ಪಾದುಕಾ ಪ್ರತಿಷ್ಠಾಪನಾ ಮಹೋತ್ಸವ 27ರಿಂದ

ಸಿದ್ದಾಪುರ: ತಾಲೂಕಿನ ಬಿಳಗಿಯ ಐತಿಹಾಸಿಕ ದುರ್ಗಾಂಬಿಕಾ ನೂತನ ದೇವಾಲಯದಲ್ಲಿ ಸಪರಿವಾರ ದುರ್ಗಾಂಬಿಕಾ ದೇವರ ಪಾದುಕಾ ಪ್ರತಿಷ್ಠಾಪನಾ ಮಹೋತ್ಸವ ಫೆ. 27, 28 ಹಾಗೂ ಮಾ. 1ರಂದು ನಡೆಯಲಿದೆ ಎಂದು ದೇವಾಲಯದ ಮೊಕ್ತೇಸರ ಶ್ರೀಧರ ನಾರಾಯಣ ಹೆಗಡೆ ನೀರಗಾಲ ಹೇಳಿದರು.

ಬಿಳಗಿ ದುರ್ಗಾಂಬಿಕಾ ದೇವಾಲಯದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ದೇವಾಲಯವನ್ನು ಕೇರಳ ಶೈಲಿಯಲ್ಲಿ ನಿರ್ವಿುಸಲಾಗಿದ್ದು, ಮಹೇಶ ಮುನಿಯಂಗಳ ಕಟ್ಟಡದ ವಿನ್ಯಾಸ ರಚಿಸಿದ್ದಾರೆ ಎಂದರು.

ಫೆ. 27ರಂದು ಬೆಳಗ್ಗೆ ಮತ್ತು ಸಂಜೆ ವಿವಿಧ ಧಾರ್ವಿುಕ ಕಾರ್ಯಕ್ರಮ ಜರುಗಲಿವೆ. 28ರಂದು ರತ್ನನ್ಯಾಸ ಹೋಮ, ಶುದ್ಧಿ ಹವನ, ನವಗ್ರಹ ಶಾಂತಿ, ದುರ್ಗಾಂಬಿಕಾ ಪಾದುಕಾ ಪ್ರತಿಷ್ಠೆ ಮತ್ತು ಪರಿವಾರ ದೇವತಾ ಪ್ರತಿಷ್ಠೆ, ವಜ್ರಾಷ್ಟ ಬಂಧ, ನಾಗ ಪ್ರತಿಷ್ಠೆ, ಶಿಖರ ಕಲಶ ಪ್ರತಿಷ್ಠೆ, ಪ್ರಾಣ ಪ್ರತಿಷ್ಠೆ, ಮಂಗಳಾರತಿ, ಪ್ರಸಾದ ಭೋಜನ. ಸಂಜೆ ಮಂಡಲ ದರ್ಶನ, ಬ್ರಹ್ಮ ಕಲಶ ಸ್ಥಾಪನ, ದುರ್ಗಾದೀಪ ನಮಸ್ಕಾರ, ಆಶ್ಲೇಷಾ ಬಲಿ, ಯೋಗಿನಿ ಬಲಿ, ರಾಜೋಪಚಾರ ಪೂಜೆ. ಮಾ. 1ರಂದು ಬೆಳಗ್ಗೆ ಶಕ್ತಿ ಹೋಮ, ಮೂಲಮಂತ್ರ ಹವನ, ಕಲಾವೃದ್ಧಿ ಹವನ, ದುರ್ಗಾಶಾಂತಿ ಹವನ, ಬ್ರಹ್ಮ ಕಲಶಾಭಿಷೇಕ, ರಾಮಚಂದ್ರಾಪುರಮಠದ ಶ್ರೀಗಳ ಸಾನ್ನಿಧ್ಯದಲ್ಲಿ ಪೂರ್ಣಾಹುತಿ, ಮಂಗಳಾರತಿ, ಪ್ರಸಾದ. 2 ಗಂಟೆಯಿಂದ ರಾಘವೇಶ್ವರ ಭಾರತೀ ಶ್ರೀಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ. ದೇವಾಲಯದ ಕಟ್ಟಡ ಸಹಾಯಾರ್ಥ ರಾತ್ರಿ ಪೆರ್ಡರು ಮೇಳದವರಿಂದ ಚಂದ್ರಲೇಖಾ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು.

ಗಜಾನನ ನಾಯ್ಕ ಬಿಳಗಿ ಮಾತನಾಡಿ, ದೇವಾಲಯದ ನೂತನ ಕಟ್ಟಡ ನಿರ್ವಣಕ್ಕೆ ಸೀಮೆಯ ಭಕ್ತರು, ಸಂಘ-ಸಂಸ್ಥೆಗಳು ಹಾಗೂ ಅನೇಕ ದಾನಿಗಳು ಆರ್ಥಿಕ ಸಹಕಾರ ನೀಡಿದ್ದಾರೆ. ಫೆ. 17ರಂದು ಹಂಗಾಮಿ ಅಂಗಡಿ ಹರಾಜು ನಡೆಸಲಾಗುವುದು ಎಂದರು.

ಇದೇ ವೇಳೆ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಸುವಸ್ತುಗಳ ಸಂಗ್ರಹಣೆಗೆ ದುರ್ಗಾರಥಕ್ಕೆ ದೇವಾಲಯದ ಮೊಕ್ತೇಸರ ಶ್ರೀಧರ ನಾರಾಯಣ ಹೆಗಡೆ ಪೂಜೆ ಸಲ್ಲಿಸಿ, ಚಾಲನೆ ನೀಡಿದರು.

ಎಂ.ಆರ್. ನಾಯ್ಕ ಕುರವಂತೆ, ಗೋಪಿಚಂದ ಮಡಗಾಂವಕರ್, ದಯಾನಂದ ಚಿನಿವಾರ, ಕೆ.ಬಿ. ನಾಯ್ಕ, ಲಕ್ಷ್ಮಣ ನಾಯ್ಕ ಹೊಸಮಂಜು, ಶಾಂತಾರಾಮ ಪೈ ಬಿಳಗಿ, ಜಯಪ್ರಕಾಶ ನಾಯ್ಕ ಹೆಮ್ಮನಬೈಲ್, ವೀರೇಶ ನಾಯ್ಕ ಕಲ್ಕಣಿ ಇತರರಿದ್ದರು.