Wednesday, 14th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಪಾಕಿಸ್ತಾನವನ್ನು ಆ ರಾಷ್ಟ್ರೀಯರೇ ಇಷ್ಟಪಡುತ್ತಿಲ್ಲ, ಗೊತ್ತಾ…

Tuesday, 26.09.2017, 3:04 AM       No Comments

ರಾಷ್ಟ್ರವೆಂದು ಕರೆಸಿಕೊಳ್ಳುವ ಅರ್ಹತೆಯನ್ನೂ ಪಾಕಿಸ್ತಾನ ಕಳೆದುಕೊಂಡಿದೆ. ಅದು ಕೃತಕವಾಗಿ ನಿರ್ವಿುಸಲ್ಪಟ್ಟ ದೇಶ. ಹಾಗಾಗಿಯೇ, ವೇಗವಾಗಿ ಕುಸಿಯುತ್ತ ಸಾಗಿದೆ. ಪಾಕ್​ನೊಳಗೆ ಬಂಡಾಯದ ದನಿಗಳು ಆರ್ಭಟಿಸುತ್ತಿದ್ದು, ಕ್ರೌರ್ಯವನ್ನೇ ಹೊಂದಿರುವ ಆ ದೇಶದ ಬೇರುಗಳನ್ನು ಕಳಚಿಕೊಂಡು ಮುಕ್ತರಾಗುವ ಬಯಕೆ ಜನರಲ್ಲಿ ಹೆಚ್ಚುತ್ತಿದೆ.

 

