ಪಾತಾಳ ಕಂಡ ಅಂತರ್ಜಲ

ಲಕ್ಷ್ಮೇಶ್ವರ: ಕಳೆದ 4 ವರ್ಷಗಳಿಂದ ಸಮರ್ಪಕ ಮಳೆಯಾಗದೇ ಅಂತರ್ಜಲಮಟ್ಟ ಪಾತಾಳ ಕಂಡಿದೆ. ಇದರಿಂದ ಪರಿಹಾರ ಕಂಡುಕೊಳ್ಳಲು ರೈತರು ಕೊಳವೆಬಾವಿ ಕೊರೆಯಿಸಿ ತೋಟಗಾರಿಕೆ ಬೆಳೆಯತ್ತ ಚಿತ್ತ ಹರಿಸಿದ್ದರು. ಆದರೆ, ಬೋರ್​ವೆಲ್​ಗಳಿಂದಲೂ ನಿರೀಕ್ಷಿತ ಪ್ರಮಾಣದ ನೀರು ಬಾರದೇ ರೈತರು ಚಿಂತಿತರಾಗಿದ್ದಾರೆ.

ತೋಟಗಾರಿಕೆ ಇಲಾಖೆ ಮೂಲಗಳ ಪ್ರಕಾರ, 388 ಎಕರೆ ತೆಂಗು, 105 ಎಕರೆ ದಾಳಿಂಬೆ, 150 ಎಕರೆ ಬಾಳೆ, 25 ಎಕರೆ ಲಿಂಬೆ, 300 ಎಕರೆ ಮಾವು, 63 ಎಕರೆ ನುಗ್ಗೆ, 63 ಎಕರೆ ಚಿಕ್ಕು, 38 ಎಕರೆ ಪೇರಲ, 55 ಎಕರೆ ಗೋಡಂಬಿ ಬೆಳೆ ಸೇರಿ ತಾಲೂಕಿನಲ್ಲಿ ಒಟ್ಟು 1,424 ಎಕರೆ ಪ್ರದೇಶದಲ್ಲಿ ವಿವಿಧ ಬೆಳೆ ಬೆಳೆಯಲಾಗುತ್ತಿದೆ.

ತುಂಗಭದ್ರಾ ನದಿ ಪಾತ್ರದ ಹತ್ತಾರು ಹಳ್ಳಿಗಳನ್ನು ಹೊರತುಪಡಿಸಿ ಬಹುತೇಕ ಕೊಳವೆಬಾವಿಗಳಿಂದಲೇ ನೀರಾವರಿ ವ್ಯವಸ್ಥೆಯಿದೆ. ಆದರೆ, ಬರಗಾಲದಿಂದಾಗಿ ಅಂತರ್ಜಲಮಟ್ಟ ಕುಸಿದಿದ್ದು, ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ತಾಲೂಕಿನ ನೆಲೂಗಲ್, ಚಿಕ್ಕಸವಣೂರ, ದೊಡ್ಡೂರ, ಸೂರಣಗಿ, ಲಕ್ಷ್ಮೇಶ್ವರ ಮತ್ತಿತರೆಡೆ ದಾಳಿಂಬೆ, ಬಾಳೆ, ನುಗ್ಗಿ, ರೇಷ್ಮೆ ಇತರ ತೋಟಗಾರಿಕೆ ಬೆಳೆಗಳಿಗೆ ನೀರಿನ ಕೊರತೆ ಕಾಡುತ್ತಿದೆ. ಜತೆಗೆ ತೇವಾಂಶದ ಕೊರತೆಯಿಂದ ರೋಗಗಳು ಕಾಣಿಸಿಕೊಂಡು ಬೆಳೆ ಒಣಗುತ್ತಿದೆ.

ಚಿಕ್ಕಸವಣೂರಿನ ನೀಲನಗೌಡ ಪಾಟೀಲ ಎಂಬುವವರು 9 ಎಕರೆ ಬಾಳೆ, 10 ಎಕರೆ ದಾಳಿಂಬೆ, 4 ಎಕರೆ ನುಗ್ಗಿ, 4 ಎಕರೆ ನಿಂಬೆ, 4 ಎಕರೆ ರೇಷ್ಮೆ ಬೆಳೆದಿದ್ದಾರೆ. ಹತ್ತಾರು ಬೋರ್​ವೆಲ್​ಗಳಿದ್ದರೂ ತಕ್ಕಷ್ಟು ನೀರು ಬಾರದೆ ಬೆಳೆಗಳೆಲ್ಲ ಒಣಗುತ್ತಿವೆ.

ಕೈಗೆ ಬಂದ ದಾಳಿಂಬೆಯನ್ನು ಮಾರುಕಟ್ಟೆಗೆ ಒಯ್ದರೆ 10 ಕೆಜಿಯ 1 ಬಾಕ್ಸ್​ಗೆ ಕೇವಲ 50 ರೂ. ದರವಿದೆ. ಇದರಿಂದ ಸಾರಿಗೆ ವೆಚ್ಚವೂ ಸರಿದೂಗುವುದಿಲ್ಲ. ಬಾಳೆ, ಕಬ್ಬು, ನುಗ್ಗೆ ಎಲ್ಲ ಬೆಳೆಗಳ ಸ್ಥಿತಿಯೂ ಇದೆ ಆಗಿದೆ ಎನ್ನುತ್ತಾರೆ ರೈತ ರಾಜಶೇಖರಗೌಡ ಪಾಟೀಲ.

ರೈತ ಮಲ್ಲನಗೌಡ ಪಾಟೀಲ ಅವರು 4 ಎಕರೆ ಬಾಳೆ ಬೆಳೆದಿದ್ದು, ಗೊನೆ ಬಿಡುವ ಹಂತದಲ್ಲಿಯೇ ನೀರಿನ ಕೊರತೆಯಿಂದ ಒಣಗಿ ನೆಲಕಚ್ಚುತ್ತಿವೆ. ಅಳಿದುಳಿದ ಬಾಳೆ ಉಳಿಸಿಕೊಳ್ಳಲು ವರುಣಾಗಮನಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಪ್ರಕೃತಿ ವಿಕೋಪ ಪರಿಹಾರ ಯೋಜನೆಯಡಿ ಸರ್ಕಾರ ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂ. ಪರಿಹಾರ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು.
| ಬಸಣ್ಣ ಬೆಂಡಗೇರಿ ರೈತ ಮುಖಂಡ

ಮೂರ್ನಾಲ್ಕು ವರ್ಷಗಳಿಂದ ಮಳೆ ಕೈಕೊಟ್ಟಿದೆ. ಇದರಿಂದ ಬೋರ್​ವೆಲ್​ಗಳ ಅಂತರ್ಜಲ ಮಟ್ಟ ಕುಸಿದಿದೆ. ಬೋರ್​ವೆಲ್ ನಂಬಿ ತೋಟಗಾರಿಕೆ ಬೆಳೆ ಬೆಳೆದಿದ್ದ ರೈತರೀಗ ಸಂಕಟಕ್ಕೆ ಸಿಲುಕಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಗಬೇಕೆಂದರೆ ಉತ್ತಮ ಮಳೆಯಾಗಬೇಕಿದೆ. ಆದರೂ ತೇವಾಂಶದ ಕೊರತೆಯಿಂದ ಬೆಳೆ ಹಾನಿಗೀಡಾದ ಕುರಿತ ಸಂಪೂರ್ಣ ಮಾಹಿತಿಯನ್ನು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.
| ಸುರೇಶ ಕುಂಬಾರ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ

Leave a Reply

Your email address will not be published. Required fields are marked *