ಪಾಂಡ್ಯ ಪ್ರಕರಣ ಶೀಘ್ರ ಇತ್ಯರ್ಥ

ಮುಂಬೈ: ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿರುವ ಹಾರ್ದಿಕ್ ಪಾಂಡ್ಯರನ್ನು ವಿಚಾರಣೆಗೆ ಒಳಪಡಿಸಿ ಪ್ರಕರಣವನ್ನು ಶೀಘ್ರ ಇತ್ಯರ್ಥ ಗೊಳಿಸುವಂತೆ ಮುಂಬೈ ಇಂಡಿಯನ್ಸ್ ತಂಡ ಬಿಸಿಸಿಐ ಮೇಲೆ ಒತ್ತಡ ಹೇರುತ್ತಿದೆ ಎಂದು ವರದಿಯಾಗಿದೆ. ಆದರೆ ಮುಂಬೈ ಫ್ರಾಂಚೈಸಿ ಇದನ್ನು ನಿರಾಕರಿಸಿದೆ. ಹಾರ್ದಿಕ್ 2015ರಿಂದ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರರಾಗಿದ್ದು, ಅವರೊಂದಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರರಾಗಿರುವ ಕನ್ನಡಿಗ ಕೆಎಲ್ ರಾಹುಲ್ ಕೂಡ ಪ್ರಕರಣದಲ್ಲಿ ಸಿಲುಕಿದ್ದಾರೆ. ಇವರಿಬ್ಬರೂ ಈಗಾಗಲೆ ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿ ತಪ್ಪಿಸಿಕೊಂಡಿದ್ದು, ನ್ಯೂಜಿಲೆಂಡ್ ಪ್ರವಾಸದ ಸೀಮಿತ ಓವರ್ ಕ್ರಿಕೆಟ್ ಸರಣಿಗೂ ಬಹುತೇಕ ಅಲಭ್ಯರೆನಿಸಿದ್ದಾರೆ. ಇದಲ್ಲದೆ ಮುಂಬರುವ ಐಪಿಎಲ್​ಗೂ ಇವರಿಬ್ಬರ ಲಭ್ಯತೆ ಗೊಂದಲದಲ್ಲಿರುವುದು ಫ್ರಾಂಚೈಸಿ ಈ ರೀತಿ ಒತ್ತಡ ಹೇರುವುದಕ್ಕೆ ಕಾರಣ ಎನ್ನಲಾಗಿದೆ. ಆದರೆ, ಮುಂಬೈ ಫ್ರಾಂಚೈಸಿ ಒಡೆತನ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಸಿಇಒ ಸುಂದರ್ ರಾಮನ್, ನಮ್ಮ ತಂಡಕ್ಕೆ ಈ ಪ್ರಕರಣದಲ್ಲಿ ಯಾವ ಸಂಬಂಧವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

25ಕ್ಕೆ ಸುಪ್ರೀಂ ವಿಚಾರಣೆ: ಪಾಂಡ್ಯ-ರಾಹುಲ್ ಪ್ರಕರಣದ ತನಿಖೆಗೆ ಶೀಘ್ರದಲ್ಲೇ ಒಂಬುಡ್ಸ್​ಮನ್ ನೇಮಿಸಬೇಕೆಂದು ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಈಗಾಗಲೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಬಗ್ಗೆ ಜನವರಿ 25ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ಆಮಿಕಸ್ ಕ್ಯೂರಿ ಬದಲಾದ ಕಾರಣ ಕಳೆದ ವಾರ ವಿಚಾರಣೆ ಮುಂದೂಡಲ್ಪಟ್ಟಿತ್ತು. -ಏಜೆನ್ಸೀಸ್

Leave a Reply

Your email address will not be published. Required fields are marked *