ಪಾಕ್-ಆಫ್ಘನ್ ಗಡಿಯನ್ನು ವಿಭಜಿಸಲಿದೆ ಗೋಡೆ!

ಪೂರ್ವ ಜರ್ಮನಿ ಮತ್ತು ಪಶ್ಚಿಮ ಜರ್ಮನಿಯನ್ನು ವಿಭಜಿಸುವಂತಹ ಬರ್ಲಿನ್ ಗೋಡೆಯನ್ನು 1989ರಲ್ಲಿ ಕೆಡವಲಾಗಿತ್ತು. ಆದರೆ ಇದೀಗ ಪಾಕ್ ಮತ್ತು ಅಫ್ಘಾನಿಸ್ತಾನದ ನಡುವೆ ಇಂತಹದ್ದೊಂದು ಗೋಡೆ ನಿರ್ವಣಕ್ಕೆ ತಯಾರಿ ನಡೆಯುತ್ತಿದೆ. ಪಾಕಿಸ್ತಾನ ಈಗಾಗಲೇ ಸಿದ್ಧತೆ ನಡೆಸಿಕೊಳ್ಳುತ್ತಿದ್ದು, ಆಫ್ಘನ್ ಇದನ್ನು ವಿರೋಧಿಸಿದೆ.

 ಇತ್ತೀಚಿನ ದಿನಗಳಲ್ಲಿ ರಾಷ್ಟ್ರಗಳ ಗಡಿಗಳ ನಡುವೆ ಗೋಡೆ ನಿರ್ಮಾಣ ಮಾಡಿ ವಲಸಿಗರು ಮತ್ತು ನೆರೆಯ ರಾಷ್ಟ್ರಗಳಿಂದ ಆಗಬಹುದಾದ ದಾಳಿಗಳನ್ನು ತಡೆಯುವ ಪ್ರಯತ್ನಗಳು ಹೆಚ್ಚಾಗುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೆಕ್ಸಿಕೋದಿಂದ ಬರುವ ಅಕ್ರಮ ವಲಸಿಗರನ್ನು ತಡೆಯಲು ಗಡಿಯುದ್ದಕ್ಕೂ ಗೋಡೆ ನಿರ್ವಣಕ್ಕೆ ಯೋಜನೆ ಸಿದ್ಧಪಡಿಸುತ್ತಿದ್ದಾರೆ. ಹಂಗೇರಿಯ ಪ್ರಧಾನಿ ವಿಕ್ಟರ್ ಓರ್ಬನ್ ಸಿರಿಯಾ ವಲಸಿಗರನ್ನು ತಡೆಯುವ ಸಲುವಾಗಿ ಸರ್ಬಿಯಾ ಗಡಿಯುದ್ದಕ್ಕೂ ತಂತಿ ಬೇಲಿ ಹಾಕಿಸಿದ್ದರು. 1989ರಲ್ಲಿ ಬರ್ಲಿನ್ ಗೋಡೆ ಕೆಡವಿದ ಬಳಿಕ ರಾಷ್ಟ್ರಗಳನ್ನು ವಿಭಜಿಸುವ ಇಂತಹ ಗೋಡೆಗಳ ನಿರ್ವಣಕ್ಕೆ ಭಾರಿ ವಿರೋಧವಿತ್ತು. ಆದರೆ ಇದೀಗ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಇಂತಹದ್ದೊಂದು ಗೋಡೆ ತಲೆಎತ್ತಲಿದೆಯೇ ಎನ್ನುವ ಅನುಮಾನ ಹುಟ್ಟಿಕೊಂಡಿದೆ.

