ಪಾಪನಾಶಕ್ಕೆ ಬಂತು ಭಕ್ತ ಸಮೂಹ

ವಿಜಯವಾಣಿ ಸುದ್ದಿಜಾಲ ಬೀದರ್
ನಗರ ಸೇರಿ ಜಿಲ್ಲಾದ್ಯಂತ ಸೋಮವಾರ ಮಹಾ ಶಿವರಾತ್ರಿ ಪರ್ವವನ್ನು ಶ್ರದ್ಧೆ, ಭಕ್ತಿಯೊಂದಿಗೆ ಆಚರಿಸಲಾಯಿತು. ಶಿವನಾಮ ಸ್ಮರಣೆಯಲ್ಲಿ ಜನರು ಉಪವಾಸ ವ್ರತ ಕೈಗೊಂಡರು. ಶಿವ, ಮಹಾದೇವ ಮಂದಿರಗಳಲ್ಲಿ ಪೂಜೆ, ಅಭಿಷೇಕ, ಭಜನೆ ಮುಂತಾದ ಧಾರ್ಮಿಕ ಕಾರ್ಯಕ್ರಮ ನಡೆದವು.

ನಗರದ ಐತಿಹಾಸಿಕ ಪಾಪನಾಶ ಮಂದಿರಕ್ಕೆ ಭಕ್ತರ ಮಹಾಪೂರವೇ ಹರಿದುಬಂತು. ಬೆಳಗ್ಗಿನ ಜಾವ 4ರಿಂದಲೇ ಭಕ್ತರು ಪಾಪನಾಶದತ್ತ ಹೆಜ್ಜೆ ಹಾಕಿದರು. ಇಡೀ ಪಾಪನಾಶ ಪರಿಸರ ಭಕ್ತ ಸಮೂಹದಿಂದ ತುಂಬಿತ್ತು. 50 ಸಾವಿರಕ್ಕೂ ಹೆಚ್ಚು ಭಕ್ತರು ಶಿವಲಿಂಗ ದರ್ಶನ ಪಡೆದು ಭಕ್ತಿಭಾವ ಮೆರೆದರು. ಪುಷ್ಕರಣಿಯಲ್ಲಿ ಅನೇಕರು ಸ್ನಾನ ಮಾಡಿದರು.

ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಮಂದಿರದಲ್ಲಿ ಭಕ್ತ ಸಮೂಹವೇ ಸೇರಿತ್ತು. ಸಂಜೆ 4ರಿಂದ ತಡರಾತ್ರಿವರೆಗೆ ಮತ್ತೆ ಹೆಚ್ಚಿನ ಜನರು ದರ್ಶನಕ್ಕೆ ಆಗಮಿಸಿದರು. ಶಿವನಗರ ಕ್ರಾಸ್ನಿಂದ ಒಂದು ಕಿಮೀ ದೂರದ ದೇವಸ್ಥಾನದವರೆಗೆ ಜನರ ಸಾಲು ಇತ್ತು. ಓಂ ನಮಃ ಶಿವಾಯ ಮಂತ್ರಘೋಷಗಳು ಮೊಳಗಿದವು. ಪೂಜಾ ಸಾಮಗ್ರಿ ಜತೆಗೆ ಆಟಿಕೆ, ಇತರೆ ವಸ್ತುಗಳ ಬಿಕ್ರಿಯೂ ಜೋರಾಗಿ ನಡೆಯಿತು.

ಹಬ್ಬದ ಹಿನ್ನೆಲೆಯಲ್ಲಿ ಶಿವಲಿಂಗಕ್ಕೆ ಬಿಲ್ವಾರ್ಚನೆ, ಪಂಚಾಮೃತ ಹಾಗೂ ಕ್ಷೀರಾಭಿಷೇಕ ನಡೆದವು. ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ದೇವಸ್ಥಾನ ಸಮಿತಿ ಅಧ್ಯಕ್ಷ ಚಂದ್ರಕಾಂತ ಶೆಟಕಾರ್ ಹಾಗೂ ಪದಾಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಿದ್ದರು. ಸಂಚಾರ ಸುಗಮಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದರು. ಅನೇಕ ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿ ಶಿವಲಿಂಗ ದರ್ಶನ ಪಡೆದರು.

ಶಿವರಾತ್ರಿಯು ದಿನವಿಡೀ ಪಾಪನಾಶ ಪರಿಸರದಲ್ಲಿ ಜಾತ್ರೆ ವಾತಾವರಣ ನಿಮರ್ಿಸಿತ್ತು. ತ್ರಿದಳ ಬಿಲ್ವಪತ್ರೆ ವ್ಯಾಪಾರ ಭರಾಟೆಯಿಂದ ನಡೆಯಿತು. ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಣೆ ಮಾಡುವುದರಿಂದ ತ್ರಿಕಾಲ ಪಾಪ ಸಂಹಾರವಾಗುತ್ತದೆ ಎಂಬ ನಂಬಿಕೆ. ಹೀಗಾಗಿ ಸಾರ್ವಜನಿಕರು ತ್ರಿದಳ ಬಿಲ್ವಪತ್ರೆಗಳನ್ನು ಅಧಿಕ ಮೊತ್ತ ಕೊಟ್ಟು ಖರೀದಿಸಿದರು. ಅನ್ನ ದಾಸೋಹ ಮಾಡಲಾಗಿತ್ತು. ಫ್ರೈಂಡ್ಸ್ ಅಸೋಸಿಯೇಷನ್ನಿಂದ ಭಕ್ತರಿಗೆ ಹಣ್ಣು ವಿತರಣೆ ನಡೆಯಿತು. ಈ ಸಲದ ಶಿವರಾತ್ರಿ ಸೋಮವಾರ ಬಂದಿದ್ದರಿಂದ ಭಕ್ತರ ಸಂಖ್ಯೆ ಜಾಸ್ತಿಯೇ ಇತ್ತು.