ಪ್ರಪಂಚದ ಯಾವುದೇ ವ್ಯಕ್ತಿ ಆಗಿರಲಿ ಅವನ ಆಸೆ ಬಹುತೇಕ ಒಂದೇ ತೆರನಾಗಿರುತ್ತದೆ. ಅದೆಂದರೆ, ಜೀವಿತದ ಕೊನೆಯ ಅವಧಿಯನ್ನು ತನ್ನ ದೇಶದಲ್ಲಿಯೇ ಕಳೆಯಬೇಕು, ಎಷ್ಟೇ ಓಡಾಡಿದರೂ, ಅಲೆಮಾರಿಯಂತೆ ಅಲೆದರೂ ಕೊನೆಯುಸಿರನ್ನು ತನ್ನ ದೇಶದಲ್ಲಿಯೇ ಬಿಡಬೇಕು. ಇದು ಮನುಷ್ಯನ ಸ್ವಾಭಾವಿಕ ತುಡಿತವೂ ಹೌದು. ಏಕೆಂದರೆ ಮನುಷ್ಯ ತಾನಿರುವ ಸ್ಥಳದೊಂದಿಗೆ, ತನಗೆ ಗುರುತು, ಬದುಕು ಕೊಟ್ಟ ರಾಷ್ಟ್ರದೊಂದಿಗೆ ಭಾವಬೆಸುಗೆ ಹೊಂದಿರುತ್ತಾನೆ. ಪ್ರಪಂಚದ ಯಾವುದೇ ಬಡರಾಷ್ಟ್ರದ ವ್ಯಕ್ತಿಗೂ ಕೇಳಿ ‘ನಾನು ನನ್ನ ರಾಷ್ಟ್ರವನ್ನು ಪ್ರೀತಿಸುತ್ತೇನೆ ಹಾಗೂ ಇಲ್ಲೇ ಜೀವನ ಸಾಗಿಸಲು, ಕೊನೆಗೆ ಇಲ್ಲೇ ಮರಣ ಹೊಂದಲು ಬಯಸುತ್ತೇನೆ’ ಎನ್ನುತ್ತಾನೆ. ಭಾರತದಲ್ಲಂತೂ ರಾಷ್ಟ್ರಜೀವನ, ರಾಷ್ಟ್ರಧರ್ಮದ ಭಾವನೆಗಳು ಸದಾ ಜಾಗೃತವಾಗಿವೆ. ನಮ್ಮ ಸಂಸ್ಕೃತಿ ಈ ನೆಲವನ್ನು ತಾಯಿಯೆಂದು, ಅವಳೇ ಭಾರತ ಮಾತೆಯೆಂದು ಗೌರವಿಸುತ್ತದೆ. ಹಾಗಾಗಿಯೇ, ನಾವೆಲ್ಲ ಈ ತಾಯಿಯ ಮಕ್ಕಳು, ಇಡೀ ದೇಶ ಒಂದು ಕುಟುಂಬ ಎಂದು ಭಾವಿಸುತ್ತೇವೆ. ಆ ಸಾಮರಸ್ಯದಲ್ಲಿ ಬಾಳುತ್ತೇವೆ. ಇದೆಲ್ಲ ಈಗ ಯಾಕೆ ಹೇಳ್ತಾ ಇದ್ದೀರಿ ಅಂತ ಅಚ್ಚರಿಯಾಗಬೇಡಿ… ಜಗತ್ತಿನಲ್ಲಿ ಒಂದು ದೇಶ ಎಂಥದಿದೆಯೆಂದರೆ, ಅಲ್ಲಿನ ಜನರು ಆ ದೇಶವನ್ನು ತೊರೆಯಲು ಕಾತರರಾಗಿದ್ದಾರೆ, ಅಲ್ಲಿಂದ ಹೊರಹೋದರಷ್ಟೇ ನೆಮ್ಮದಿಯ ಜೀವನ ಕಂಡುಕೊಳ್ಳಲು ಸಾಧ್ಯ ಎಂದು ಹೇಳುತ್ತಿದ್ದಾರೆ. ಯಾವುದು ಆ ರಾಷ್ಟ್ರ ಎಂಬ ಕುತೂಹಲ ಕಾಡುತ್ತಿದೆಯೇ? ಬಿಡಿ, ಅದೇನು ಮಿಲಿಯನ್ ಡಾಲರ್ ಪ್ರಶ್ನೆಯೇನಲ್ಲ. ಭೂಮಿಯ ಮೇಲಿನ ನರಕ, ಉಗ್ರರ ಪಾಲಿನ ಸ್ವರ್ಗ, ಹಿಂಸೆಯ ತಾಣವೆಂದೇ ಕರೆಯಲ್ಪಡುವ ಪಾಕಿಸ್ತಾನದಲ್ಲಿ ಇಂಥ ಭಾವನೆಗಳು ಬಲವಾಗಿ ಬೇರೂರಿದ್ದು, ಅಲ್ಲಿನ ಜನ ರೋಸಿಹೋಗಿದ್ದಾರೆ.