ಒಂದು ದೇಶದ ಗಡಿ ಇನ್ನೊಂದು ರಾಷ್ಟ್ರದ ಗಡಿಯನ್ನು ಸಂಧಿಸದೇ ಇರುವಂತಹ ದೇಶಗಳು ತೀರಾ ವಿರಳ. ಪ್ರಾಕೃತಿಕ ರೂಪದಲ್ಲಿ ನಿರ್ವಣವಾಗಿರುವ ದೇಶಗಳ ವಿಭಜನೆಯಲ್ಲಿ ಪರ್ವತಶ್ರೇಣಿಯೋ, ನದಿ ಅಥವಾ ಸಮುದ್ರ ಪ್ರಮುಖ ಪಾತ್ರವಹಿಸುತ್ತದೆ. ಇಂತಹ ಭಾಗಗಳಲ್ಲಿ ಮನುಷ್ಯ ಬೇಲಿಯನ್ನೋ, ಗೋಡೆಯನ್ನೋ ಕಟ್ಟಿ ದೇಶವನ್ನು ವಿಭಜಿಸುವ ಅಗತ್ಯವಿರಲಾರದು. ಆದರೆ ಬೇಲಿ ಮುಂತಾದವುಗಳ ಸಹಾಯದಿಂದ ರಾಷ್ಟ್ರ ವಿಭಜಿಸಿರುವವರ ನಡುವೆ ಯಾವತ್ತೂ ಅಸಮಾಧಾನದ ಹೊಗೆಯಾಡುತ್ತಲೇ ಇರುತ್ತದೆ. ಅಗತ್ಯ ಬಿದ್ದಾಗ ನೆರೆರಾಷ್ಟ್ರದ ಕೃತ್ಯಗಳನ್ನು ತಡೆಯಲು ಸೈನಿಕರು ಮಧ್ಯಪ್ರವೇಶಿಸಬೇಕಾಗುತ್ತದೆ. ಇದರಿಂದಲೂ ಸಮಸ್ಯೆ ಪರಿಹಾರವಾಗದೇ ಇದ್ದಲ್ಲಿ ಎರಡೂ ರಾಷ್ಟ್ರಗಳ ನಡುವೆ ಯುದ್ಧವೂ ಸಂಭವಿಸಬಹುದಾಗಿದೆ. ಎರಡೂ ರಾಷ್ಟ್ರಗಳು ತಮ್ಮ ಭೂಮಿಯಲ್ಲಿ ಗಡಿ ರಕ್ಷಣೆಗಾಗಿ ಸೇನೆಯನ್ನು ನಿಯೋಜಿಸುತ್ತವೆ. ಆದರೆ ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಲ್ಲಿ ಸೇನೆ ಯುದ್ಧ ಕಣಕ್ಕೆ ಇಳಿಯಬೇಕಾಗುತ್ತದೆ. ಇಂತಹ ಭೀಕರತೆಯನ್ನು ತಡೆಯುವ ಸಲುವಾಗಿ ವಿಶ್ವಸಂಸ್ಥೆಯಿಂದ ಹಿಡಿದು ಹಲವು ಸಂಸ್ಥೆಗಳು ಸಾಕಷ್ಟು ಪ್ರಯತ್ನ ನಡೆಸಿವೆ, ನಡೆಸುತ್ತಿವೆ. ಆದರೆ ಇದು ಪೂರ್ಣ ಪ್ರಮಾಣದಲ್ಲಿ ಸಫಲತೆ ಕಂಡಿಲ್ಲ.

ಮನುಷ್ಯ ಸಾವನ್ನಪ್ಪಿದ ಬಳಿಕ ಕೇವಲ ಆರಡಿ ಮೂರಡಿ ಜಾಗದ ಅವಶ್ಯಕತೆ ಇರುತ್ತದೆ. ಆದರೆ ತಮ್ಮ ದೇಶದ ಒಂದೊಂದು ಇಂಚು ಜಾಗಕ್ಕಾಗಿ ಇಬ್ಬರು ಮೂವರ ಗುಂಪಲ್ಲ ಬೆಟಾಲಿಯನ್ ರೂಪದಲ್ಲಿ ನೂರಾರು ಸೈನಿಕರು ಪ್ರಾಣತ್ಯಾಗ ಮಾಡುತ್ತಾರೆ. ರಾಷ್ಟ್ರಗಳ ನಡುವೆ ಯುದ್ಧ ನಡೆಯಿತೆಂದರೆ ಸೋಲೋ ಗೆಲುವೋ ಮೊದಲಿಗೆ ತಮ್ಮ ಗಡಿಯ ರಕ್ಷಣೆ ಹೇಗೆಂಬುದೇ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತದೆ.

