುವ ಸಂಪೂರ್ಣ ಜವಾಬ್ದಾರಿ ಪ್ರಿಸೈಡಿಂಗ್ ಅಧಿಕಾರಿಗಳದ್ದಾಗಿರುತ್ತದೆ. ಮತಗಟ್ಟೆ ಹಾಗೂ ಸುತ್ತಮುತ್ತ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಗೋವಿಂದರೆಡ್ಡಿ, ತಹಸೀಲ್ದಾರ್ ಶಿವಕುಮಾರ, ತಾಪಂ ಇಒ ಅನ್ನಪೂರ್ಣಾ, ಚುನಾವಣೆ ತರಬೇತಿ ಅಧಿಕಾರಿ ಹುಲಿರಾಜ ಮತ್ತಿತರರಿದ್ದರು.