ಮೊದಲಿನಿಂದಲೂ ವಿಪ್ಲವದ ಸ್ಥಿತಿಯಲ್ಲೇ ಬದುಕುತ್ತಿರುವ ಪಾಕಿಸ್ತಾನ ಈಚೀಚೆಗಂತೂ ಮತ್ತಷ್ಟು ಅಧ್ವಾನಗಳನ್ನು ಸೃಷ್ಟಿಸಿಕೊಂಡು, ದಯನೀಯ ಸ್ಥಿತಿ ತಲುಪಿದೆ. ಇತ್ತೀಚಿನ ಕೆಲ ಬೆಳವಣಿಗೆಗಳ ಮೇಲೆ ಹಾಗೇ ಸುಮ್ಮನೆ ಒಮ್ಮೆ ಕಣ್ಣಾಡಿಸಿ. ಪಾಕಿಸ್ತಾನ ಅಂತಾರಾಷ್ಟ್ರೀಯ ವಲಯದ ವಿಶ್ವಾಸವನ್ನು ವೇಗವಾಗಿ ಕಳೆದುಕೊಳ್ಳುತ್ತಿದೆ. ಅಮೆರಿಕದ ಡಾಲರ್​ನ ಧಿಮಾಕಿನ ಮೇಲೆ ಶಸ್ತ್ರಾಸ್ತ್ರಗಳನ್ನು ಪೇರಿಸಿಕೊಳ್ಳುತ್ತಿದ್ದ ಪಾಕ್​ಗೆ ಈಗ ಆರ್ಥಿಕ ನೆರವು ಕಡಿಮೆಯಾಗಿದೆ. ಅಷ್ಟೇ ಅಲ್ಲ, ಪಾಕ್​ನ್ನು ‘ಭಯೋತ್ಪಾದಕ ರಾಷ್ಟ್ರ’ ಎಂದು ಘೋಷಿಸಲು ಅಮೆರಿಕ ತಯಾರಿ ನಡೆಸುತ್ತಿದೆ. ಕಣ್ಮುಚ್ಚಿ ಪಾಕ್​ನ್ನು ನಂಬುತ್ತಿದ್ದ ಚೀನಾ ಕೂಡ ಈಗ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಹಲವು ಮುಸ್ಲಿಂ ರಾಷ್ಟ್ರಗಳೇ ಪಾಕ್ ಸಾಗುತ್ತಿರುವ ದಾರಿಯ ಬಗ್ಗೆ ಅತೃಪ್ತಿ ಹೊಂದಿವೆ. ಇನ್ನು, ಆಂತರಿಕ ಪರಿಸ್ಥಿತಿಯಂತೂ ಅಯೋಮಯವಾಗಿದೆ. ಹಿಂಸೆ, ಅಪರಾಧದ ಪ್ರಕರಣಗಳಿಗೆ ಕೊನೆಯೇ ಇಲ್ಲ ಎಂಬಂಥ ಸ್ಥಿತಿ. ಮತ್ತೊಂದು ಮುಖ್ಯ ಸಂಗತಿಯೆನೆಂದರೆ, ಭಯೋತ್ಪಾದನೆ ವಿಷಯ ಬಂದಾಗ ಪಾಕ್ ಸತ್ಯದ ತಲೆ ಮೇಲೆ ಹೊಡೆಯುವಂತೆ ವ್ಯವಸ್ಥಿತವಾಗಿ ಸುಳ್ಳನ್ನು ಹೆಣೆಯುತ್ತಿತ್ತು. ಆದರೆ, ಅದರ ಮುಖವಾಡಗಳು ಒಂದೊಂದಾಗಿಯೇ ಕಳಚಿ ಬೀಳುತ್ತಿದ್ದು, ಅಂತಾರಾಷ್ಟ್ರೀಯ ವಲಯಕ್ಕೆ ವಾಸ್ತವದ ಅರಿವಾಗುತ್ತಿದೆ. ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಭಾರತವನ್ನೇ ‘ಏಷ್ಯಾದಲ್ಲಿ ಭಯೋತ್ಪಾದನೆಯ ತಾಯಿ’ ಎಂದು ಈ ದೇಶ ಕರೆದಾಗ ತುಂಬ ಜನ ನಕ್ಕು ಸುಮ್ಮನಾಗಿಬಿಟ್ಟರಷ್ಟೇ.