ಭಾರತ ಸ್ವಾತಂತ್ರ್ಯ ಸಮಯದಲ್ಲಿ ಮಾತ್ರ ವಿಭಜಿತವಾಗಿದ್ದಲ್ಲ. ಕೆಲವು ವರ್ಷಗಳಲ್ಲೇ ಭಾರತೀಯ ಉಪಖಂಡದಲ್ಲಿ ಮೂರನೇ ರಾಷ್ಟ್ರವೊಂದರ ಉಗಮವಾಗಿತ್ತು. ಅದೇ ಬಾಂಗ್ಲಾದೇಶ. 1947ರಲ್ಲಿ ಜಿನ್ನಾ ನೇತೃತ್ವದಲ್ಲಿ ಮುಸ್ಲಿಮರು ತಮ್ಮ ಧರ್ಮದ ಆಧಾರದಲ್ಲಿ ಪ್ರತ್ಯೇಕ ರಾಷ್ಟ್ರ ನಿರ್ವಣದ ಬೇಡಿಕೆ ಇಟ್ಟರು. ಭಾರತ ತನ್ನದೇ ಭಾಗವನ್ನು ಪ್ರತ್ಯೇಕ ರಾಷ್ಟ್ರವೆಂದು ಸ್ವೀಕರಿಸಬೇಕಾಯಿತು. ಆದರೆ ಮುಂದೊಂದು ದಿನ ಪೂರ್ವ ಪಾಕಿಸ್ತಾನ ಬಾಂಗ್ಲಾದೇಶದ ರೂಪದಲ್ಲಿ ಸ್ವತಂತ್ರ ದೇಶವಾಗಿ ಗುರುತಿಸಿಕೊಂಡಿತು. ಈ ನಡುವೆ ಶ್ರೀಲಂಕಾ, ನೇಪಾಳ, ಭೂತಾನ್ ಮತ್ತು ಬರ್ವ ಕೂಡ ಸ್ವತಂತ್ರ ರಾಷ್ಟ್ರಗಳಾಗಿ ಬೆಳೆದುಕೊಂಡವು. ಭಾರತದ ಸುತ್ತ ಇಷ್ಟೊಂದು ರಾಷ್ಟ್ರಗಳು ಹುಟ್ಟಿಕೊಂಡರೂ ಭಾರತ ಯಾವ ದೇಶದೊಂದಿಗೂ ಸಮಸ್ಯೆ ಹುಟ್ಟಿಹಾಕಿಕೊಳ್ಳಲಿಲ್ಲ. ಬೇಲಿ ಹಾಕಿ ಗಡಿ ವಿಭಜನೆ ಮಾಡಲಾಯಿತು. ನೆರೆಯ ಪುಟ್ಟರಾಷ್ಟ್ರಗಳು ಭಾರತೀಯ ವಿಚಾರಧಾರೆಗಳೊಂದಿಗೆ ಬೆಳೆದಿದ್ದರಿಂದ ಆ ರಾಷ್ಟ್ರಗಳೊಂದಿಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳಲಿಲ್ಲ. ಆದರೆ ಪಾಕಿಸ್ತಾನ ಮಾತ್ರ ಆರಂಭದಿಂದಲೂ ಭಾರತ ದೊಂದಿಗೆ ಸಂಘರ್ಷ ನಡೆಸುತ್ತ ಬಂದಿದೆ. ಸಣ್ಣಪುಟ್ಟ ದಾಳಿಗಳ ಜತೆಗೆ ಮೂರು ಬಾರಿ ಭಾರತದೊಂದಿಗೆ ಯುದ್ಧ ನಡೆಸಿದೆ. ಇಂದಿಗೂ ಅದು ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಇರುತ್ತದೆ. ಆದರೆ, ಇಂದಿಗೂ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ತಂತಿ ಬೇಲಿ ಮಾತ್ರವಿದೆ. ಇದೆ ಕಾರಣದಿಂದ ಭಾರತಕ್ಕೆ ಆಗಿಂದ್ದಾಗೆ ಒಳನುಸುಳುವಿಕೆ ಮುಂತಾದವುಗಳನ್ನು ತಡೆಯುವ ಅಗತ್ಯ ಎದುರಾಗುತ್ತಿರುತ್ತದೆ. ಆದರೂ ನಮ್ಮ ದೇಶ ಶಾಂತಿ ಮತ್ತು ತಾಳ್ಮೆಯಿಂದ ಪ್ರತಿಕ್ರಿಯಿಸುತ್ತಿದೆ.

ಮತ್ತೊಂದೆಡೆ, ಪ್ರಪಂಚದ ಹಲವು ರಾಷ್ಟ್ರಗಳು ಕೇವಲ ಗಡಿರೇಖೆಯ ಮೇಲೆ ನಂಬಿಕೆ ಇಟ್ಟಿಲ್ಲ. ಗಡಿಗಳ ನಡುವೆ ಗೋಡೆ ನಿರ್ಮಾಣ ಮಾಡಿ ಹಲವು ಸಮಸ್ಯೆಗಳಿಂದ ಪಾರಾಗಲು, ಇನ್ನಷ್ಟು ಸುರಕ್ಷಿತವಾಗಿರಲು ಯತ್ನಿಸಿವೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿ ನಡುವೆ ಇಂತಹದ್ದೊಂದು ಗೋಡೆ ನಿರ್ವಣಕ್ಕೆ ಚಿಂತನೆ ನಡೆಸಲಾಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಧರ್ಮದ ಆಧಾರದಲ್ಲಿ ನೋಡುವುದಾದರೆ ಎರಡೂ ರಾಷ್ಟ್ರಗಳು ಮುಸ್ಲಿಂ ಬಾಹುಳ್ಯವುಳ್ಳ ರಾಷ್ಟ್ರಗಳು. ಹೀಗಿದ್ದರೂ ಗೋಡೆ ನಿರ್ವಿುಸಿ ಬರ್ಲಿನ್ ತರಹ ಸುರಕ್ಷಿತವಾಗಲು ಬಯಸುತ್ತಿವೆ. ಈ ಮೂಲಕ ತಮ್ಮ ನಡುವಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬಯಸುತ್ತವೆ. ಬ್ರಿಟಿಷ್ ಆಡಳಿತವು 1893ರಲ್ಲಿಯೇ ಈ ಎರಡೂ ರಾಷ್ಟ್ರಗಳ ಗಡಿಯನ್ನು ನಿಶ್ಚಿತ ರೂಪದಲ್ಲಿ ವಿಭಜಿಸಿ ಅದಕ್ಕೆ ನಿಗದಿತ ರೂಪ ನೀಡುವ ದೂರಗಾಮಿ ಆಲೋಚನೆಯನ್ನು ಮಾಡಿತ್ತು. ಎರಡೂ ರಾಷ್ಟ್ರಗಳು ಬ್ರಿಟಿಷ್ ಆಡಳಿತದಲ್ಲಿರುವವರೆಗೆ ಇವುಗಳ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳಲಿಲ್ಲ. ಯಾಕೆಂದರೆ ಎರಡೂ ದೇಶಗಳು ಒಂದೆ ಸರ್ಕಾರದಡಿಯಲ್ಲಿದ್ದವು. ಆದರೆ ಸ್ವಾತಂತ್ರ್ಯ ಬಳಿಕ ಪಾಕ್ ಮತ್ತು ಆಫ್ಘನ್ ನಡುವೆ ಗಡಿ ಸಂಬಂಧಿಸಿದ ಭಿನ್ನಾಭಿಪ್ರಾಯಗಳು ಹೆಚ್ಚುತ್ತಲೇ ಹೋದವು.

ಈ ವಿಚಾರದಲ್ಲಿ ಅಮೆರಿಕದ ಪಾತ್ರವೂ ಮುಖ್ಯವಾದುದು. ಅದು ಉರಿಯುತ್ತಿರುವ ಕೆಂಡಕ್ಕೆ ತುಪ್ಪ ಸುರಿಯುವ ಕಾರ್ಯವನ್ನು ಮಾಡಿತು. ಅಮೆರಿಕ ಈ ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯ, ಒಡಕು ಹುಟ್ಟುಹಾಕಿ ಎರಡೂ ಕಡೆ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಯತ್ನಿಸಿತು. ಒಂದು ಕಡೆ ಅಮೆರಿಕ ಪಾಕಿಸ್ತಾನವನ್ನು ವಿರೋಧಿಸುವಂತೆ ಕಂಡರೆ ಮತ್ತೊಂದು ಕಡೆ ಅಫ್ಘಾನಿಸ್ತಾನವನ್ನು ಬೆಂಬಲಿಸಿ ಭಾರತದ ನೆರೆರಾಷ್ಟ್ರದಲ್ಲಿ ರಾಜಕೀಯದಾಟ ಆಡುತ್ತಿದೆ.

ಹಾಗಾಗಿ, ಇನ್ನು ಕೆಲವೇ ವರ್ಷಗಳಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಬರ್ಲಿನ್ ಗೋಡೆಯಂತಹ ವಿಭಜಕ ಎದ್ದುನಿಲ್ಲಲಿದೆ ಎಂಬ ಮಾತು ಅಂತಾರಾಷ್ಟ್ರೀಯ ವಲಯದಲ್ಲಿ ಜೋರಾಗಿಯೇ ಕೇಳಿಬರುತ್ತಿದೆ. ಪಾಕ್ ಮತ್ತು ಅಫ್ಘಾನಿಸ್ತಾನ ಗಡಿ ಭಾಗವನ್ನು 1893ರಲ್ಲಿಯೇ ಬ್ರಿಟಿಷ್ ಸರ್ಕಾರ ಗುರುತಿಸಿದೆಯಷ್ಟೆ. ಆದರೆ ಇಲ್ಲಿ ಯಾವುದೇ ರೀತಿಯ ಬೇಲಿ ಇಲ್ಲ. ಈ ಭಾಗದಲ್ಲಿ ವಾಸವಾಗಿರುವ ಸಾವಿರಾರು ಪಶ್ತೂನ್ ಆದಿವಾಸಿಗಳು ದಶಕಗಳಿಂದ ಈ ಗಡಿಯನ್ನು ನಿರ್ಲಕ್ಷಿಸುತ್ತಲೇ ಬಂದಿದ್ದಾರೆ. ಹೀಗಿರುವಾಗ ಇಲ್ಲಿ ಗೋಡೆ ನಿರ್ಮಾಣ ಮಾಡಿದರೆ ನೆಲೆಸಿರುವವರಿಂದ ವಿರೋಧ ವ್ಯಕ್ತವಾಗುವುದು ಸಹಜ.

ಪಾಕಿಸ್ತಾನವು ಇಸ್ಲಾಮಿಕ್ ದಾಳಿಕೋರರ ನೆಪವನ್ನಿಟ್ಟುಕೊಂಡು 1,500 ಮೈಲಿಗಳಷ್ಟು ಉದ್ದದ ಗೋಡೆ ನಿರ್ವಣಕ್ಕೆ ಮುಂದಾಗಿದೆ. ಆದರೆ ಅಫ್ಘಾನಿಸ್ತಾನ ಈ ನಡೆಗೆ ವಿರೋಧ ವ್ಯಕ್ತಪಡಿಸಿದೆ. ಇದರಿಂದ ಚಮನ್ ಜಿಲ್ಲೆಯಲ್ಲಿರುವ ಏಳು ಗ್ರಾಮಗಳು ವಿಂಗಡಣೆಯಾಗಲಿವೆ. ಫೆಡೆರಲ್ ಅಡ್ಮಿನಿಸ್ಟರ್ ಟ್ರೖೆಬಲ್ ಏರಿಯಾ (ಏಫ್​ಎಟಿಎ)ದಲ್ಲಿನ ಕೆಲ ಗ್ರಾಮಗಳೂ ವಿಂಗಡಣೆಯಾಗಲಿವೆ. ಹೀಗಾಗಿ ಆಫ್ಘಾನ್ ಇದಕ್ಕೆ ವಿರೋಧಿಸುತ್ತಿದೆ.

ಚಮನ್​ನಲ್ಲಿ ಇತ್ತೀಚೆಗೆ ಮಾತನಾಡಿದ ಸೈನಿಕ್ ಫ್ರಂಟಿಯರ್​ನ ಸ್ಥಳೀಯ ಕಮಾಂಡರ್ ಕರ್ನಲ್ ಮಹಮ್ಮದ್ ಉಸ್ಮಾನ್ ‘ಗಡಿ ವಿಭಜಿಸುವ ಗೋಡೆ ಬರ್ಲಿನ್​ನಲ್ಲೂ ಇತ್ತು, ಮೆಕ್ಸಿಕೋದಲ್ಲೂ ಇದೆ. ಹೀಗಿರುವಾಗ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಯಾಕಿರಬಾರದು? ಅಲ್ಲಿ ವಾಸವಾಗಿರುವ ಜನಕ್ಕೆ ಯಾವುದು ಪಾಕಿಸ್ತಾನ ಯಾವುದು ಅಫ್ಘಾನಿಸ್ತಾನ ಎನ್ನುವ ಬಗ್ಗೆ ಅರಿವಿದೆ’ ಎಂದಿದ್ದಾರೆ.

ಪಾಕಿಸ್ತಾನ ಗೋಡೆ ನಿರ್ವಣಕ್ಕೆ ಈಗಾಗಲೇ ಸಿದ್ಧತೆ ನಡೆಸಿದೆ. ಪಾಕ್​ನ ಅಧಿಕಾರಿಗಳು ಅಲ್ಲಿ ವಾಸವಾಗಿರುವ ಜನರನ್ನು ಬೇರೆ ಪ್ರದೇಶಕ್ಕೆ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಸಮೀಕ್ಷೆಯನ್ನೂ ನಡೆಸಿದ್ದು ಈ ವೇಳೆ ನಡೆದ ಗಲಭೆಯಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ಗೋಡೆ ನಿರ್ವಣವನ್ನೇ ಗಮನದಲ್ಲಿರಿಸಿಕೊಂಡು ಪಾಕಿಸ್ತಾನ ಹೆಚ್ಚುವರಿಯಾಗಿ 100 ಬಾರ್ಡರ್ ಚೆಕ್​ಪೋಸ್ಟ್​ಗಳ ನಿರ್ವಣಕ್ಕೆ ಮುಂದಾಗಿದೆ. ಮತ್ತು ಗೋಡೆ ನಿರ್ಮಾಣ ಕಾರ್ಯದ ಮೇಲೆ ನಿಗಾ ಇರಿಸುವ ಉದ್ದೇಶದಿಂದ 30,000 ಸೈನಿಕರನ್ನು ನೇಮಿಸಿಕೊಳ್ಳುತ್ತಿದೆ. ಪಾಕಿಸ್ತಾನ ಇಷ್ಟೆಲ್ಲ ತಯಾರಿ ನಡೆಸಿಕೊಳ್ಳುತ್ತಿದ್ದರೂ ಗೋಡೆ ನಿರ್ಮಾಣ ಪೂರ್ಣಗೊಳ್ಳಲಿದೆಯೇ ಎನ್ನುವ ಅನುಮಾನವೂ ಹುಟ್ಟಿಕೊಂಡಿದೆ. ಯಾಕೆಂದರೆ ಪಾಕಿಸ್ತಾನ ದಶಕಗಳ ಹಿಂದೆಯೇ ಒಂದು ಬಾರಿ ಗಡಿಯುದ್ದಕ್ಕೂ ಬೇಲಿ ನಿರ್ವಣಕ್ಕೆ ಪ್ರಯತ್ನಿಸಿ ಸೋತಿತ್ತು. ಅಲ್ಲದೆ ಅಷ್ಟೊಂದು ದೀರ್ಘ ಗೋಡೆ ನಿರ್ವಣಕ್ಕೆ ಆಗಲಿರುವ ಖರ್ಚುವೆಚ್ಚಗಳನ್ನು ನಿಭಾಯಿಸಲು ಪಾಕ್ ಶಕ್ತವಾಗಿದೆಯೇ ಎನ್ನುವ ಅನುಮಾನವೂ ವ್ಯಕ್ತವಾಗಿವೆ.

(ಲೇಖಕರು ರಾಷ್ಟ್ರೀಯ ಉರ್ದು ವಿಕಾಸ ಪರಿಷದ್​ನ ಉಪಾಧ್ಯಕ್ಷರು ಮಧ್ಯಪ್ರಾಚ್ಯ, ಪಾಕಿಸ್ತಾನ ವಿದ್ಯಮಾನಗಳ ನುರಿತ ವಿಶ್ಲೇಷಕರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಬರಹಗಾರರು)

Leave a Reply

Your email address will not be published. Required fields are marked *