Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಪಾಕಿಸ್ತಾನಕ್ಕೆ ದಿಟ್ಟ ಉತ್ತರ

Tuesday, 16.01.2018, 3:03 AM       No Comments

ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ಲತ್ತೆಯ ಪೆಟ್ಟು’ ಎಂಬ ಗಾದೆಮಾತು ಪಾಕಿಸ್ತಾನಕ್ಕೆ ಸರಿಯಾಗಿ ಅನ್ವಯವಾಗುತ್ತದೆ. ಜಮ್ಮು ಕಾಶ್ಮೀರದ ಪೂಂಛ್ ವಲಯದಲ್ಲಿ ಅಪ್ರಚೋದಿತ ದಾಳಿ ನಡೆಸಿದ ಪಾಕಿಸ್ತಾನ ಸೇನೆಯ ಮೇಲೆ ಪ್ರತಿದಾಳಿ ನಡೆಸಿದ ಭಾರತ ಸೇನೆ ಏಳು ಸೈನಿಕರು ಮತ್ತು ಗಡಿ ನುಸುಳಲು ಪ್ರಯತ್ನಿಸುತ್ತಿದ್ದ ಆರು ಉಗ್ರರನ್ನು ಹೊಡೆದುರುಳಿಸಿದೆ. ಎಪ್ಪತ್ತನೇ ಸೇನಾ ದಿನಾಚರಣೆ ಸಂದರ್ಭದಲ್ಲಿ ಪಾಕಿಸ್ತಾನದ ಕುತಂತ್ರಕ್ಕೆ ತಕ್ಕ ಪ್ರತ್ಯುತ್ತರವನ್ನೇ ಭಾರತೀಯ ಸೇನೆ ನೀಡಿದೆ.

ಮೆಂಧರ್ ಸೆಕ್ಟರ್​ನ ಗಡಿ ನಿಯಂತ್ರಣ ರೇಖೆ ಸಮೀಪ ಮಂಗಳವಾರ ನಸುಕಿನ ವೇಳೆ ಪಾಕಿಸ್ತಾನ ಸೇನೆ ಭಾರತೀಯ ಸೇನೆಯ ಔಟ್​ಪೋಸ್ಟ್ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತು. ಕೂಡಲೇ ಭಾರತ ಸೇನೆ ತೀಕ್ಷ್ಣ ಪ್ರತಿದಾಳಿ ನಡೆಸಿದ್ದರ ಪರಿಣಾಮ ಪಾಕಿಸ್ತಾನದ ಏಳು ಸೈನಿಕರು ಹತರಾಗಿದ್ದಾರೆ. ಶನಿವಾರ ರಾಜೌರಿಯಲ್ಲಿ ಪಾಕ್ ಸೇನೆ ನಡೆಸಿದ್ದ ದಾಳಿಗೆ ಮಹಾರಾಷ್ಟ್ರದ ಯೋಧ ಹುತಾತ್ಮರಾಗಿದ್ದರು. ಈಗ ಅದಕ್ಕೆ ಪ್ರತೀಕಾರ ತೀರಿಸಿಕೊಂಡಂತಾಗಿದೆ. ಇದಕ್ಕೂ ಮುನ್ನ ವರ್ಷದ ಆರಂಭದಲ್ಲಿ ಸಾಂಬಾ ಸೆಕ್ಟರ್​ನಲ್ಲಿ ಪಾಕ್ ಸೇನೆ ನಡೆಸಿದ ದಾಳಿಗೆ ಬಿಎಸ್​ಎಫ್ ಯೋಧರೊಬ್ಬರು ಜನ್ಮದಿನದಂದೇ ಹುತಾತ್ಮರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಜ.3ರಂದು 10 ಪಾಕ್ ಸೈನಿಕರನ್ನು ಹೊಡೆದುರುಳಿಸಿತ್ತು.