ರಾಜಕೀಯ ಸ್ಥಿತಿಯೂ ಅಷ್ಟೇ. ಸಮರ್ಥ ನಾಯಕತ್ವದ ಕೊರತೆ ಆ ದೇಶಕ್ಕೆ ಅದೆಷ್ಟೋ ಅವಧಿಯಿಂದ ಕಾಡುತ್ತಿದೆ. ಸ್ವಜನ ಪಕ್ಷಪಾತ, ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಬೇರೆ ನಾಯಕರು ಬಿಡಿ, ಪ್ರಧಾನಿ ಸ್ಥಾನದಲ್ಲಿದ್ದ ನವಾಜ್ ಶರೀಫ್​ರೇ ಪನಾಮಾ ಪ್ರಕರಣದಲ್ಲಿ ಸಿಲುಕಿದ್ದಾರೆ. ಮಾಜಿ ರಾಷ್ಟ್ರಪತಿ ಪರ್ವೆಜ್ ಮುಷರಫ್ ಯಾವುದೇ ಸಮಯದಲ್ಲಿ ಜೈಲುಪಾಲಾಗುವ ಸಾಧ್ಯತೆ ಇದೆ. ಮತ್ತೊಂದೆಡೆ, ಸೇನೆ ದೇಶದ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ಳಲು ಹಪಹಪಿಸುತ್ತಿದೆ. ಹಾಗೇನಾದರೂ ಆದಲ್ಲಿ, ಪಾಕ್​ನ ಸ್ಥಿತಿ ಮತ್ತಷ್ಟು ಶೋಚನೀಯವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆರ್ಥಿಕತೆ, ಕೈಗಾರಿಕೆಗಳು ಸೊರಗಿವೆ. ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಆಂತರಿಕ ಕಲಹ, ಹಿಂಸೆಯ ಪ್ರಕರಣಗಳು ಕಾನೂನು-ಸುವ್ಯವಸ್ಥೆಯನ್ನು ಹಾಳುಗೆಡವಿವೆ. ಇದರಿಂದ ಯಾರೂ ಬಂಡವಾಳ ಹೂಡಲು ಮುಂದೆ ಬರುತ್ತಿಲ್ಲ, ಪ್ರವಾಸೋದ್ಯಮಕ್ಕಂತೂ ವರ್ತಮಾನವೂ ಇಲ್ಲ, ಭವಿಷ್ಯವೂ ಇಲ್ಲ.

ಈ ಸ್ಥಿತಿಯಲ್ಲಿ ನಾಗರಿಕರ ಪಾಡೇನು? ಯಾರೇ ಆಗಲಿ ಇಂಥ ಸ್ಥಿತಿಯಲ್ಲಿ ಬದುಕು ಕಟ್ಟಿಕೊಳ್ಳಲು, ಭವಿಷ್ಯ ಭದ್ರವಾಗಿಸಿಕೊಳ್ಳಲು ಹೇಗೆ ಸಾಧ್ಯ ಹೇಳಿ? ಅದಕ್ಕೆಂದೆ, ಪಾಕ್​ನಲ್ಲಿ ಬಂಡಾಯ, ಹೋರಾಟದ ದನಿಗಳು ಪ್ರತ್ಯೇಕತೆಯನ್ನು ಬಯಸುತ್ತಿವೆ. ಪಾಕ್​ನಿಂದ ಬೇರ್ಪಟ್ಟು, ಪ್ರತ್ಯೇಕವಾದ ರಾಷ್ಟ್ರ ರೂಪಿಸಿಕೊಂಡರೆ ಮಾತ್ರ ಮುಂದಿನ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಪ್ರತಿಪಾದಿಸುತ್ತಿದ್ದಾರೆ. ಮುಂಚೆ, ಎಲ್ಲೋ ಕೆಲವೆಡೆ ಪ್ರತ್ಯೇಕ ರಾಷ್ಟ್ರದ ಮಾತುಗಳು ಕೇಳಿಬರುತ್ತಿದ್ದವು. ಆದರೆ, ದಿನದಿಂದ ದಿನಕ್ಕೆ ಪಾಕ್​ನ ಸ್ಥಿತಿ ಪಾತಾಳಕ್ಕೆ ತಲುಪುತ್ತಿದ್ದಂತೆ, ಇಂಥ ದನಿಗಳು ಜೋರಾಗುತ್ತಿವೆ.

