ಪಾನಮತ್ತನಾಗಿ ಪೊಲೀಸರನ್ನು ನಿಂದಿಸಿದ ಯುವಕ ಅರೆಸ್ಟ್: ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಬೆಂಗಳೂರು: ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಯುವಕನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಮೂಲದ ರಾಕೇಶ್ (23) ಬಂಧಿತ. ಆರೋಪಿ ಶೇಷಾದ್ರಿಪುರದಲ್ಲಿ ಹೋಟೆಲ್​ವೊಂದರ ಸಪ್ಲೈಯರ್. ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿರುವ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಈ ಸಂಬಂಧ ಸಾರ್ವಜನಿಕರೊಬ್ಬರು ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರದ ಹಿಂದೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪಾನಮತ್ತನಾಗಿ ಗಲಾಟೆ ಮಾಡಿದ್ದ. ಈ ಸಂಬಂಧ ಆತನನ್ನು ಠಾಣೆಗೆ ಕರೆತಂದು ವಿಚಾರಿಸಿ ಬುದ್ದಿ ಹೇಳಿ ಕಳುಹಿಸಲಾಗಿತ್ತು. ಇದರಿಂದ ಆಕ್ರೋಶಗೊಂಡ ಆತ ನಮ್ಮ ವಿರುದ್ಧ ಹಣ ಸುಲಿಗೆ ಆರೋಪ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕರ್ನಾಟಕ ಪೊಲೀಸರು ಸರಿಯಿಲ್ಲ. ಅವರು ಇರೋವರೆಗೂ ರಾಜ್ಯ ಉದ್ಧಾರ ಆಗುವುದಿಲ್ಲ. ಅವರನ್ನು ನಡುರಸ್ತೆಯಲ್ಲಿ ಸುಟ್ಟು ಹಾಕಬೇಕು. ಡಿ.ಕೆ. ಶಿವಕುಮಾರ್ ಬಂಧಿಸಿರುವವರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದೆಲ್ಲ ಕಿರುಚಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *