ಪಾಕ್​ಗೆ ಸೋಲುಣಿಸಿದ ಭಾರತ

ಅಜ್ಮಾನ್(ಯುಎಇ): ಮತ್ತೊಮ್ಮೆ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ ದೀಪಕ್ ಮಲಿಕ್ (79*ರನ್, 71 ಎಸೆತ, 8 ಬೌಂಡರಿ) ಅರ್ಧಶತಕದಾಟದ ನೆರವಿನಿಂದ ಹಾಲಿ ಚಾಂಪಿಯನ್ ಭಾರತ ತಂಡ 5ನೇ ಆವೃತ್ತಿಯ ಅಂಧರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಸತತ 2ನೇ ಗೆಲುವು ಸಾಧಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಹಾಗೂ ಆತಿಥೇಯ ಪಾಕಿಸ್ತಾನ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿತು.

ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ಭಾರತ ಟಾಸ್ ಗೆದ್ದು ಪಾಕಿಸ್ತಾನವನ್ನು ಮೊದಲು ಬ್ಯಾಟಿಂಗ್​ಗೆ ಇಳಿಸಿತು. ಪಾಕ್ ನಿಗದಿತ 40 ಓವರ್​ಗಳಲ್ಲಿ 8 ವಿಕೆಟ್​ಗೆ 282ರನ್ ದಾಖಲಿಸಿತು. ಪಾಕಿಸ್ತಾನಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ಮೊಹಮದ್ ಜಮೀಲ್ ಆಸರೆಯಾದರು. 91 ಎಸೆತಗಳಲ್ಲಿ 90 ರನ್ ಬಾರಿಸಿದ ಜಮೀಲ್ ಗಾಯದಿಂದ ಆಟಕ್ಕೆ ನಿವೃತ್ತಿ ಹೇಳಿ ಹೊರನಡೆದರು. ಪ್ರತಿಯಾಗಿ ಭಾರತ 35 ಓವರ್​ಗಳಲ್ಲಿ 3 ವಿಕೆಟ್​ಗೆ 283 ರನ್ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಭಾರತ ತಂಡ ಶನಿವಾರ ನಡೆಯಲಿರುವ ತನ್ನ 4ನೇ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.

ಪಾಕಿಸ್ತಾನ: 40 ಓವರ್​ಗಳಲ್ಲಿ 8 ವಿಕೆಟ್​ಗೆ 282(ಮೊಹಮದ್ ಜಮೀಲ್ 94, ನಿಸಾರ್ ಅಲಿ 62), ಭಾರತ: 35 ಓವರ್​ಗಳಲ್ಲಿ 3 ವಿಕೆಟ್​ಗೆ 283 (ದೀಪಕ್ ಮಲಿಕ್ 79*, ವೆಂಕಟೇಶ್ವರ್ 64). -ಏಜೆನ್ಸೀಸ್

ಗೆಲ್ಲಿಸಿದ ದೀಪಕ್

ಸವಾಲು ಬೆನ್ನಟ್ಟಿದ ಭಾರತ ತಂಡಕ್ಕೆ ಈ ಪಂದ್ಯದಲ್ಲೂ ದೀಪಕ್ ಮಲಿಕ್ ಆಸರೆಯಾದರು. ದೀಪಕ್ ಕಳೆದ ಪಂದ್ಯದಲ್ಲೂ ಭರ್ಜರಿ ಶತಕ ಸಿಡಿಸಿದ್ದರು. ಆರಂಭಿಕ ಪ್ರಕಾಶ್ ಜಯರಾಮಯ್ಯ(27) ತಂಡದ ಮೊತ್ತ 44 ಆಗಿದ್ದಾಗ ಹರೂನ್​ಗೆ ವಿಕೆಟ್ ಒಪ್ಪಿಸಿದರು. ಬೆನ್ನಲ್ಲೆ ಮತ್ತೊಂದು ಆಘಾತ ಕಂಡ ಭಾರತ 94 ರನ್​ಗೆ 2 ವಿಕೆಟ್ ಕಳೆದುಕೊಂಡಿತು. ಬಸಪ್ಪ 18 ರನ್​ಗೆ ಔಟಾದರು. ಈ ವೇಳೆ ಭಾರತದ ಗೆಲುವಿಗೆ 150 ಎಸೆತಗಳಲ್ಲಿ 180 ರನ್ ಅಗತ್ಯವಿತ್ತು. ಅರ್ಧಶತಕ ಬಾರಿಸಿದ್ದ ವೆಂಕಟೇಶ್ವರ್ ರಾವ್(64) ತಂಡದ ಮೊತ್ತ 179 ಆಗಿದ್ದಾಗ ನಿರ್ಗಮಿಸಿದರು. ಅಂತಿಮವಾಗಿ 4ನೇ ವಿಕೆಟ್​ಗೆ ಮುರಿಯದ 104 ರನ್​ಗಳ ಜತೆಯಾಟವಾಡಿದ ಕಳೆದ ಪಂದ್ಯದ ಹೀರೊ ದೀಪಕ್ ಹಾಗೂ ಅಜಯ್(47*) ಇನ್ನೂ 5 ಓವರ್ ಉಳಿದಿರುವಂತೆ ಗೆಲುವಿನ ಗುರಿ ತಲುಪಿಸಿದರು.

Leave a Reply

Your email address will not be published. Required fields are marked *