ಈ ಮಧ್ಯೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪತ್ರಿಕೆ ‘ದೈನಿಕ ಮುಜಾದಲ್ವಾರ್’ ಸಮೀಕ್ಷೆಯೊಂದನ್ನು ನಡೆಸಿ, ಪ್ರಕಟಿಸಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ, ಮಾತ್ರವಲ್ಲ ಅಲ್ಲೋಲ-ಕಲ್ಲೋಲದಂಥ ಸ್ಥಿತಿಯನ್ನು ಸೃಷ್ಟಿಸಿದೆ. ಪತ್ರಿಕೆ ಹಲವು ಪ್ರಶ್ನೆಗಳ ಮುಖೇನ ಅಭಿಪ್ರಾಯ ಸಂಗ್ರಹಿಸಿದೆ. ಇದರಂತೆ ಶೇಕಡ 74ರಷ್ಟು ಪಾಕಿಸ್ತಾನಿಯರು ಆ ದೇಶದಲ್ಲಿ ಇರಲು ಇಷ್ಟಪಡುತ್ತಿಲ್ಲವಂತೆ! ಹಾಗಾಗಿ, ಪಾಕ್ ಇಬ್ಭಾಗವಾಗಲಿದೆ ಎಂದು ಬರೆದಿರುವ ಪತ್ರಿಕೆ ಮತ್ತಷ್ಟು ಕುತೂಹಲಕಾರಿ ಸಂಗತಿಗಳನ್ನು ಹೊರಗೆಡವಿದೆ. ಸಮೀಕ್ಷೆಯಲ್ಲಿ, ಪಾಕ್ ಆಕ್ರಮಿತ ಪ್ರದೇಶಕ್ಕೆ ಸ್ವಾತಂತ್ರ್ಯ ನೀಡಬೇಕೆ? ಎಂಬ ಪ್ರಶ್ನೆಗೆ-ಬಹುತೇಕರು ‘ಹೌದು, ಸ್ವಾತಂತ್ರ್ಯ ನೀಡಬೇಕು ಹಾಗೂ ಆ ಭಾಗದ ಜನರು ಮುಕ್ತವಾಗಿ ಜೀವಿಸಲು ಅವಕಾಶ ಮಾಡಿಕೊಡಬೇಕು’ ಎಂದಿದ್ದಾರೆ.

ಶೇ.74ರಷ್ಟು ಪಾಕಿಸ್ತಾನಿಯರು ದೇಶ ತೊರೆಯುವ ಮನಸ್ಥಿತಿಗೆ ಬಂದಿರುವುದಕ್ಕೆ ಕಾರಣಗಳನ್ನು ಪಟ್ಟಿ ಮಾಡಿ, ವಿಶ್ಲೇಷಣೆ ಮಾಡಿರುವ ‘ದೈನಿಕ ಮುಜಾದಲ್ವಾರ್’ ಪ್ರಾಂತ್ಯ-ಪ್ರಾಂತ್ಯಗಳ ನಡುವೆ ಭೇದ, ಅಸಮಾನತೆ, ಅಶಾಂತಿ, ಭಯೋತ್ಪಾದಕರ ಕ್ರೌರ್ಯ, ಆರ್ಥಿಕ ದುಸ್ಥಿತಿ, ಅಭಿವೃದ್ಧಿ ಮರೀಚಿಕೆ ಆಗಿರುವುದು ಸೇರಿದಂತೆ ಒಟ್ಟಾರೆ ಯಾವುದೇ ಆಶಾವಾದ ಆ ರಾಷ್ಟ್ರದ ಮುಂದೆ ಇರದಿರುವುದರಿಂದ ಪ್ರತ್ಯೇಕವಾಗಿ ಹೋಗುವುದೇ ವಾಸಿ ಎಂಬ ಮನಸ್ಥಿತಿಗೆ ಬಂದಿದ್ದಾರೆ. ಹಾಗೆಂದ ಮಾತ್ರಕ್ಕೆ, ಈ ಸತ್ಯ ಈಗಷ್ಟೇ ಗೊತ್ತಾಗಿದೆ ಎಂದೇನಲ್ಲ. ಎಪ್ಪತ್ತು ವರ್ಷಗಳ ಹಿಂದೆಯೇ ಪಾಕ್ ಅಸ್ತಿತ್ವಕ್ಕೆ ಬಂದಾಗ ಇದೊಂದು ಕೃತಕ ರಾಷ್ಟ್ರ ಎಂದು ದೃಢಪಟ್ಟಿತ್ತು. ಧರ್ಮದ ಹೆಸರಲ್ಲಿ ಪ್ರತ್ಯೇಕವಾಗಿ ಸ್ಥಾಪನೆಗೊಂಡ ಆ ರಾಷ್ಟ್ರ ಸಾಧಿಸಿದ್ದಾದರೂ ಏನು? ವಿಭಜನೆಯ ವೇಳೆ ಲಕ್ಷಾಂತರ ಜನರ ಪ್ರಾಣಗಳು ಆಹುತಿಯಾದವು, ಮನೆಮಠ, ಆಸ್ತಿಪಾಸ್ತಿ ಹಾಳಾದವು. ಬದುಕಿಕೊಂಡವರ ಬದುಕೂ ಕಣ್ಣೀರಿನಲ್ಲಿ ಕಳೆದುಹೋಯಿತು. ಪಾಕ್ ಸ್ಥಾಪನೆ ವಿಫಲ ಪ್ರಯೋಗ ಎಂಬುದು ಬಾಂಗ್ಲಾದೇಶದ ಉದಯದಿಂದ ದೃಢಪಟ್ಟಿತು. ಸ್ಥಾಪನೆಗೊಂಡ ಎರಡೂವರೆ ದಶಕಗಳ ಮುಂಚೆಯೇ ಪಾಕ್ ತುಂಡಾಯಿತು.

ಬಲೂಚಿಸ್ತಾನ, ಸಿಂಧ್ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸ್ವಾತಂತ್ರ್ಯದ ಕೂಗು ದಿನದಿಂದ ದಿನಕ್ಕೆ ಪ್ರಬಲವಾಗುತ್ತಲೇ ಸಾಗಿರುವುದು ಗೊತ್ತಿರುವಂಥದ್ದೇ. ಆದರೆ, ಇದೇ ಸತ್ಯವನ್ನು ಆಕ್ರಮಕ ಶೈಲಿಯಲ್ಲಿ ಹೇಳಿದ್ದಕ್ಕಾಗಿ ‘ದೈನಿಕ ಮುಜಾದಲ್ವಾರ್’ (ರಾವಲ್​ಕೋಟ್​ನಿಂದ ಪ್ರಕಟವಾಗುತ್ತಿತ್ತು) ಪತ್ರಿಕೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಪಾಕ್ ಸರ್ಕಾರ ಸಂಪಾದಕರ ವಿರುದ್ಧ ಪ್ರಕರಣ ದಾಖಲಿಸಿದ್ದು, ಪತ್ರಿಕೆಯ ಕಚೇರಿಗೆ ಬೀಗಮುದ್ರೆ ಜಡಿದಿದೆ. ಪತ್ರಿಕೆ ಕೂಡ ಕಾನೂನು ಹೋರಾಟ ಮುಂದುವರಿಸಿದೆ. ಈ ಮಧ್ಯೆ, ಬಲೂಚಿಸ್ತಾನ ಮತ್ತು ಸಿಂಧ್ ಪ್ರಾಂತ್ಯದಲ್ಲಿ ಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚುತ್ತಲೇ ಇದೆ. ಅಲ್ಲಿನ ಜನರು ಆರೋಪಿಸುವಂತೆ ಸರ್ಕಾರ ಪಂಜಾಬ್ ಪ್ರಾಂತ್ಯವನ್ನು ಮಾತ್ರ ಪಾಕಿಸ್ತಾನ ಎಂದು ಭಾವಿಸಿದೆ. ಉಳಿದ ಪ್ರಾಂತ್ಯಗಳತ್ತ ಅದು ಕಿಂಚಿತ್ತೂ ಗಮನ ಹರಿಸುತ್ತಿಲ್ಲ. ಎಲ್ಲ ಸೌಲಭ್ಯಗಳು ಪಂಜಾಬ್​ಗೆ ಮಾತ್ರ ಸೀಮಿತವಾಗಿವೆ. ಸರ್ಕಾರದ ಬಜೆಟ್​ನ ಶೇ.70-80ರಷ್ಟು ಭಾಗವನ್ನು ಪಂಜಾಬೊಂದಕ್ಕೆ ಖರ್ಚು ಮಾಡಲಾಗುತ್ತಿದೆ. ರಾಜಕೀಯ ಪ್ರಾತಿನಿಧ್ಯ, ವರ್ಚಸ್ಸು ಕೂಡ ಇದೇ ಪ್ರಾಂತ್ಯಕ್ಕೆ ಸಿಕ್ಕಿದೆ. ಬಾಂಗ್ಲಾದೇಶ ಹುಟ್ಟಿಕೊಂಡ ಬಳಿಕವೂ ಪಾಕ್ ಸರ್ಕಾರ ಬುದ್ಧಿ ಕಲಿತಿಲ್ಲ. ಎಲ್ಲ ಪ್ರದೇಶ, ಪ್ರಾಂತ್ಯಗಳ ಸಮಾನ ಅಭಿವೃದ್ಧಿಗೆ ಯೋಜನೆ, ಕಾರ್ಯಕ್ರಮ ರೂಪಿಸಿಲ್ಲ. ಹಾಗಾಗಿ, ಪೂರ್ವ ಪಾಕಿಸ್ತಾನದಂತೆ, ಪಶ್ಚಿಮ ಪಾಕಿಸ್ತಾನವೂ ವಿಭಜನೆಗೊಳ್ಳುವ ದಿನಗಳು ದೂರವಿಲ್ಲ ಎಂದೆನಿಸುತ್ತದೆ. ಮಾತ್ರವಲ್ಲ, ಭಾರತದ ಅಖಂಡ ಭಾರತದ ಆಶಯವೂ ನೇರವೇರುವ ಕಾಲ ಸಮೀಪಿಸಿದಂತಿದೆ.