ಭಾರತ ತಾನಾಗಿ ಕಾಲ್ಕೆರೆದುಕೊಂಡು ಯಾವುದೇ ದೇಶದ ಮೇಲೆ ಸಮರ ಸಾರಲು ಹೋದ ಇತಿಹಾಸವಿಲ್ಲ. ಆದರೆ, ಪಾಕಿಸ್ತಾನ ರಚನೆಯಾದಂದಿನಿಂದಲೂ ಭಾರತದ ಜತೆಗೆ ಗಡಿ ಕಿರಿಕಿರಿ ಮಾಡುತ್ತಲೇ ಇದೆ. ಅಲ್ಲದೆ, ಆಂತರಿಕ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಮೂಲಕ ಭಾರತದಲ್ಲಿ ಅಶಾಂತಿ ವಾತಾವರಣ ನಿರ್ವಿುಸಲು ಪ್ರಯತ್ನಿಸುತ್ತಲೇ ಇದೆ. ಭಾರತ ಸಹನೆಯಿಂದಲೇ ಎಲ್ಲವನ್ನೂ ತಾಳಿಕೊಳ್ಳುತ್ತಲೇ ಬಂದಿದೆ. ಈಗ ಒಂದೆರಡು ವರ್ಷದಿಂದೀಚೆಗೆ ಭಾರತವೂ ಆಕ್ರಮಣಕಾರಿ ನೀತಿಯ ಮೊರೆ ಹೋಗಿದ್ದು, ಪಾಕಿಸ್ತಾನದ ಕಡೆಯಿಂದಾಗುವ ಪ್ರತಿದಾಳಿಗೂ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿದೆ. ಗಡಿಯಲ್ಲಿ ಉಗ್ರರ ನುಸುಳುವಿಕೆ ತಡೆಗೆ ಕಠಿಣ ಕ್ರಮದ ಜತೆಗೆ, ಜಮ್ಮು ಕಾಶ್ಮೀರದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುತ್ತಿದ್ದ ಪ್ರತ್ಯೇಕತಾವಾದಿಗಳ ವಿರುದ್ಧವೂ ಹಲವು ಆಯಾಮದ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಇದರಲ್ಲಿ ಪ್ರತ್ಯೇಕತಾವಾದಿಗಳಿಗೆ ಪಾಕಿಸ್ತಾನದಿಂದ ಲಭ್ಯವಾಗುತ್ತಿದ್ದ ಹಣಕಾಸಿನ ನೆರವು ಪ್ರಕರಣವನ್ನು ಎನ್​ಐಎಗೆ ವಹಿಸಿರುವುದು ಒಂದೆಡೆಯಾದರೆ, ಕಲ್ಲೆಸೆತ ಪ್ರಕರಣಗಳನ್ನೂ ಗಂಭೀರವಾಗಿ ತೆಗೆದುಕೊಂಡಿದೆ. ಕಳ್ಳನೋಟು ರವಾನಿಸಿ ಭಾರತದ ಅರ್ಥವ್ಯವಸ್ಥೆ ಹದಗೆಡುವಂತೆ ಮಾಡುತ್ತಿದ್ದ ಕಾರಣ, ಕಾಳಧನದ ಪರ್ಯಾಯ ಅರ್ಥವ್ಯವಸ್ಥೆಗೆ ಅಂಕುಶ ಹಾಕಲು ನೋಟು ನಿಷೇಧದ ಕ್ರಮವನ್ನೂ ಸರ್ಕಾರ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇವುಗಳ ಒಟ್ಟಾರೆ ಪರಿಣಾಮ ಪಾಕಿಸ್ತಾನದ ಮೇಲಾಗಿದ್ದು, ಅದು ಕಂಗಾಲಾಗಿರುವಂತೆ ಕಾಣುತ್ತಿದೆ. ಇಷ್ಟಾಗ್ಯೂ, ಭಾರತ ರಾಜತಾಂತ್ರಿಕ ಮಾತುಕತೆಗೆ ಮುಕ್ತ ಅವಕಾಶವನ್ನು ತೆರೆದಿಟ್ಟುಕೊಂಡಿದೆ. ಆದರೆ, ಚೀನಾದ ಬೆಂಬಲವನ್ನು ಪಡೆದುಕೊಂಡು ವಾಸ್ತವವನ್ನು ನಿರ್ಲಕ್ಷಿಸುತ್ತಿರುವ ಪಾಕಿಸ್ತಾನ ಈ ವಿಷಯದತ್ತ ಹೆಚ್ಚು ಗಮನಹರಿಸದೇ ತನ್ನ ಹಳೇ ಚಾಳಿಯನ್ನೇ ಮುಂದುವರಿಸಿದೆ. ಹೀಗಾಗಿ ಪಾಕಿಸ್ತಾನಕ್ಕೆ ಅದರದ್ದೇ ಧಾಟಿ ಮತ್ತು ಭಾಷೆಯಲ್ಲಿ ಉತ್ತರಿಸುವುದು ಭಾರತಕ್ಕೆ ಅನಿವಾರ್ಯವಾಗಿದೆ.

Leave a Reply

Your email address will not be published. Required fields are marked *

Back To Top