ಪಾಕ್​ನ ಮಾಧ್ಯಮಗಳು ಕೂಡ ಆ ದೇಶದೊಳಗಿನ ಸಂಕಟಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಪರಿಸ್ಥಿತಿ ಸುಧಾರಿಸುವಂತೆ ಸರ್ಕಾರಕ್ಕೆ ಮೊರೆ ಇಟ್ಟಿವೆ. ಆದರೆ ಇದ್ಯಾವುದನ್ನು ಕೇಳಿಸಿಕೊಳ್ಳುವ, ಅರ್ಥೈಸಿಕೊಳ್ಳುವ ಸ್ಥಿತಿಯಲ್ಲಿ ಅಲ್ಲಿನ ಸರ್ಕಾರ ಇಲ್ಲ ಎಂಬುದು ಸ್ಪಷ್ಟ. ಪಾಕ್ ವಿಭಜನೆಗೊಂಡರೆ ಅದರಿಂದ ಭಾರತಕ್ಕಂತೂ ಲಾಭವೇ. ಏಕೆಂದರೆ, ಅಲ್ಲಿ ಪ್ರತ್ಯೇಕತೆ ಬಯಸುತ್ತಿರುವವರು ಭಾರತದಂತೆ ಶಾಂತಿ, ಸೌಹಾರ್ದದ ಬದುಕನ್ನು ಬಯಸುತ್ತಿದ್ದಾರೆ.

(ಲೇಖಕರು ರಾಷ್ಟ್ರೀಯ ಉರ್ದು ವಿಕಾಸ ಪರಿಷದ್​ನ ಉಪಾಧ್ಯಕ್ಷರು ಮಧ್ಯಪ್ರಾಚ್ಯ, ಪಾಕಿಸ್ತಾನ ವಿದ್ಯಮಾನಗಳ ನುರಿತ ವಿಶ್ಲೇಷಕರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಬರಹಗಾರರು)

Leave a Reply

Your email address will not be published. Required fields are marked *

Back To Top